ಮುಖ್ಯಮಂತ್ರಿಗಳಿಂದ ಮತ್ತೆ ಗ್ರಾಮ ವಾಸ್ತವ್ಯ !
- by Suddi Team
- June 2, 2019
- 65 Views
 
                                                          ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರ ಜನಪ್ರಿಯ ಕಾರ್ಯಕ್ರಮ ಗ್ರಾಮ ವಾಸ್ತವ್ಯವನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ. ಮತ್ತಷ್ಟು ವಿಭಿನ್ನವಾಗಿ, ಇನ್ನಷ್ಟು ಜನರಿಗೆ ಹತ್ತಿರವಾಗುವಂತೆ ಈ ಭಾರಿ ಗ್ರಾಮ ವಾಸ್ತವ್ಯ ಕಾರ್ಕ್ರಮವನ್ನು ಜಾರಿಗೆ ತರಲಾಗುತ್ತಿದೆ.
ಗ್ರಾಮ ವಾಸ್ತವ್ಯದ ಹಿನ್ನೆಲೆ: ಕುಮಾರಸ್ವಾಮಿಯವರ ಮೊತ್ತಮೊದಲ ಗ್ರಾಮವಾಸ್ತವ್ಯ ಅಥಣಿ ತಾಲೂಕಿನ ಪಿ.ಕೆ ನಾಗನೂರೆಂಬ ಹಳ್ಳಿಯಿಂದ ಆರಂಭವಾಯಿತು. ಕೃಷ್ಣೆಯಲ್ಲಿ ಪ್ರವಾಹ ಬಂದಾಗ ಪರಿಸ್ಥಿತಿ ಅವಲೋಕಿಸಲು ತೆರಳಿದ ಮುಖ್ಯಮಂತ್ರಿಗಳಿಗೆ ಸಂಜೆ ಆರು ಗಂಟೆಗೆ ಬೆಳಗಾವಿಗೆ ಹೊರಡಲು ಹೆಲಿಕಾಪ್ಟರ್ ಹೊರಡಿಸಿ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಅವಸರಿಸುತ್ತಿದ್ದರು.. ಮುಖ್ಯಮಂತ್ರಿಗಳು ಕಾರಣ ಕೇಳಿದಾಗ ಇಲ್ಲೆಲ್ಲೂ ತಂಗಲು ಸ್ಥಳವಿಲ್ಲವಾದ್ದರಿಂದ ಬೆಳಗಾವಿಗೆ ಹೊರಡುವುದು ಅನಿವಾರ್ಯವೆಂದರು. ಆಗ ಮುಖ್ಯಮಂತ್ರಿಗಳು ಇಲ್ಲೇ ಹತ್ತಿರ ಯಾರ ಮನೆಯಲ್ಲಾದರೂ ತಂಗುವ ಎಂದು ಪ್ರತಿಕ್ರಿಯಿಸಿದರು.
ಸ್ಥಳದಲ್ಲೇ ಉಪಸ್ಥಿತರಿದ್ದ ಶಾಸಕರು ನಾಗನೂರಿನಲ್ಲೊಂದು ಮಠದಲ್ಲಿ ತಂಗಲು ಅವಕಾಶವಿರುವುದಾಗಿ ಹೇಳಿದರು. ಬಳಿಕ ನೆರೆ ಬಂದ ಕೃಷ್ಣೆಯನ್ನು ಮೂರು ಟ್ರ್ಯಾಕ್ಟರ್ಗಳಲ್ಲಿ ದಾಟಿ ನಾಗನೂರಿಗೆ ಬಂದು ಮಠದಲ್ಲಿ ವಾಸ್ತವ್ಯ ಮಾಡಿದ್ದು ಮುಖ್ಯಮಂತ್ರಿಗಳ ಮೊದಲ ಗ್ರಾಮ ವಾಸ್ತವ್ಯ. ಅಂದು ಊರ ಜನರೊಂದಿಗೆ ಇದ್ದು ಅಲ್ಲಿನವರೊಂದಿಗೆ ಬೆರೆತು ಅಲ್ಲಿನ ಜನರ ಕಷ್ಟಸುಖಗಳ ಪರಿಚಯವನ್ನು ಮುಖ್ಯಮಂತ್ರಿಗಳು ಮಾಡಿಕೊಂಡದ್ದು ಇತಿಹಾಸ.
ಮುಖ್ಯಮಂತ್ರಿಗಳು ತಮ್ಮ 20 ತಿಂಗಳ ಆಡಳಿತಾವಧಿಯಲ್ಲಿ 47 ಗ್ರಾಮ ವಾಸ್ತವ್ಯ ಮಾಡಿದ್ದಾರೆ.
ಹೆಚ್ಐವಿ ಪೀಡಿತರ ಮನೆಯಲ್ಲಿ ವಾಸ್ತವ್ಯ- ರಿಚರ್ಡ್ ಗೇರ್ ಮೆಚ್ಚುಗೆ: ನಂತರದ ದಿನಗಳಲ್ಲಿ ವಿಜಯಪುರದ ಎಚ್ ಐ ವಿ ಪೀಡಿತರೊಬ್ಬರ ಮನೆಯನ್ನು ಆರಿಸಿಕೊಂಡು, ಎಚ್ ಐ ವಿ ಪೀಡಿತರ ಕುರಿತ ಸಮಾಜದ ತಪ್ಪು ನಂಬಿಕೆಗಳನ್ನು ದೂರ ಮಾಡಿದರು. ಈ ಘಟನೆಯನ್ನು ಓದಿದ ಹಾಲಿವುಡ್ ನಟ, ಎಚ್ ಐವಿ ಜಾಗೃತಿ ಮೂಡಿಸುವ ರಾಯಭಾರಿಯೂ ಆಗಿದ್ದ ರಿಚರ್ಡ್ ಗೇರ್ ಅವರು ಈ ಘಟನೆಯಿಂದ ಪ್ರಭಾವಿತರಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ಗ್ರಾಮ ವಾಸ್ತವ್ಯದ ಅಪರೂಪದ ಅನುಭವಗಳಲ್ಲೊಂದಾಗಿ ದಾಖಲಾಯಿತು.
ತಮ್ಮ ಆಡಳಿತಾವಧಿಯ ಅತ್ಯುತ್ತಮ ಅನುಭವಗಳು ಗ್ರಾಮ ವಾಸ್ತವ್ಯದಿಂದ ದೊರೆಯಿತಲ್ಲದೆ ಹಲವು ಯೋಜನೆಗಳನ್ನು ರೂಪಿಸಲು ಪ್ರೇರಣೆಯೂ ದೊರೆತಿದ್ದು ಗ್ರಾಮ ವಾಸ್ತವ್ಯದಿಂದಲೇ ಎಂಬುದು ಮುಖ್ಯಮಂತ್ರಿಗಳ ಅನುಭವ.
ಕಾರ್ಯಕ್ರಮ ರೂಪಿಸಲು ಗ್ರಾಮ ವಾಸ್ತವ್ಯ ನೆರವು: ಗ್ರಾಮ ವಾಸ್ತವ್ಯ ಸುಮಾರು ಸಾವಿರದಷ್ಟು ಪ್ರೌಢಶಾಲೆಗಳು, ಸುಮಾರು 500 ರಷ್ಟು ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆಗೆ ಕಾರಣವಾಯಿತು.
ಸಾಲಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ, ಅಂಗವಿಕಲರಿಗೆ ಮಾಸಾಶನ ಸೌಲಭ್ಯಗಳು ಗ್ರಾಮವಾಸ್ತವ್ಯದ ‘ಕೊಡುಗೆ’ಗಳು.
ಈ ಬಾರಿಯ ಗ್ರಾಮ ವಾಸ್ತವ್ಯದ ಸ್ವರೂಪ: ಗ್ರಾಮವಾಸ್ತವ್ಯ ಕಳೆದ ಸಾಲಿನ ಗ್ರಾಮ ವಾಸ್ತವ್ಯಕ್ಕಿಂತ ಭಿನ್ನವಾಗಿ ಆಯೋಜನೆ ಗೊಳ್ಳಲಿದ್ದು, ಮುಖ್ಯಮಂತ್ರಿಗಳು ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡುವರು. ರೈತರು ಕಾರ್ಯಕ್ರಮದ ಆದ್ಯತಾ ವಲಯದಲ್ಲಿರುತ್ತಾರೆ. ರೈತರ ಹಿತವನ್ನು ಗಮನದಲ್ಲಿರಿಸಿ ಈವರೆಗಿನ ರೈತಪರ ಕಾರ್ಯಕ್ರಮಗಳಿಂದ ಕಂಡುಕೊಂಡ ಉತ್ತಮ ಅಂಶಗಳನ್ನು ರೈತರಿಗೆ ಹೇಳುವ ಮತ್ತು ಆಧುನಿಕ ಕೃಷಿ ಪದ್ಧತಿಗೆ ಪೂರಕ, ಯಾಂತ್ರೀಕೃತ ಕೃಷಿಗೆ ನೆರವು ಹಾಗೂ ರೈತ ಮಾಹಿತಿಗಳು ಗ್ರಾಮವಾಸ್ತವ್ಯ ಕಾರ್ಯಕ್ರಮದ ಆದ್ಯತೆಯಾಗಲಿವೆ.
ಮುಖ್ಯಮಂತ್ರಿಗಳು ಭೇಟಿ ನೀಡುವ ಗ್ರಾಮಗಳಿಗೆ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಭೇಟಿ ನೀಡುವ ಮತ್ತು ಸುತ್ತಮುತ್ತಲ ಗ್ರಾಮಗಳ ಜನರ ಸಮಸ್ಯೆಗಳು, ಬೇಡಿಕೆ ಹಾಗೂ ನೆರವು ನೀಡಲು ಪೂರಕ ಸಮಗ್ರ ವರದಿಯನ್ನು ತಯಾರಿಸುವರು. ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ವೇಳೆ ಸ್ಥಳದಲ್ಲೇ ಹಲವು ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ನೀತಿ ನಿರೂಪಣೆಗೂ ಇದು ಸಹಕಾರಿಯಾಗಲಿದೆ ಎನ್ನುವುದು ಮುಖ್ಯಮಂತ್ರಿಗಳ ನಂಬಿಕೆ. ತಾವು ಉಳಿದುಕೊಂಡ ಗ್ರಾಮಕ್ಕೆ, ಜಿಲ್ಲೆಗೆ ಏನು ಬೇಕು? ಯಾವ ಇಲಾಖೆಯಿಂದ ಕೆಲಸ ಕಾರ್ಯಗಳು ಬಾಕಿ ಉಳಿದಿವೆ? ಎಂಬುದನ್ನು ಮನಗಂಡು ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕೆನ್ನುವುದು ಅವರ ಅಭಿಲಾಷೆ.
Related Articles
                            Thank you for your comment. It is awaiting moderation.
                        
                                        
                    
                    
                 
                            
                                            
 
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                    
Comments (0)