ಕೈ ಅಧ್ಯಕ್ಷಗಿರಿಗೆ ಹಿರಿಯ ಕಾಂಗ್ರೆಸಿಗರ ಪೈಪೋಟಿ
- by Suddi Team
- June 3, 2018
- 106 Views
ಬೆಂಗಳೂರು: ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾದ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಒಂದೆಡೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಹೆಗಲು ನೀಡಿದ್ದ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ಮಾತು ಕೇಳಿಬರುತ್ತಿದ್ದರೆ ಮತ್ತೊಂದೆಡೆ ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಜನತಾಪರಿವಾರದಿಂದ ರಾಜಕೀಯ ಬದುಕು ಆರಂಭಿಸಿದ ಆರ್.ವಿ.ದೇಶಪಾಂಡೆ ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಅವರ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆ ನಿರ್ವಹಿಸಿದ್ದರು. ಆದರೆ ಇಂದು ದೇವೇಗೌಡರ ಪುತ್ರ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದು, ಅವರ ಸಂಪುಟದಲ್ಲಿ ಸಚಿವರಾಗಲು ಅದೇಕೋ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ತಮ್ಮಂತ ಹಿರಿಯ ರಾಜಕಾರಣಿ ಕುಮಾರಸ್ವಾಮಿ ಅಡಿ ಕಾರ್ಯನಿರ್ವಹಿಸುವುದು ಕೊಂಚ ಮುಜುಗರವೆಂದು ಭಾವಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಅವರು ಬೇರೊಂದು ಯೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕೈ ಅಧ್ಯಕ್ಷ ಸ್ಥಾನ
ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಆರ್.ವಿ. ದೇಶಪಾಂಡೆ ಸಚಿವರಾಗುವುದಕ್ಕಿಂತ ಕೆಪಿಸಿಸಿ ಅಧ್ಯಕ್ಷರಾಗುವುದು ಉತ್ತಮ ಎಂದು ಭಾವಿಸಿದ್ದಾರೆ ಎನ್ನಲಾಗಿದೆ. ಇದಕ್ಕಾಗಿಯೇ ನಾನು ಎಚ್‍ಡಿಕೆ ಸಂಪುಟ ಸೇರಲ್ಲ, ನನಗೆ ಬೇರೆ ಜವಾಬ್ದಾರಿ ಕೊಡಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕೋರಿದ್ದಾರೆ ಎನ್ನಲಾಗುತ್ತಿದೆ.
ರಾಮಕೃಷ್ಣ ಹೆಗಡೆ ಮತ್ತು ಕುಮಾರಸ್ವಾಮಿ ಅವರ ತಂದೆ ಎಚ್.ಡಿ ದೇವೆಗೌಡರ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೀಗಾಗಿ ಎಚ್ಡಿಕೆ ಸಂಪುಟದಲ್ಲಿ ಕೆಲಸ ಮಾಡಲು ನನಗೆ ಇಷ್ಟವಿಲ್ಲ ಎಂದು ರಾಹುಲ್ ಗಾಂಧಿ ಬಳಿ ಹೇಳಿಕೊಂಡಿರುವ ದೇಶಪಾಂಡೆ, ಇದಕ್ಕೆ ಪ್ರತಿಯಾಗಿ ಮಹತ್ವದ ಹುದ್ದೆಯಾದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳಿದ್ದಾರೆ ಎನ್ನಲಾಗಿದೆ. ಸದ್ಯವೇ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಂದ ತೆರವಾಗುವ ಈ ಸ್ಥಾನಕ್ಕೆ ಅದಾಗಲೇ ಮಾಜಿ ಸಚಿವರಾದ ಎಸ್.ಆರ್. ಪಾಟೀಲ್, ಡಿ.ಕೆ. ಶಿವಕುಮಾರ್, ಸಂಸದ ಕೆ.ಎಚ್. ಮುನಿಯಪ್ಪ ಕಣ್ಣಿಟ್ಟಿದ್ದಾರೆ. ಈ ನಡುವೆ ದೇಶಪಾಂಡೆ ಕೂಡ ಇತ್ತ ಗಮನ ಹರಿಸಿರುವುದು ನಿಜಕ್ಕೂ ರಾಹುಲ್‍ಗೆ ತಲೆನೋವಾಗಿ ಪರಿಣಮಿಸಿದೆ.
ಕೈಗಾರಿಕಾ ಸಚಿವರಾಗುವಂತೆ ಒತ್ತಡ
ರಾಜ್ಯದಲ್ಲಿ ಕೈಗಾರಿಕಾ ಸಚಿವರಾಗಿ ಅತಿದೊಡ್ಡ ಹೆಸರು ಮಾಡಿರುವ ದೇಶಪಾಂಡೆಯವರನ್ನು ಈ ಬಾರಿಯೂ ಹೇಗಾದರೂ ಸಮ್ಮಿಶ್ರ ಸರ್ಕಾರದಲ್ಲಿ ಬೃಹತ್ ಕೈಗಾರಿಕಾ ಸಚಿವರನ್ನಾಗಿ ಮಾಡುವ ಆಶಯ ಕಾಂಗ್ರೆಸ್ ನಾಯಕರದ್ದು. ಅಲ್ಲದೇ ಸದ್ಯ ಈ ಖಾತೆ ಕೂಡ ಕಾಂಗ್ರೆಸ್ ಪಾಲಿಗೆ ಒಲಿದಿರುವುದರಿಂದ ಇವರನ್ನು ಬಿಟ್ಟರೆ ಆ ಖಾತೆಗೆ ಬೇರೆಯವರು ಸರಿಬರುವುದಿಲ್ಲ ಎನ್ನುವ ಅಭಿಪ್ರಾಯ ಕೂಡ ಕೇಳಿಬರುತ್ತಿದೆ.
ಸದ್ಯ ದಿಲ್ಲಿಯಲ್ಲಿರುವ ಆರ್.ವಿ. ದೇಶಪಾಂಡೆ ಅವರ ಮನವೊಲಿಸುವ ಯತ್ನ ನಡೆದಿದೆ. ಕೆಪಿಸಿಸಿ ಸ್ಥಾನಕ್ಕೆ ಆಸೆ ಪಟ್ಟು ಕುಳಿತಿರುವ ಅವರನ್ನು ನಾಳೆ ಬೆಳಗ್ಗೆ ಬರುವ ರಾಹುಲ್‍ಗಾಂಧಿ ಹೇಗೆ ಸಚಿವ ಸ್ಥಾನಕ್ಕೆ ಒಪ್ಪಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
Related Articles
Thank you for your comment. It is awaiting moderation.


Comments (0)