ಯುಕೆಪಿ ಮೂರನೇ ಹಂತ ಯೋಜನೆ; ಕೋರ್ಟ್ ಹೇಳಿದಷ್ಟು ಪರಿಹಾರ ನೀಡಲು ಹಣವಿಲ್ಲವೆಂದ ಡಿಸಿಎಂ

ಬೆಂಗಳೂರು: ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ಜಮೀನಿಗೆ ನ್ಯಾಯಾಲಯ ಹೇಳಿರುವ ಪ್ರಮಾಣದ ಪರಿಹಾರ ನೀಡಲು ಸಾಧ್ಯವಿಲ್ಲ ಏಕೆಂದರೆ ನಮ್ಮ ಬಳಿ ಬಾಕಿ ಬಿಲ್ ಗಳನ್ನು ನೀಡುವುದಕ್ಕೇ ಹಣವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.ಆ ಮೂಲಕ ಉತ್ತರ ಕರ್ನಾಟಕ ಭಾಗದ ಬಹು ನಿರೀಕ್ಷಿತ ನೀರಾವರಿ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಯು ಮತ್ತಷ್ಟು ವಿಳಂಬವಾಗಲಿದೆ ಎನ್ನುವ ಕುರಿತು ಸುಳಿವು ನೀಡಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧಿನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ, ಭೂ ಪರಿಹಾರ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಹೆಚ್ಚುವರಿ ಭೂಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳ ಕುರಿತು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಸಭೆ ನಡೆಸಿದರು. ನಂತರ ಮಾತನಾಡಿದ ಅವರು, ರೈತರಿಗೂ ನಷ್ಟವಾಗದಂತಹ ಪರಿಹಾರ ಮೊತ್ತಕ್ಕೆ ಸರ್ವ ಸಮ್ಮತ ಒಪ್ಪಿಗೆ ದೊರೆತರೆ ಮಾತ್ರ ಮುಂದುವರೆಯಬಹುದು. ಯಾವುದೇ ಮಾತಿಗೂ ಒಪ್ಪದಿದ್ದರೆ ನಮ್ಮ ಕೈಯಲ್ಲಿ ಏನೂ ಉಳಿದಿಲ್ಲ. ಏಕೆಂದರೆ ಪರಿಹಾರ ನೀಡಲೇ ನಮಗೆ 2 ಲಕ್ಷ‌ ಕೋಟಿ ಹಣ ಬೇಕಾಗುತ್ತದೆ. ನಮ್ಮ ಬಳಿ ಬಾಕಿ ಬಿಲ್ ಗಳನ್ನು ನೀಡುವುದಕ್ಕೇ ಹಣವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

“ಬಾಗಲಕೋಟೆಯಲ್ಲಿ ಒಂದು ಎಕರೆ ಭೂಮಿಗೆ ಬಡ್ಡಿ ಮೊತ್ತ ‌ಸೇರಿ 23 ಕೋಟಿ ಪರಿಹಾರ ಸೂಚಿಸಲಾಗಿದೆ. ಕಸಬಾ ಬಿಜಾಪುರದಲ್ಲಿ ಕಾಲುವೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡ ಒಂದು ಎಕರೆ ಭೂಮಿಗೆ 11.92 ಕೋಟಿ ಪರಿಹಾರ ನೀಡಿ ಎಂದು ಹೇಳಲಾಗಿದೆ. ಜುಂಜರಕುಪ್ಪ ಆರ್ ಸಿಗೆ 10.22 ಕೋಟಿ ಪರಿಹಾರ, ವೀರಾಪುರದಲ್ಲಿನ ಸಬ್ ಮರ್ಜ್ ಜಮೀನಿಗೆ 15.49 ಲಕ್ಷ ಪರಿಹಾರ ನೀಡಬೇಕು ಎಂದು ನ್ಯಾಯಾಲಯಗಳು ಆದೇಶಿಸಿವೆ”.”ಕಾಲುವೆಗಳ ನಿರ್ಮಾಣದ ಜಮೀನಿಗೆ ನಮ್ಮ ಅಧಿಕಾರಿಗಳು 8 ರಿಂದ 10 ಲಕ್ಷ ಪರಿಹಾರ ಸೂಚಿಸಿದ್ದಾರೆ.‌ ಇಂತಹ ‌ಕಡೆ ನ್ಯಾಯಾಲಯದವರು 74 ಲಕ್ಷ‌ ಪರಿಹಾರಕ್ಕೆ ಸೂಚನೆ ನೀಡಿದ್ದಾರೆ. ಸಬ್ ಮರ್ಜ್ ಭೂಮಿಗಳಿಗೆ ಅಧಿಕಾರಿಗಳು ಎಕರೆಗೆ 16.50 ಲಕ್ಷ ಪರಿಹಾರ ಸೂಚಿಸಿದ್ದರೆ ನ್ಯಾಯಾಲಯ 1.20 ಕೋಟಿ ಪರಿಹಾರಕ್ಕೆ ನ್ಯಾಯಾಲಯ ತೀರ್ಪು ನೀಡಿದೆ. ಮುಳುಗಡೆ ಸ್ಥಳಾಂತರ ಪ್ರದೇಶಗಳಿಗೆ 15.50 ಲಕ್ಷ ಪರಿಹಾರ ಸೂಚಿಸಿದ್ದರೆ ನ್ಯಾಯಾಲಯವು 5 ಕೋಟಿ ಸೂಚಿಸಿದೆ”.”ವಕೀಲರು ಹಾಗೂ ಭೂ ಮಾಲೀಕರು ಸೇರಿಕೊಂಡು ದುಪ್ಪಟ್ಟಿಗಿಂತ ಹೆಚ್ಚು ಪರಿಹಾರಕ್ಕೆ ಪ್ರಕರಣಗಳನ್ನು ಹೂಡಿದ್ದಾರೆ. 19,957 ಪ್ರಕರಣಗಳು ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿಯುಳಿದಿವೆ. 9,015 ಪ್ರಕರಣಗಳು ಬೇರೆ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಈ ಯೋಜನೆಯಡಿ ಸುಮಾರು ಇಪ್ಪತ್ತು ಗ್ರಾಮಗಳು ಮುಳುಗಡೆಯಾಗಲಿವೆ” ಆದರೆ ಕೋರ್ಟ್ ಹೇಳಿರುವಷ್ಟ ಪರಿಹಾರದ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

“ಆರ್‌.ಸಿ ಗ್ರಾಮಗಳಿಗೆ ಎಂದು 1,33,867 ಎಕರೆ ಜಮೀನು ಅಗತ್ಯವಿದೆ. 29,568 ಎಕರೆ ಜಮೀನಿಗೆ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ಹಂತಗಳಲ್ಲಿ 44,947 ಎಕರೆ ಭೂಮಿಯಿದೆ. 59,354 ಎಕರೆ ಜಮೀನು ಸ್ವಾಧೀನಕ್ಕೆ ಕೆಲಸ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕಾಗಿದೆ” ಎಂದರು.

Related Articles

Comments (0)

Leave a Comment