- ಮುಖ್ಯ ಮಾಹಿತಿ
- ರಾಜಕೀಯ
- Like this post: 0
ಮುಂದಿನ ಚುನಾವಣೆ ನಾಯಕತ್ವ ವಿಚಾರ,ಸಿದ್ದರಾಮಯ್ಯರದ್ದು ವೈಯಕ್ತಿಕ ಹೇಳಿಕೆ; ಡಿಸಿಎಂ ಡಿಕೆ ಶಿವಕುಮಾರ್
- by Suddi Team
- July 11, 2025
- 41 Views

ಬೆಂಗಳೂರು: 2028ರ ಚುನಾವಣೆಗೂ ನನ್ನದೇ ನಾಯಕತ್ವ ಎಂಬ ಸಿದ್ದರಾಮಯ್ಯ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ. ಅದನ್ನು ಹೇಳುವ ಸಂಪೂರ್ಣ ಅಧಿಕಾರ ಅವರಿಗಿದೆ.ಪಕ್ಷದ ಅಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡುವುದು ನನ್ನ ಜವಾಬ್ದಾರಿ. ಪಕ್ಷ ಹಾಗೂ ಸರ್ಕಾರದ ಹಿತಾಸಕ್ತಿ ಕಾಯುವುದು ನನ್ನ ಗುರಿ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಪಕ್ಷ ನನಗೆ ಸಂಘಟನೆ ಹಾಗೂ ಡಿಸಿಎಂ ಹುದ್ದೆ ನೀಡಿದ್ದು, ನನ್ನ ಗಮನ ಪಕ್ಷ ಹಾಗೂ ಸರ್ಕಾರದ ಹಿತಾಸಕ್ತಿ ಕಾಪಾಡುವುದರತ್ತ ಮಾತ್ರ ಇದೆ.ಪಕ್ಷ ಕೊಟ್ಟಿರುವ ಜವಾಬ್ದಾರಿ ಮುಂದುವರಿಸಿಕೊಂಡು ಹೋಗುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಧೀಕ್ಷೆ ನೀಡಿದ್ದು, ನಾವೆಲ್ಲರೂ ಅದನ್ನು ಸಂತೋಷವಾಗಿ ಸ್ವೀಕರಿಸಿದ್ದೇವೆ. ಇದರ ಹೊರತಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಅವರಿಗೆ ಕೆಲವು ಶಾಸಕರ ಬೆಂಬಲ ಮಾತ್ರವಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಪಕ್ಷದ ರಾಜ್ಯ ಅಧ್ಯಕ್ಷ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ. ನಾನು ನಿನ್ನೆ ಬ್ಯುಸಿ ಇದ್ದೆ. ಅದರ ಮಧ್ಯೆ ಮುಖ್ಯಮಂತ್ರಿಗಳ ಹೇಳಿಕೆ ನೋಡಿದೆ. ನಿಮ್ಮ ಪ್ರಶ್ನೆಗಳಿಗೆ ಅವರೇ ಉತ್ತರ ನೀಡಿದ್ದಾರೆ. ಅವರು ಉತ್ತರ ನೀಡಿದ ಮೇಲೆ ನಾವು ಮತ್ತೆ ಆ ವಿಚಾರ ಚರ್ಚೆ ಮಾಡುವುದು ಸೂಕ್ತವಲ್ಲ. ನೀವುಗಳು ಸಹ ಮತ್ತೆ ಆ ವಿಚಾರವಾಗಿ ಪ್ರಶ್ನೆ ಮಾಡುವುದು ಸೂಕ್ತವಲ್ಲ” ನೀವು ನನಗೆ ಹೇಗೆ ತಿರುಗಿಸಿ ಕೇಳಿದರೂ ನಾನಂತೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಿಮಗೆ ಬಲಿಯಾಗುವುದಿಲ್ಲ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಸಚಿವರ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಗೊತ್ತಿಲ್ಲ. ಈ ವಿಚಾರದ ಬಗ್ಗೆ ನೀವು ಅವರನ್ನೇ ಕೇಳಿ. ನಾನು ಪಕ್ಷದ ವಕ್ತಾರನೇ ಹೊರತು, ಬೇರೆ ಯಾವುದೇ ವ್ಯಕ್ತಿಯ ವಕ್ತಾರನಲ್ಲ”, “ನಾನು ಪಕ್ಷದ ಅಧ್ಯಕ್ಷನಾಗಿ ಈಗಷ್ಟೇ ಪಕ್ಷದ ಬಾವುಟ ನೀಡಿ ಮಾಜಿ ಸಚಿವೆ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇನೆ” ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬ ಆಸೆ ಅನೇಕರಿಗೆ ಇರುತ್ತದೆ ಎಂದು ಕೇಳಿದಾಗ, “ನಿಮ್ಮಲ್ಲೂ ಅನೇಕರಿಗೆ ಅನೇಕ ಆಸೆ ಇರುತ್ತವೆ. ನಾನು ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಅವಶ್ಯಕತೆ ಇಲ್ಲ. ಯಾರು ಏನೇನು ಮಾತನಾಡಿದ್ದಾರೆ, ಅವರೇ ಪ್ರಶ್ನೆ ಉತ್ತರ ಎಲ್ಲವನ್ನು ನೀಡಿದ್ದಾರೆ. ಸಧ್ಯಕ್ಕೆ ನಾನು ಯಾವುದೇ ಉತ್ತರ ನೀಡುವುದಿಲ್ಲ” ಎಂದು ತಿಳಿಸಿದರು.
ಹೈಕಮಾಂಡ್ ಭೇಟಿಯಾಗಿ ಯಾವೆಲ್ಲಾ ರಾಜಕೀಯ ಚರ್ಚೆ ನಡೆಯಿತು ಎಂದು ಕೇಳಿದಾಗ, “ನಾವು ಸುರ್ಜೆವಾಲ ಅವರ ಹೊರತಾಗಿ ಬೇರೆ ಯಾವುದೇ ಹೈಕಮಾಂಡ್ ನಾಯಕರನ್ನು ಭೇಟಿಯಾಗಿಲ್ಲ. ರಾಜ್ಯ ಉಸ್ತುವಾರಿಗಳ ಜೊತೆ ನಮ್ಮ ಕಾರ್ಯಕರ್ತರಿಗೆ ಕೆಲವು ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ. ಎಲ್ಲಾ ಶಾಸಕರು ತಮ್ಮ ಅಭಿಪ್ರಾಯ ಸಲ್ಲಿಸಿದ್ದಾರೆ. ಸಚಿವರ ಅಭಿಪ್ರಾಯ ಸಂಗ್ರಹಿಸಬೇಕಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಶ್ರಮಿಸಿರುವವರಿಗೆ ಹಾಗೂ ಕೆಲವರಿಗೆ ನಾವು ಕೊಟ್ಟಿರುವ ಮಾತಿಗೆ ಬದ್ಧವಾಗಿ ಸ್ಥಾನಮಾನ ನೀಡಬೇಕಿದೆ. ಈ ಪ್ರಕ್ರಿಯೆ ಈಗಾಗಲೇ ತಡವಾಗಿದೆ. ಇದು ಅಂತಿಮ ಹಂತಕ್ಕೆ ಬಂದಿದೆ. ಅಧ್ಯಕ್ಷನಾಗಿ ನಾನು ಪಕ್ಷದ ಸಂಘಟನೆಗೆ ಶ್ರಮಿಸಿದವರ ಹೆಸರನ್ನು ಸೇರಿಸಿ ಇದರ ಪ್ರಸ್ತಾವನೆಯನ್ನು ಮತ್ತೊಮ್ಮೆ ದೆಹಲಿಗೆ ಕಳುಹಿಸಿ ಅನುಮತಿ ಪಡೆಯಲಾಗುವುದು” ಎಂದರು.
Related Articles
Thank you for your comment. It is awaiting moderation.
Comments (0)