ನಾವು ಯುಎಇಯನ್ನು ಕೇವಲ ಮಾರುಕಟ್ಟೆಯನ್ನಾಗಿ ನೋಡುವುದಿಲ್ಲ, ಕಾರ್ಯತಂತ್ರದ ಪಾಲುದಾರನಾಗಿ ನೋಡುತ್ತೇವೆ; ಎಚ್ಡಿಕೆ
- by Suddi Team
- July 2, 2025
- 109 Views

ದುಬೈ(ಯುಎಇ): “ಭಾರತ ಮತ್ತು ಯುಎಇ ಹಸಿರು ಉಕ್ಕು ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆಯಲ್ಲಿ ಬಲವಾದ ಪಾಲುದಾರರಾಗಬಹುದು, ನಾವು ಯುಎಇಯನ್ನು ಕೇವಲ ಮಾರುಕಟ್ಟೆಯನ್ನಾಗಿ ನೋಡುವುದಿಲ್ಲ. ಜಾಗತಿಕ ಕೈಗಾರಿಕಾ ಭೂಪಟವನ್ನು ಮರು ರೂಪಿಸುವಲ್ಲಿ ಕಾರ್ಯತಂತ್ರದ ಪಾಲುದಾರನಾಗಿ ನೋಡುತ್ತೇವೆ” ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರತಿಪಾದಿಸಿದರು.
ದುಬೈ ಪ್ರವಾಸದಲ್ಲಿರುವ ಕುಮಾರಸ್ವಾಮಿ ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ ಉನ್ನತ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಉಕ್ಕು ಹಾಗೂ ಅಲ್ಯೂಮಿನಿಯಂ ಕುರಿತಾಗಿ ಅವರು ಮಾತುಕತೆ ನಡೆಸಲಾಗಿದ್ದು, ಗ್ರೀನ್ ಸ್ಟೀಲ್, ಉನ್ನತ ದರ್ಜೆಯ ಅಲ್ಯೂಮೀನಿಯಂ ಕುರಿತ ಭಾರತ-ಯುಎಇ ನಡುವಿನ ದೀರ್ಘಕಾಲೀನ ಸಹಯೋಗ ಕುರಿತಂತೆ ಯುಎಇ ಹಣಕಾಸು ಸಚಿವ ಎಚ್.ಇ. ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ಅವರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು 2030ರ ಹೊತ್ತಿಗೆ ದೇಶಿಯವಾಗಿ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಭಾರತವು ನಿರ್ಣಾಯಕ ಕ್ರಮಗಳ ಮೂಲಕ ಮುನ್ನಡೆಯುತ್ತಿದೆ ಎಂದು ವಿವರಿಸಿದರು.
ದ್ವಿಪಕ್ಷೀಯ ಕೈಗಾರಿಕಾ ಸಂಬಂಧಗಳನ್ನು ಬಲಪಡಿಸುವ ಅವಕಾಶವನ್ನು ಮುಕ್ತವಾಗಿ ಸ್ವಾಗತಿಸಿದ ಕುಮಾರಸ್ವಾಮಿ ಅವರು, ಜಗತ್ತಿನ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ದೇಶವಾಗಿ ಭಾರತವು ವೇಗವಾಗಿ ಬೆಳೆಯುತ್ತಿರುವ ಬಗ್ಗೆ ಒತ್ತಿ ಹೇಳಿದರು. ಅಲ್ಲದೆ, ಹಸಿರು ಉಕ್ಕು, ಹೆಚ್ಚಿನ ಮೌಲ್ಯದ ಉತ್ಪಾದನೆ ಮತ್ತು ಜಾಗತಿಕ ಪೂರೈಕೆ ಸರಪಳಿ ಸ್ಥಿತಿ ಸ್ಥಾಪಕತ್ವಕ್ಕೆ ರಾಷ್ಟ್ರದ ಬದ್ಧತೆಯನ್ನು ವಿವರಿಸಿದರು.
“2030ರ ವೇಳೆಗೆ ಭಾರತವು ತನ್ನ 300 ಮಿಲಿಯನ್ ಟನ್ ಉಕ್ಕು ಉತ್ಪಾದನಾ ಗುರಿಯನ್ನು ತಲುಪಲು ಸಹಾಯ ಮಾಡುವಲ್ಲಿ ಯುಎಇ ಪ್ರಮುಖ ಪಾತ್ರ ವಹಿಸಬಹುದು. ವಿಶೇಷವಾಗಿ ಕಚ್ಚಾ ವಸ್ತುಗಳ ಖಾತರಿಯನ್ನು ಬೆಂಬಲಿಸುವ ಮೂಲಕ ಮತ್ತು ಇಂಧನ ಪೂರೈಕೆ, ಸಮರ್ಥ ಉತ್ಪಾದನಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುವ ಮೂಲಕ ಭಾರತದ ಜತೆ ಕೈ ಜೋಡಿಸಬಹುದು. ಈ ಪಾಲುದಾರಿಕೆ ಅತ್ಯಂತ ಮಹತ್ವದ್ದಾಗಿರುತ್ತದೆ” ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.
ಜಂಟಿ ಕಾರ್ಯಪಡೆ ರಚನೆ:
ನಿರ್ದಿಷ್ಟ ಅವಕಾಶಗಳನ್ನು ಗುರುತಿಸಲು, ಸಂಚಾರ ಸೌಕರ್ಯಗಳನ್ನು ಸುಗಮಗೊಳಿಸಲು ಮತ್ತು ಪ್ರಮುಖ ವಲಯಗಳಲ್ಲಿ ದೀರ್ಘಕಾಲೀನ ಸಹಯೋಗವನ್ನು ಉತ್ತೇಜಿಸಲು ಭಾರತೀಯ ಮತ್ತು ಯುಎಇ ಪಾಲುದಾರರ ನಡುವೆ ಜಂಟಿ ಕಾರ್ಯಪಡೆಯನ್ನು ರಚಿಸುವ ಬಗ್ಗೆ ಕುಮಾರಸ್ವಾಮಿ ಪ್ರಸ್ತಾಪಿಸಿದರು.
$5 ಟ್ರಿಲಿಯನ್ ಆರ್ಥಿಕತೆಯಾಗುವ ಭಾರತದ ಗುರಿಯೊಂದಿಗೆ ಹೊಂದಿಕೆಯಾಗುವ ಜಂಟಿ ಯೋಜನೆಗಳು ಮತ್ತು ವ್ಯಾಪಾರ ಚೌಕಟ್ಟುಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ದುಬೈ ಸಹಕಾರವನ್ನು ವಿಸ್ತೃತ ಮಟ್ಟದಲ್ಲಿ ಪಡೆದುಕೊಳ್ಳುವ ಸಂಕಲ್ಪದೊಂದಿಗೆ ಸಭೆ ಮುಕ್ತಾಯವಾಯಿತು.
Related Articles
Thank you for your comment. It is awaiting moderation.
Comments (0)