ಭಾರತ-ಕೆನಡಾ ಆರನೇ ಸುತ್ತಿನ ಸಿಇಪಿಎ ಮಾತುಕತೆ ಪೂರ್ಣ: ಸಮತೋಲಿತ ಒಪ್ಪಂದಕ್ಕೆ ಒತ್ತು
- by Suddi Loka
- November 22, 2026
- 5 Views
ನವದೆಹಲಿ: ಭಾರತ ಮತ್ತು ಕೆನಡಾ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಕುರಿತ ಆರನೇ ಸುತ್ತಿನ ಮಾತುಕತೆಗಳನ್ನು ಪೂರ್ಣಗೊಳಿಸಿದ್ದು, ಮಹತ್ವಾಕಾಂಕ್ಷೆಯ, ಸಮತೋಲಿತ ಹಾಗೂ ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದಕ್ಕೆ ಬದ್ಧತೆ ವ್ಯಕ್ತಪಡಿಸಿವೆ.
ನವೆಂಬರ್ 11ರಿಂದ 20ರವರೆಗೆ ನವದೆಹಲಿಯಲ್ಲಿ ನಡೆದ ಮಾತುಕತೆಯಲ್ಲಿ ಸರಕು ಮತ್ತು ಸೇವೆಗಳ ವ್ಯಾಪಾರ, ಮೂಲದ ನಿಯಮಗಳು, ವ್ಯಾಪಾರ ಪರಿಹಾರಗಳು, ಬೌದ್ಧಿಕ ಆಸ್ತಿ ಹಾಗೂ ಹೂಡಿಕೆ ಪ್ರಚಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಕೆನಡಾದ ಅಂತರರಾಷ್ಟ್ರೀಯ ವ್ಯಾಪಾರ ಸಚಿವ ಮಣೀಂದರ್ ಸಿಧು ಮಾತುಕತೆಗೆ ಚಾಲನೆ ನೀಡಿದ್ದರು. ಎರಡೂ ದೇಶಗಳ ನಡುವೆ ಮಾರುಕಟ್ಟೆ ಪ್ರವೇಶ ಮತ್ತು ವ್ಯಾಪಾರ-ಹೂಡಿಕೆ ಅವಕಾಶಗಳನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿಹೇಳಿದರು.
ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಹಾಗೂ ಕೆನಡಾದ ಉಪ ಸಚಿವ ಗ್ಲೆನ್ ಪರ್ವ್ಸ್ ಮಾತುಕತೆಯ ಪ್ರಗತಿಯನ್ನು ಪರಿಶೀಲಿಸಿದರು. ಪ್ರಸ್ತಾವಿತ ಒಪ್ಪಂದವು ರೈತರು, ಕೈಗಾರಿಕೆಗಳು, ಉದ್ಯಮಗಳು ಮತ್ತು ಎಂಎಸ್ಎಂಇಗಳಿಗೆ ಅನುಕೂಲ ಕಲ್ಪಿಸುವುದರ ಜತೆಗೆ ಪೂರೈಕೆ ಸರಪಳಿ ಬಲಪಡಿಸಿ, ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ನಿರೀಕ್ಷೆಯಿದೆ.


Comments (0)