ಜಪಾನ್‌ನಲ್ಲಿ 5.7 ತೀವ್ರತೆಯ ಭೂಕಂಪ; ಹಲವು ನಗರಗಳಲ್ಲಿ ಆತಂಕ

ಟೋಕಿಯೊ: ಜಪಾನ್‌ನ ಮಧ್ಯ ಭಾಗದಲ್ಲಿ ಭಾನುವಾರ ಮುಂಜಾನೆ 1.04ಕ್ಕೆ ಸಂಭವಿಸಿದ 5.7 ತೀವ್ರತೆಯ ಭೂಕಂಪದಿಂದ 22 ಮಂದಿ ಗಾಯಗೊಂಡಿದ್ದಾರೆ. ಭೂಮಿ ಕಂಪಿಸಿದಾಗ ಕಟ್ಟಡಗಳಿಂದ ಹೊರಗೆ ಓಡಿಬಂದ ಜನರಲ್ಲಿ ಕೆಲವರು ಮೆಟ್ಟಿಲುಗಳಿಂದ ಬಿದ್ದು ಗಾಯಗೊಂಡಿದ್ದಾರೆ.

ಜಪಾನ್ ಹವಾಮಾನ ಸಂಸ್ಥೆ ಭೂಕಂಪದ ತೀವ್ರತೆಯನ್ನು 5.7 ಎಂದು ದಾಖಲಿಸಿದ್ದರೆ, ಅಮೆರಿಕದ USGS 5.5 ಎಂದು ವರದಿ ಮಾಡಿದೆ. ಶಿಜುವೊಕಾ ಪ್ರಾಂತ್ಯದಲ್ಲಿ ಭೂಮಿಯ ಮೇಲ್ಮೈಯಿಂದ 40 ಕಿ.ಮೀ. ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ.

ಐಚಿ, ಯಮನಾಶಿ, ಗಿಫು ಪ್ರಾಂತ್ಯಗಳು ಹಾಗೂ ಹಮಾಮತ್ಸು, ಕ್ಯೋಟೊ ಮತ್ತು ನಾರಾ ನಗರಗಳಲ್ಲೂ ಕಂಪನದ ಅನುಭವವಾಗಿದೆ. ಅಂಗಡಿಗಳ ಗಾಜುಗಳು ಒಡೆದಿದ್ದು, ಪುಸ್ತಕ ಮಳಿಗೆಯೊಂದರಲ್ಲಿ ಕಪಾಟುಗಳಿಂದ ಪುಸ್ತಕಗಳು ಕೆಳಗೆ ಬಿದ್ದಿವೆ.

ಮುಂದಿನ ಒಂದು ವಾರದಲ್ಲಿ ಮತ್ತಷ್ಟು ಪ್ರಬಲ ಭೂಕಂಪ ಸಂಭವಿಸುವ ಸಾಧ್ಯತೆಯಿದ್ದು, ಎರಡು ಮೂರು ದಿನಗಳ ಕಾಲ ಹೆಚ್ಚಿನ ಜಾಗ್ರತೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಮಣ್ಣು ಕುಸಿತ ಮತ್ತು ಬಂಡೆಗಳು ಉರುಳುವ ಅಪಾಯದ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ. ಮುನ್ನೆಚ್ಚರಿಕೆಯಾಗಿ ಶಿಂಕಾನ್ಸೆನ್ ಬುಲೆಟ್ ರೈಲುಗಳ ವೇಗ ಕಡಿತಗೊಳಿಸಲಾಗಿದೆ.

Related Articles

Comments (0)