ದುಬೈ ಕೇವಲ ಒಂದು ಸ್ಥಳವಲ್ಲ, ಲಾಂಚ್‌ಪ್ಯಾಡ್; ಎಚ್.ಡಿ. ಕುಮಾರಸ್ವಾಮಿ

ದುಬೈ (ಯುಎಇ): ದುಬೈ ಕೇವಲ ಒಂದು ಸ್ಥಳವಲ್ಲ. ಇದು ಒಂದು ಲಾಂಚ್‌ಪ್ಯಾಡ್ ಆಗಿದೆ, ಕೊಲ್ಲಿಯಲ್ಲಿ ಭಾರತವು ಕಚ್ಚಾವಸ್ತು ಸುರಕ್ಷತೆ, ಇಂಜಿನಿಯರಿಂಗ್ ವಿಸ್ತರಣೆ ಮತ್ತು ಅನಿವಾಸಿ ಭಾರತೀಯರ ಕಲ್ಯಾಣವನ್ನೇ ಗುರಿಯಾಗಿಸಿಕೊಂಡಿದೆ. ಹಸಿರು ಉಕ್ಕಿನ ರಾಜತಾಂತ್ರಿಕತೆ ಬಲಪಡಿಸಲು ಮೆಕಾನ್, ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (ಎನ್‌ಎಂಡಿಸಿ) ದುಬೈನಲ್ಲಿ ಕಾರ್ಯಾಚರಣೆ ನಡೆಸಲಿವೆ ಎಂದು ಕೇಂದ್ರದ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ದುಬೈನಲ್ಲಿ ಉಕ್ಕು ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಮೆಕಾನ್‌ ಹಾಗೂ ಎನ್‌ಎಂಡಿಸಿಯ ಸಾಗರೋತ್ತರ ಕಚೇರಿಗಳ ಉದ್ಘಾಟನೆ ನೆರವೇರಿಸಿದ ಕುಮಾರಸ್ವಾಮಿ, ನಂತರ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ರಾಸ್ ಅಲ್ ಖೈಮಾಹ್‌ (RAK) ಆಡಳಿತಗಾರ ಶೇಖ್ ಸೌದ್ ಬಿನ್ ಸಕ್ರ್ ಅಲ್ ಖಾಸಿಮಿ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದರು.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ನನ್ನ ಭೇಟಿಯು ಭಾರತ ಮತ್ತು ಯುಎಇ ನಡುವೆ ವಿಕಸನಗೊಳ್ಳುತ್ತಿರುವ ಸದೃಢವಾದ ಪಾಲುದಾರಿಕೆಯನ್ನು ಒತ್ತಿ ಹೇಳುತ್ತದೆ. ಇದು ಪರಸ್ಪರ ಆರ್ಥಿಕ ಹಿತಾಸಕ್ತಿ, ಸಾಂಸ್ಕೃತಿಕ ಬಾಂಧವ್ಯಕ್ಕೆ ಪೂರಕವಾಗಲಿದೆ. ವ್ಯೂಹಾತ್ಮಕ ಖನಿಜ ಪಾಲುದಾರಿಕೆ ಹಾಗೂ ಕೈಗಾರಿಕಾ ಸಹಯೋಗ ಮತ್ತು ಯುಎಇಯಲ್ಲಿ ವಾಸಿಸುವ 3.5 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರ ಕಲ್ಯಾಣವನ್ನು ಕೇಂದ್ರೀಕರಿಸುವ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

ರಾಸ್ ಅಲ್ ಖೈಮಾಹ್‌‌‌ದಿಂದ ಸುಣ್ಣದ ಕಲ್ಲಿನ ದೀರ್ಘಾವಧಿಯ ಆಮದು, ಭಾರತದಿಂದ ಮೌಲ್ಯವರ್ಧಿತ ಉಕ್ಕಿನ ರಫ್ತುಗಳ ಮೂಲಕ ವ್ಯಾಪಾರ ಪಾಲುದಾರಿಕೆ ವಿಸ್ತರಿಸುವುದು, ಹಸಿರು ಹೈಡ್ರೋಜನ್ ಮತ್ತು ಗ್ರೀನ್‌ ಸ್ಟೀಲ್ ಸಹಯೋಗವನ್ನು ಅನ್ವೇಷಿಸುವುದು‌, ರಾಸ್ ಅಲ್ ಖೈಮಾಹ್‌ ದಿಂದ ಸ್ಥಳೀಯ ಸುಣ್ಣದ ಕಲ್ಲು ಮತ್ತು ನೈಸರ್ಗಿಕ ಅನಿಲವನ್ನು ಬಳಸಿಕೊಂಡು ಸುಣ್ಣದ ಉತ್ಪಾದನಾ ಘಟಕಗಳ ಸ್ಥಾಪನೆ, ಭಾರತೀಯ ಉಕ್ಕು ಪ್ರಾಧಿಕಾರ (SAIL), ರಾಷ್ಟ್ರೀಯ ಖನಿಜಾವೃದ್ಧಿ ನಿಗಮ (NMDC) ಮತ್ತು ಮೆಕಾನ್ ನಂತಹ ‌ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳ ಮೂಲಕ ಹೆಚ್ಚೆಚ್ಚು ಒಪ್ಪಂದಗಳನ್ನು ಮಾಡಿಕೊಳ್ಳುವುದು ಸೇರಿ ವಿವಿಧ ಪ್ರಮುಖ ಅಂಶಗಳ ಬಗ್ಗೆ ಶೇಖ್ ಸೌದ್ ಬಿನ್ ಸಕ್ರ್ ಅಲ್ ಖಾಸಿಮಿ ಅವರೊಂದಿಗಿನ ಸಭೆಯಲ್ಲಿ ಚರ್ಚಿಸಿದ್ದಾಗಿ ಸಚಿವರು ಮಾಹಿತಿ ನೀಡಿದರು.

“ರಾಸ್ ಅಲ್ ಖೈಮಾಹ್‌ʼದ ಖನಿಜ ಸಂಪತ್ತು, ಕೈಗಾರಿಕಾ ಸಾಮರ್ಥ್ಯ ಮತ್ತು ಶುದ್ಧ ಇಂಧನವು ಭಾರತದ ಮುಂದಿನ ಪೀಳಿಗೆಯ ಉಕ್ಕು ಮತ್ತು ಸಂಪನ್ಮೂಲ ಕಾರ್ಯತಂತ್ರಕ್ಕೆ ಆದರ್ಶ ಪಾಲುದಾರನನ್ನಾಗಿ ಮಾಡುತ್ತದೆ”. ಭಾರತದ ಅತಿದೊಡ್ಡ ಉಕ್ಕು ಉತ್ಪಾದಕ ಸಂಸ್ಥೆಗಳಲ್ಲಿ ಒಂದಾದ SAIL, ಪ್ರಸ್ತುತ ರಾಸ್ ಅಲ್ ಖೈಮಾಹ್‌ದ ಆಧಾರಿತ ಸ್ಟೀವಿನ್ ರಾಕ್ LLC ನಿಂದ ವಾರ್ಷಿಕವಾಗಿ ಸುಮಾರು 2.5 ದಶಲಕ್ಷ ಟನ್ ಸುಣ್ಣದ ಕಲ್ಲನ್ನು ಆಮದು ಮಾಡಿಕೊಳ್ಳುತ್ತಿದೆ. ಭವಿಷ್ಯದಲ್ಲಿ SAIL ಸಾಮರ್ಥ್ಯದ ವಿಸ್ತರಣೆಯ ಭಾಗವಾಗಿ ವಾರ್ಷಿಕ 20 ರಿಂದ 35 ದಶಲಕ್ಷ ಟನ್‌ಗಳಿಗೆ ಆಮದು ಹೆಚ್ಚಾಗಲಿದೆ ಎಂದರು.

ಭಾರತದ ಅತ್ಯಂತ ಪ್ರತಿಷ್ಠಿತ ಸಾರ್ವಜನಿಕ ವಲಯದ ಇಂಜಿನಿಯರಿಂಗ್ ಸಲಹಾ ಸಂಸ್ಥೆಗಳಲ್ಲಿ ಒಂದಾದ ಮೆಕಾನ್‌‌‌ನ ಜಾಗತಿಕ ವಿಸ್ತರಣೆ ಅತ್ಯಂತ ಮಹತ್ವದ್ದು ಎಂದು ಪ್ರತಿಪಾದಿಸಿದ ಸಚಿವರು, ದುಬೈ ಕೇವಲ ಒಂದು ಸ್ಥಳವಲ್ಲ. ಇದು ಒಂದು ಲಾಂಚ್‌ಪ್ಯಾಡ್ ಆಗಿದೆ ಎಂದರು.

ಇಲ್ಲಿ MECONನ ಉಪಸ್ಥಿತಿಯು ಜಾಗತಿಕ ವೇದಿಕೆಯಲ್ಲಿ ವಿಶ್ವ ದರ್ಜೆಯ ಇಂಜಿನಿಯರಿಂಗ್ ಪರಿಹಾರಗಳನ್ನು ತಲುಪಿಸುವ ಭಾರತದ ಬೆಳೆಯುತ್ತಿರುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಕೈಗಾರಿಕಾ ಯೋಜನೆಯ ಕಾರ್ಯಗತಗೊಳಿಸುವಿಕೆ ಮತ್ತು ಯೋಜನೆ, ತೈಲ ಮತ್ತು ಅನಿಲ ಮೂಲಸೌಕರ್ಯ ವಿನ್ಯಾಸ, ಉಕ್ಕಿನ ಸ್ಥಾವರ ಕಾರ್ಯಸಾಧ್ಯತೆ ಮತ್ತು ವಿಸ್ತರಣಾ ಸಲಹೆ, ಹಸಿರು ಉಕ್ಕು ಮತ್ತು ಇಂಗಾಲರಹಿತೀಕರಣ ತಂತ್ರಗಳು, ಸ್ಮಾರ್ಟ್ ಉತ್ಪಾದನೆ ಮತ್ತು ಡಿಜಿಟಲ್ ಅವಳಿ ತಂತ್ರಜ್ಞಾನಗಳ ಕಾರ್ಯಾಚರಣೆಗಳ ಮೂಲಕ ದುಬೈನಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಕೇಂದ್ರೀಕರಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

Related Articles

Comments (0)

Leave a Comment