ಯುಜಿಸಿಇಟಿ/ನೀಟ್: ಎರಡನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ

ಬೆಂಗಳೂರು:ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಸಂಬಂಧ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.

ಎಂಜಿನಿಯರಿಂಗ್, ಆರ್ಕಿಟೆಕ್ಟರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ವೆಟರಿನರಿ, ಬಿ.ಎಸ್ಸಿ (ನರ್ಸಿಂಗ್), ಬಿ-ಫಾರ್ಮ, ಫಾರ್ಮ-ಡಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್ ಮತ್ತು ಆಯುಷ್ ಕೋರ್ಸುಗಳ 2ನೇ ಸುತ್ತಿನ ತಾತ್ಕಾಲಿಕ ಫಲಿತಾಂಶದ ಜೊತೆಗೆ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳ 2ನೇ ಸುತ್ತಿನ ತಾತ್ಕಾಲಿಕ ಫಲಿತಾಂಶವನ್ನು ಇದು ಒಳಗೊಂಡಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆಗೆ ಆ. 26ರ ಮಧ್ಯಾಹ್ನ 1 ರವರೆಗೆ ನಮೂದಿಸಿದ್ದ ಆಪ್ಷನ್ ಗಳನ್ನು ಪರಿಗಣಿಸಲಾಗಿದೆ. ಇದು ತಾತ್ಕಾಲಿಕ ಹಂಚಿಕೆಯಾಗಿರುವುದರಿಂದ ಅಭ್ಯರ್ಥಿಗಳು  ಕಾಲೇಜಿನಲ್ಲಿ ಪ್ರವೇಶ ಪಡೆಯುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ತಾತ್ಕಾಲಿಕ ಸೀಟು ಹಂಚಿಕೆ ಸಂಬಂಧ ನಿರ್ದಿಷ್ಟ ಆಕ್ಷೇಪಣೆಗಳಿದ್ದಲ್ಲಿ ಆ. 30ರ ಮಧ್ಯಾಹ್ನ 1ರೊಳಗೆ keauthority-ka@nic.in ಗೆ ಎಲ್ಲಾ ವಿವರಗಳೊಂದಿಗೆ ಮೇಲ್ ಮಾಡಲು ಅವರು ಸೂಚಿಸಿದ್ದಾರೆ.

ವೈದ್ಯಕೀಯ, ವೈದ್ಯಕೀಯ ಕೋರ್ಸುಗಳಿಗೆ ಪ್ರಾಧಿಕಾರದಲ್ಲಿ ಎರಡನೇ ಸುತ್ತಿನಲ್ಲಿ ತಾತ್ಕಾಲಿಕವಾಗಿ ಸೀಟು ಹಂಚಿಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಸದ್ಯ ಯಾವುದೇ ಕ್ರಮ ವಹಿಸಬಾರದು ಎಂದೂ ಸೂಚಿಸಲಾಗಿದೆ. ಎಂಸಿಸಿ ವೇಳಾಪಟ್ಟಿ ಆಧರಿಸಿ ಮುಂದಿನ ಕ್ರಮಗಳ ಬಗ್ಗೆ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಪರಿಷ್ಕೃತ ಮಾಹಿತಿಗಾಗಿ ನಿಯಮಿತವಾಗಿ ವೆಬ್ ಸೈಟ್ ಗಮನಿಸುತ್ತಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

Comments (0)

Leave a Comment