
ಬೆಂಗಳೂರು:ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ಪ್ರಕಟಿಸಿದ್ದು, ಸೀಟು ಹಂಚಿಕೆಯಾದವರು ಸೆ.3ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೂಚನೆ ನೀಡಿದೆ.
ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಎರಡನೇ ಸುತ್ತಿನ ಅಂತಿಮ ಫಲಿತಾಂಶವನ್ನು ಎಂಸಿಸಿ ಫಲಿತಾಂಶ ಹೊರಬಿದ್ದ ನಂತರ ಪ್ರಕಟಿಸಲಾಗುವುದು. ಅಲ್ಲಿಯವರೆಗೂ ಈ ಕೋರ್ಸ್‌ಗಳಿಗೆ ಸೀಟು ಹಂಚಿಕೆಯಾದವರಿಗೆ ಯಾವುದೇ ಛಾಯ್ಸ್ ಆಯ್ಕೆಗೆ ಅವಕಾಶ ಇರುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಅಖಿಲ ಭಾರತ ಮಟ್ಟದ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬವಾಗುತ್ತಿರುವ ಕಾರಣ ಯುಜಿಸಿಇಟಿ ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಹಾಗೂ ಅವರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ನಾಲ್ಕು ಛಾಯ್ಸ್ ಗಳ ಆಯ್ಕೆಗೂ ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳನ್ನು ಹೊರತುಪಡಿಸಿ, ಇತರ ಎಲ್ಲ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಇಂದಿನಿಂದಲೇ ಆರಂಭವಾಗಿದ್ದು, ಛಾಯ್ಸ್ ಆಯ್ಕೆಗೂ ಚಾಲನೆ ನೀಡಲಾಗಿದೆ. ಛಾಯ್ಸ್-1 ಮತ್ತು ಛಾಯ್ಸ್- 2 ಅನ್ನು ಆಯ್ಕೆ ಮಾಡಿದವರಿಗೆ ಶುಲ್ಕ ಪಾವತಿಸಲು ಸೆ.2ರವರೆಗೆ ಅವಕಾಶ ನೀಡಲಾಗಿದೆ. ಸೆ.3ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಪ್ರವೇಶ ಪ್ರಕ್ರಿಯೆಗೆ ಹೆಚ್ಚಿನ ಸಮಯ ಇಲ್ಲದ ಕಾರಣ ವೃತ್ತಿಪರ ಕಾಲೇಜುಗಳು ಭಾನುವಾರ ಸೇರಿದಂತೆ ಎಲ್ಲ ಸಾರ್ವತ್ರಿಕ ರಜಾ ದಿನಗಳಂದು ಕಾರ್ಯನಿರ್ವಹಿಸಬೇಕೆಂದು ಅವರು ಸೂಚಿಸಿದ್ದಾರೆ.
ನಾಲ್ಕು ಚಾಯ್ಸ್‌ಗೂ ಅವಕಾಶ:
ಛಾಯ್ಸ್-1 ಆಯ್ಕೆ ಮಾಡಿದವರು ಶುಲ್ಕ ಪಾವತಿಸಿ ಕಾಲೇಜಿಗೆ ಹೋಗಬೇಕು. ಛಾಯ್ಸ್-2 ಆಯ್ಕೆ ಮಾಡಿಕೊಂಡವರು ಶುಲ್ಕ ಪಾವತಿಸಿ, ಅಪ್ ಗ್ರೇಡೇಷನ್‌ಗೆ ಕಾಯಬಹುದು. ಛಾಯ್ಸ್-3 ಆಯ್ಕೆ ಮಾಡಿದವರು 10 ಸಾವಿರ ರೂಪಾಯಿ ಕಾಷನ್ ಡೆಪಾಸಿಟ್ (ಬಿಎಸ್‌ಸಿ ನರ್ಸಿಂಗ್, ಬಿಪಿಒ, ಬಿಪಿಟಿ ಮತ್ತು ಎಎಚ್‌ಎಸ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವವರಿಗೆ ಇದು ಅನ್ವಯಿಸುವುದಿಲ್ಲ) ಕಟ್ಟಬೇಕು. ಛಾಯ್ಸ್-4 ಆಯ್ಕೆ ಮಾಡಿದವರು ಸಿಇಟಿ ಪ್ರಕ್ರಿಯೆಯಿಂದ ಹೊರಹೋಗಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೀಟು ಹಂಚಿಕೆ ನಂತರ ಯಾವುದೇ ಛಾಯ್ಸ್ ಆಯ್ಕೆ ಮಾಡದವರನ್ನು ಈ ಸುತ್ತಿನಲ್ಲಿ ಇಡೀ ಪ್ರಕ್ರಿಯೆಯಿಂದ ಹೊರ ಹಾಕಲಾಗುತ್ತದೆ. ಅಂತಹವರನ್ನು ಪುನಃ ಒಳ ಬರುವುದಕ್ಕೂ ಬಿಡುವುದಿಲ್ಲ. ಸೀಟು ಬೇಕೊ-ಬೇಡವೊ ಎನ್ನುವುದನ್ನು ತಮ್ಮ ಛಾಯ್ಸ್ ಆಯ್ಕೆ ಮೂಲಕ ಖಾತರಿಪಡಿಸಬೇಕು ಎಂದು ಅವರು ಎಚ್ಚರಿಸಿದ್ದಾರೆ.
ವೈದ್ಯಕೀಯ ಕೌನ್ಸೆಲಿಂಗ್:
ಎಂಸಿಸಿ ಫಲಿತಾಂಶ ಪ್ರಕಟಿಸಿದ ನಂತರ ರಾಜ್ಯದಲ್ಲಿ ಸೀಟು ಸಿಕ್ಕಿರುವ ಕೆಲವರಿಗೆ ಅಲ್ಲಿಯೂ ಸೀಟು ಹಂಚಿಕೆಯಾಗಿರುವ ಮಾಹಿತಿ ಲಭ್ಯವಾಗಲಿದೆ. ಅಂತಹ ಕೆಲವರು ಹೊರ ಹೋಗುವುದಕ್ಕೂ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಹೊಸ ಸೀಟು ಕೂಡ ಸೇರ್ಪಡೆಯಾಗುವ ಸಾಧ್ಯತೆ ಬಗ್ಗೆ ಎಂಸಿಸಿ ಹೇಳುತ್ತಿದೆ. ಒಂದು ವೇಳೆ ಈ ರೀತಿ ಆದರೆ, ಹೆಚ್ಚುವರಿ ಸೀಟುಗಳನ್ನೂ ಇದೇ ಸುತ್ತಿಗೆ ಗಣನೆಗೆ ತೆಗೆದುಕೊಂಡು, ಪುನಃ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಇದರಿಂದ ಹಾಲಿ ಸಿಕ್ಕಿರುವ ಸೀಟಿಗಿಂತ ಮತ್ತಷ್ಟು ಉತ್ತಮದ್ದೇ ಸೀಟು ಸಿಗುವ ಸಾಧ್ಯತೆ ಇರುತ್ತದೆ ಎಂದು ಪ್ರಸನ್ನ ಅವರು ವಿವರಿಸಿದ್ದಾರೆ.
Related Articles
Thank you for your comment. It is awaiting moderation.
Comments (0)