ಯುಜಿಸಿಇಟಿ: ಎಂಜಿನಿಯರಿಂಗ್ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಟ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ / ವಿಶ್ವವಿದ್ಯಾಲಯಗಳಲ್ಲಿ ಹೊಸ ಕೋರ್ಸುಗಳ ಪ್ರಾರಂಭ ಹಾಗೂ ಪ್ರವೇಶಾತಿ ಹೆಚ್ಚಳಕ್ಕೆ ನಿಯಮಾನುಸಾರ ಸರ್ಕಾರದಿಂದ ಅನುಮೋದನೆ / ನಿರಾಕ್ಷೇಪಣಾ ಪ್ರಮಾಣ ಪತ್ರಗಳನ್ನು ನೀಡಿರುವ ಕೋರ್ಸುಗಳನ್ನು ಅಳವಡಿಸಿ ಸಿದ್ಧಪಡಿಸಿರುವ ಕರಡು ಸೀಟ್ ಮ್ಯಾಟ್ರಿಕ್ಸ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಸದರಿ ಕರಡು ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಲೋಪದೋಷವಿದ್ದಲ್ಲಿ ಅಥವಾ ಆಕ್ಷೇಪಣೆ, ಸಲಹೆಗಳಿದ್ದಲ್ಲಿ ಸಾರ್ವಜನಿಕರು / ಶಿಕ್ಷಣ ಸಂಸ್ಥೆಗಳು ನೇರವಾಗಿ ಸರ್ಕಾರದ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, 3ನೇ ಗೇಟ್, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ|| ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು ಇಲ್ಲಿಗೆ ಲಿಖಿತವಾಗಿ ಅಥವಾ ಇ-ಮೇಲ್ ugseatmatrix2025@gmail.com ಗೆ 7 ದಿನಗಳೊಳಗಾಗಿ ಸಲ್ಲಿಸುವಂತೆ ಕೋರಲಾಗಿದೆ. ಅವಧಿ ಮುಗಿದ ನಂತರ ಸ್ವೀಕೃತವಾಗುವ ಯಾವುದೇ ಆಕ್ಷೇಪಣೆ /ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.

2025-26ನೇ ಸಾಲಿಗೆ ರಾಜ್ಯದ ಸರ್ಕಾರಿ / ಅನುದಾನಿತ / ಅನುದಾನ ರಹಿತ ಇಂಜಿನಿಯರಿಂಗ್ ಕಾಲೇಜುಗಳು / ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಎಂಜಿನಿಯರಿಂಗ್ ಸ್ನಾತಕ ಕೋರ್ಸುಗಳಿಗೆ ಎಐಸಿಟಿಇ ಇವರಿಂದ ಪ್ರವೇಶಾತಿ ಅನುಮೋದನೆಯನ್ನು ನೀಡಿರುವ ಕಾಲೇಜುಗಳನ್ನು ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಪರಿಗಣಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

2025-26ನೇ ಶೈಕ್ಷಣಿಕ ಸಾಲಿನಲ್ಲಿ ವ್ಯತ್ತಿಪರ ಇಂಜಿನಿಯರಿಂಗ್ ಕೋರ್ಸುಗಳಿಗೆ ಸಂಬಂಧಿಸಿದಂತೆ ಎಐಸಿಟಿಇ ಅನುಮೋದನೆ ನೀಡಿರುವ ಕೋರ್ಸುಗಳಿಗೆ ಸಂಬಂಧಿಸಿದಂತೆ ಹೊಸ ಕೋರ್ಸುಗಳ ಪ್ರಾರಂಭ ಹಾಗೂ ಪ್ರವೇಶಾತಿ ಸಂಖ್ಯೆ ಹೆಚ್ಚಳಕ್ಕೆ ಸರ್ಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ (NOC) ಪಡೆಯದ ಸಂಸ್ಥೆ/ಕಾಲೇಜುಗಳ ಕೋರ್ಸುಗಳನ್ನು ಕೈಬಿಡಲಾಗಿರುತ್ತದೆ. ಅಂತಹ ಕೋರ್ಸುಗಳಿಗೆ ಸರ್ಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ (NOC) ಪಡೆದು, ಅದನ್ನು ಸಲ್ಲಿಸಿದಲ್ಲಿ ಅಂತಹ ಕಾಲೇಜುಗಳ ಕೋರ್ಸುಗಳನ್ನು ಅಂತಿಮ ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಪರಿಗಣಿಸಲು ಕ್ರಮವಹಿಸಲಾಗುವುದು ಎಂದೂ ತಿಳಿಸಲಾಗಿದೆ.

Related Articles

Comments (0)

Leave a Comment