ಅರ್ಹತಾ ಪರೀಕ್ಷೆ ನಡೆಸಿ ಶಿಕ್ಷಕರಿಗೆ ಬಡ್ತಿ ನೀಡಲು ನಿಯಮಾನುಸಾರ ಕ್ರಮ: ಮಧು ಬಂಗಾರಪ್ಪ
- by Suddi Team
- December 16, 2025
- 24 Views
ಬೆಳಗಾವಿ ಸುವರ್ಣ ವಿಧಾನಸೌಧ:ಕೇಂದ್ರಿಯ ದಾಖಲಾತಿ ಘಟಕ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಅರ್ಹತಾ ಪರೀಕ್ಷೆ ನಡೆಸಿ, ಅರ್ಹ ಸಹ ಶಿಕ್ಷಕರ ಪಟ್ಟಿಯನ್ನು ಸಲ್ಲಿಸಿದ ನಂತರ ಬಡ್ತಿ ನೀಡಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ,ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಪುಟ್ಟಣ್ಣ, ಶಶೀಲ್ ಜಿ. ನಮೋಶಿ, ಎಸ್.ವಿ.ಸಂಕನೂರ, ಡಿ.ಟಿ.ಶ್ರೀನಿವಾಸ್ (ಡಿ.ಟಿ.ಎಸ್) ರಾಮೋಜಿಗೌಡ, ಹೇಮಲತಾ ನಾಯಕ, ನಿರಾಣಿ ಹನುಮಂತಪ್ಪ ರುದ್ರಪ್ಪ ಹಾಗೂ ಇನ್ನೀತರರು ನಿಯಮ-330ರಡಿ ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳ ಬಗ್ಗೆ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಕೆಎಟಿಯಲ್ಲಿ ದಾಖಲಾಗಿರುವ ನಿಂದನಾ ದಾವೆಗಳು ಮುಕ್ತಾಯಗೊಂಡ ನಂತರ ಮತ್ತು ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ರಿವಿವ್ಯು ಪಿಟಿಶನ್ ( Review Petition) ಸಂಖ್ಯೆ:433/2025 ನಲ್ಲಿ ತೀರ್ಪು ಬಂದ ನಂತರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯಿಂದ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗೆ ನಿಯಮಗಳನುಸಾರ ಬಡ್ತಿ ನೀಡಲು ಕ್ರಮವಹಿಸಬೇಕಾಗಿರುತ್ತದೆ.ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡಲು ನಿಯಮಾನುಸಾರ ಕ್ರಮ ವಹಿಸಲಾಗುತ್ತಿದೆ ಎಂದರು.
ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಇವರಿಗೆ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದಕ್ಕೆ ಬಡ್ತಿ ನೀಡುವ ಸಂಬಂಧ ಅರ್ಹತಾ ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸುವಂತೆ ದಿನಾಂಕ:27.11.2025 ರಲ್ಲಿ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯಿಂದ ಕೋರಲಾಗಿದೆ. ಅದರಂತೆ ಕೇಂದ್ರಿಯ ದಾಖಲಾತಿ ಘಟಕ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಅರ್ಹತಾ ಪರೀಕ್ಷೆ ನಡೆಸಿ, ಅರ್ಹ ಸಹ ಶಿಕ್ಷಕರ ಪಟ್ಟಿಯನ್ನು ಸಲ್ಲಿಸಿದ ನಂತರ ಬಡ್ತಿ ನೀಡಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಸರ್ಕಾರಿ ಶಾಲೆಗಳು:
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಂಬಂಧಿಸಿದಂತೆ ಕಾಲ-ಕಾಲಕ್ಕೆ ಚಾಲ್ತಿ ನಿಯಮಗಳನುಸಾರ ನೀಡಬೇಕಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ಪ್ರತಿ ಮಾಹೆಯ 05ನೇ ತಾರೀಖಿನೊಳಗೆ ಸಕಾಲದಲ್ಲಿ ವೇತನ ಪಾವತಿಯಾಗುವಂತೆ ಕ್ರಮವಹಿಸಲಾಗಿದೆ. ಆದಾಗ್ಯೂ ಕೆಲವೊಂದು ಬೇಡಿಕೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ವೆಚ್ಚಗಳನ್ನು ಮತ್ತು ಸರ್ಕಾರದ ನೀತಿಯ ವಿಷಯಗಳು ಹಾಗೂ ಶಿಕ್ಷಕರ ಸಮಸ್ಯೆಗಳ ಕುರಿತು ಕಾಲ-ಕಾಲಕ್ಕೆ ಪ್ರಸ್ತಾವನೆಗಳನ್ನು ನಿಯಮಾನುಸಾರ ಇತ್ಯರ್ಥಪಡಿಸಲು ಕ್ರಮವಹಿಸಲಾಗುತ್ತಿದೆ. ಕಾಲ-ಕಾಲಕ್ಕೆ, ಸೇವಾ ಜೇಷ್ಠತಾ ಆಧಾರದ ಮೇಲೆ ಪದೋನ್ನತಿ / ಬಡ್ತಿಗಳನ್ನು ಚಾಲ್ತಿ ನಿಯಮಾನುಸಾರ ನೀಡಲಾಗುತ್ತಿದೆ. ಶಿಕ್ಷಕರುಗಳ ವಾರ್ಷಿಕ ವೇತನ ಬಡ್ತಿ ಕಾಲಮಿತಿ ಬಡ್ತಿ, ಸ್ವಯಂ ಚಾಲಿತ ವೇತನ ಬಡ್ತಿ ಮತ್ತು ವಿಶೇಷ ವೇತನ ಬಡ್ತಿಗಳನ್ನು ಹಾಗೂ ವೈದ್ಯಕೀಯ ಮರುಪಾವತಿ ವೆಚ್ಚದೊಂದಿಗೆ ಇತರ ಭತ್ಯೆಗಳನ್ನು ಸಹ ವಿಳಂಬಕ್ಕೆ ಅವಕಾಶ ನೀಡದಂತೆ ಕ್ರಮವಹಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ಕಾಲ ಕಾಲಕ್ಕೆ, ನೀಡಲಾಗುತ್ತಿದೆ. ಕೆಲವು ವಿಶೇಷ ಪ್ರಕರಣಗಳಲ್ಲಿ ನ್ಯಾಯಾಲಯದ ನಿರ್ದೇಶನಗಳನುಸಾರ ನೀಡಬೇಕಾದ ಭತ್ಯೆಗಳನ್ನು ಕಾಲಮಿತಿಯೊಳಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಖಾಸಗಿ ಅನುದಾನಿತ ಶಾಲೆಗಳು: ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ವತಿಯಿಂದ ವೇತನಾನುದಾನಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಅನುದಾನಿತ ಶಿಕ್ಷಕರುಗಳಿಗೆ ಸಂಬಂಧಿಸಿದಂತೆ ಬಡ್ತಿ ಹಾಗೂ ವೇತನಾನುದಾನಕ್ಕೆ ಸಂಬಂಧಿಸಿದ ಇತರೆ ಸೌಲಭ್ಯಗಳನ್ನು ಮಂಜೂರಾತಿ ಮಾಡುವ ಪ್ರಾಧಿಕಾರ ಶಿಕ್ಷಣ ಮಸೂದೆಗಳನ್ವಯ ಸಂಬಂಧಿಸಿದ ಶಾಲಾ ಆಡಳಿತ ಮಂಡಳಿಗಳಾಗಿರುತ್ತವೆ. ಈ ಶಿಕ್ಷಕರುಗಳಿಗೆ ಕಾಲಕಾಲಕ್ಕೆ, ವಾರ್ಷಿಕ ಬಡ್ತಿ ಹಾಗೂ ಇತರೆ ಕಾಲಮಿತಿ ಹೆಚ್ಚುವರಿ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡಿ ಅನುಮೋದನೆಗೆ ಸಲ್ಲಿಸಿದಲ್ಲಿ ಜಿಲ್ಲಾ ಉಪನಿರ್ದೇಶಕರ ಹಂತದಲ್ಲಿ ಅನುಮೋದನೆಗೆ ಕ್ರಮವಹಿಸಲಾಗುತ್ತದೆ. ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು/ಸಿಬ್ಬಂದಿಗಳಿಗೆ ಶಿಸ್ತು ಕ್ರಮ ಬಾಕಿ ಇದ್ದಲ್ಲಿ ಶಿಸ್ತು ಪ್ರಾಧಿಕಾರವಾದ ಆಡಳಿತ ಮಂಡಳಿ ಶಿಸ್ತು ಪ್ರಕರಣ ಇತ್ಯರ್ಥವಾಗುವವರೆಗೆ ಸದರಿ ಬಡ್ತಿಗಳನ್ನು ಕಾಲಕಾಲಕ್ಕೆ, ನೀಡದೇ ಇದ್ದು ಪ್ರಕರಣ ಇತ್ಯರ್ಥವಾದ ನಂತರ ಮಂಜೂರಾತಿಗೆ ಆಡಳಿತ ಮಂಡಳಿ ಕ್ರಮವಹಿಸಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೆ ಕ್ರಮವಹಿಸಲಾಗುವುದು.
ಖಾಸಗಿ ಅನುದಾನರಹಿತ ಶಾಲೆಗಳಿಗೆ ಸಂಬಂಧಿಸಿದ ಶಿಕ್ಷಕರುಗಳಿಗೆ ಸಂಬಂಧಿಸಿದ ಶಾಲಾ ಆಡಳಿತ ಮಂಡಳಿಯೇ ವೇತನ / ಸೇವಾಭದ್ರತೆ ಸೌಲಭ್ಯಗಳನ್ನು ಶಿಕ್ಷಣ ಮಸೂದೆ ನಿಯಮಗಳನ್ವಯ ನೀಡಬೇಕಿರುತ್ತದೆ. ಈ ಬಗ್ಗೆ ಇಲಾಖಾ ಸುತ್ತೋಲೆಗಳ ಮೂಲಕ ಕ್ರಮವಹಿಸಲು ಆಡಳಿತ ಮಂಡಳಿಗಳಿಗೆ ತಿಳಿಸಲಾಗಿರುತ್ತದೆ ಎಂದು ತಿಳಿಸಿದರು.
ಖಾಸಗಿ ಅನುದಾನ ರಹಿತ ಶಾಲೆಗಳು:ಖಾಸಗಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಗೆ ಸಂಬಂಧಿಸಿದಂತೆ ಖಾಸಗಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಾಲೆಗಳಿಗೆ ಸಂಬಂಧಿಸಿದ ಶಿಕ್ಷಕರುಗಳಿಗೆ ಸಂಬಂಧಿಸಿದ ಶಾಲಾ ಆಡಳಿತ ಮಂಡಳಿಯೇ ವೇತನ / ಸೇವಾಭದ್ರತೆ ಸೌಲಭ್ಯಗಳನ್ನು ಶಿಕ್ಷಣ ಮಸೂದೆ ನಿಯಮಗಳನ್ವಯ ನೀಡಬೇಕಿರುತ್ತದೆ. ಈ ಬಗ್ಗೆ ಇಲಾಖಾ ಸುತ್ತೋಲೆಗಳ ಮೂಲಕ ಕ್ರಮವಹಿಸಲು ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವರು ಸದನಕ್ಕೆ ವಿವರಿಸಿದರು.
Related Articles
Thank you for your comment. It is awaiting moderation.


Comments (0)