ಎಸ್ಎಸ್ಎಲ್ಸಿ ರಿಸಲ್ಟ್ನಲ್ಲಿ ಇನ್ಮುಂದೆ ಹಿಂದಿ ಅಂಕಗಳ ‘ಲೆಕ್ಕಾಚಾರ’ ಇಲ್ಲ! ಏನಿದು ಹೊಸ ಗ್ರೇಡಿಂಗ್ ಪ್ಲಾನ್?
- by Suddi Team
- March 27, 2026
- 8 Views
ಬೆಂಗಳೂರು: ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡ ತಗ್ಗಿಸಲು ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ತೃತೀಯ ಭಾಷೆಯಾದ ಹಿಂದಿ (ಸಂಸ್ಕೃತ ಸೇರಿದಂತೆ ಇತರೆ ಭಾಷೆಗಳು) ಅಂಕಗಳನ್ನು ಅಂತಿಮ ಫಲಿತಾಂಶಕ್ಕೆ ಪರಿಗಣಿಸದೆ, ಕೇವಲ ‘ಗ್ರೇಡಿಂಗ್’ ವ್ಯವಸ್ಥೆಗೆ ಸೀಮಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, “625 ಅಂಕಗಳ ಪೈಕಿ ತೃತೀಯ ಭಾಷೆಗೆ ನಿಗದಿಯಾಗಿದ್ದ 100 ಅಂಕಗಳನ್ನು ಇನ್ಮುಂದೆ ಒಟ್ಟು ಅಂಕಗಳ ಪಟ್ಟಿಗೆ ಸೇರಿಸಲಾಗುವುದಿಲ್ಲ. ಈ ವಿಷಯದಲ್ಲಿ ‘ಪಾಸ್ ಅಥವಾ ಫೇಲ್’ ಎಂಬ ಆತಂಕ ವಿದ್ಯಾರ್ಥಿಗಳಿಗೆ ಇರುವುದಿಲ್ಲ. ಬದಲಾಗಿ ಅವರ ಪ್ರದರ್ಶನಕ್ಕೆ ತಕ್ಕಂತೆ ಎ, ಬಿ, ಸಿ ಅಥವಾ ಡಿ ಗ್ರೇಡ್ಗಳನ್ನು ನೀಡಲಾಗುವುದು,” ಎಂದು ಸ್ಪಷ್ಟಪಡಿಸಿದರು.
ಹಿಂದಿ ಅಂಕಗಳ ಹೊರೆ ಮುಕ್ತ: ತೃತೀಯ ಭಾಷೆಯ ಅಂಕಗಳು ಇನ್ಮುಂದೆ ರಿಸಲ್ಟ್ ನಿರ್ಧರಿಸುವುದಿಲ್ಲ. ಇದು ವಿದ್ಯಾರ್ಥಿಗಳು ಇತರ ಕೋರ್ ವಿಷಯಗಳ ಮೇಲೆ ಹೆಚ್ಚಿನ ಗಮನ ಹರಿಸಲು ಸಹಕಾರಿಯಾಗಲಿದೆ.
ಉಚಿತ ನೈತಿಕ ಶಿಕ್ಷಣ: ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಉದ್ದೇಶದಿಂದ ಪ್ರಸಕ್ತ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ‘ನೈತಿಕ ಶಿಕ್ಷಣ’ ಪುಸ್ತಕಗಳನ್ನು ಸರ್ಕಾರವೇ ಉಚಿತವಾಗಿ ವಿತರಿಸಲಿದೆ.
ಸೋಷಿಯಲ್ ಮೀಡಿಯಾಕ್ಕೆ ಬ್ರೇಕ್: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿರ್ಬಂಧಿಸುವ ಪ್ರಸ್ತಾಪಕ್ಕೆ ಸದನದಲ್ಲಿ ಬೆಂಬಲ ವ್ಯಕ್ತವಾಗಿದೆ. ಮಕ್ಕಳ ಮೊಬೈಲ್ ಬಳಕೆಯ ಮೇಲೆ ಪೋಷಕರು ನಿಗಾ ವಹಿಸುವಂತೆ ಸಚಿವರು ಮನವಿ ಮಾಡಿದ್ದಾರೆ.
ವಾರ್ಷಿಕ 3 ಪರೀಕ್ಷೆ: ವಿದ್ಯಾರ್ಥಿಗಳಿಗೆ ಅಂಕ ಸುಧಾರಿಸಿಕೊಳ್ಳಲು ವಾರ್ಷಿಕ 3 ಪರೀಕ್ಷೆಗಳ ಅವಕಾಶವನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.
Related Articles
Thank you for your comment. It is awaiting moderation.


Comments (0)