ನೀಟ್ ರೋಲ್ ನಂಬರ್ ದಾಖಲಿಸಲು ಜುಲೈ 8ರವರೆಗೆ ಅವಕಾಶ
- by Suddi Team
- July 5, 2025
- 48 Views

ಬೆಂಗಳೂರು: ಯುಜಿಸಿಇಟಿಗೆ ಅರ್ಜಿ ಸಲ್ಲಿಸಿರುವ ಹಾಗೂ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್ ಅನ್ನು ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ.
ಜು.8ರಂದು ಬೆಳಿಗ್ಗೆ 11ರವರೆಗೆ ರೋಲ್ ನಂಬರ್ ದಾಖಲಿಸಲು ಅವಕಾಶ ಇರುತ್ತದೆ. ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳಿಗೆ ಪ್ರವೇಶ ಪಡೆಯಬೇಕೆನ್ನುವ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ನೀಟ್ ರೋಲ್ ನಂಬರ್ ದಾಖಲಿಸಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು ದಾಖಲಿಸುವ ರೋಲ್ ನಂಬರ್ ಅನ್ನು ಎನ್ ಟಿಎ ಡಾಟಾದೊಂದಿಗೆ ತಾಳೆ ಮಾಡಿ ಯುಜಿನೀಟ್ ಅರ್ಹತೆ ಪಡೆದಿದ್ದಲ್ಲಿ ಅರ್ಜಿ ನಮೂನೆ ಪ್ರತಿ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ನಂತರ ವೆರಿಫಿಕೇಷನ್ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಜುಲೈ 7ರಿಂದ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ:
ನೀಟ್ ಪರೀಕ್ಷೆ ಯಲ್ಲಿ ಅರ್ಹತೆ ಪಡೆದಿರುವವರು ಹಾಗೂ ಇದುವರೆಗೂ ಕೆಇಎಯಲ್ಲಿ ಅರ್ಜಿ ಸಲ್ಲಿಸದೇ ಇರುವವರು ಜು.7ರಿಂದ 10ರವರೆಗೆ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗಿದೆ.
ಹೊಸದಾಗಿ ಅರ್ಜಿ ಸಲ್ಲಿಸಿದವರ ದಾಖಲೆ ಪರಿಶೀಲನೆಗೆ ನಂತರದ ದಿನಗಳಲ್ಲಿ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಅವರು ವಿವರಿಸಿದರು.
ಜು.8ರಿಂದ ಎನ್ ಆರ್ ಐ ವಾರ್ಡ್ ದಾಖಲೆ ಪರಿಶೀಲನೆ:
ಅರ್ಜಿಯಲ್ಲಿ ಎನ್ ಆರ್ ಐ ವಾರ್ಡ್ ಕ್ಲೇಮ್ ಮಾಡಿರುವ ಎಲ್ಲ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಸಮೇತ ಜುಲೈ 8ರಿಂದ 10ರವರೆಗೆ ಕೆಇಎ ಕಚೇರಿಗೆ ಖುದ್ದು ಹಾಜರಾಗಿ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಪ್ರಸನ್ನ ತಿಳಿಸಿದ್ದಾರೆ.
ಮೊದಲ ದಿನ, ನೀಟ್ ನಲ್ಲಿ ನಾಲ್ಕು ಲಕ್ಷದವರೆಗೆ ರಾಂಕ್ ಪಡೆದವರು ಹಾಗೂ ಎರಡನೇ ದಿನ 8 ಲಕ್ಷ ಮತ್ತು ಮೂರನೇ ದಿನ 12 ಲಕ್ಷದವರೆಗೆ ರಾಂಕ್ ಪಡೆದವರು ದಾಖಲೆ ಪರಿಶೀಲನೆ ಗೆ ಬರಬೇಕು ಎಂದು ಅವರು ವಿವರಿಸಿದ್ದಾರೆ.
ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು: ದಾಖಲೆ ಪರಿಶೀಲನೆ:
ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಪ್ರವೇಶಕ್ಕೆ ಅಪೇಕ್ಷೆ ಪಟ್ಟಿರುವ ಕ್ಯಾಟಗರಿ-2ರಿಂದ 8ರವರೆಗಿನ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಜುಲೈ 9 ಮತ್ತು 10ರಂದು ಕಾಲೇಜಿನಲ್ಲೇ ನಡೆಯಲಿದೆ. ಕೋರಮಂಗಲದ ಮೆಡಿಕಲ್ ಕಾಲೇಜಿನ ಕೌನ್ಸಿಲ್ ಕೊಠಡಿಯಲ್ಲಿ ಪರಿಶೀಲನೆ ನಡೆಯಲಿದ್ದು, ಮೂಲ ದಾಖಲೆಗಳ ಸಮೇತ ಎರಡೂ ದಿನ ಖುದ್ದು ಹಾಜರಾಗಬೇಕು ಎಂದು ಅವರು ಕೋರಿದ್ದಾರೆ.ಹೆಚ್ಚಿನ ವಿವರಗಳಿಗೆ ಕೆಇಎ ವೆಬ್ ಸೈಟ್ ಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
Related Articles
Thank you for your comment. It is awaiting moderation.
Comments (0)