ರಾಷ್ಟ್ರವಿಕಾಸದ ಮೂಲಶಕ್ತಿ ಮಾನವಸಂಪನ್ಮೂಲ: ಬಿಇಓ ರಾಮಕೃಷ್ಣ ನುಡಿ
- by Suddi Team
- February 2, 2026
- 8 Views
ಧಾರವಾಡ: ವಿದ್ಯಾರ್ಥಿಗಳು ಆಳವಾದ ಜ್ಞಾನಾರ್ಜನೆಯೊಂದಿಗೆ ಶ್ರೇಷ್ಠ ಕೌಶಲ, ಕ್ರಿಯಾಶೀಲತೆ, ಸಮಯಪ್ರಜ್ಞೆ ಹಾಗೂ ಮೇರು ಮೌಲ್ಯಗಳನ್ನು ರೂಢಿಸಿಕೊಂಡು ದೇಶ ಬಯಸುವ ಉತ್ಕೃಷ್ಟ ಮಾನವಸಂಪನ್ಮೂಲವಾಗಿ ಬೆಳೆಯಬೇಕು. ರಾಷ್ಟ್ರವಿಕಾಸದ ಮೂಲಶಕ್ತಿ ಮಾನವಸಂಪನ್ಮೂಲವೇ ಆಗಿದೆ ಎಂದು ಧಾರವಾಡ ಗ್ರಾಮೀಣ ತಾಲೂಕು ಬಿಇಓ ರಾಮಕೃಷ್ಣ ಸದಲಗಿ ನುಡಿದರು.
ಅವರು ತಾಲೂಕಿನ ತಿಮ್ಮಾಪೂರ ವಿದ್ಯಾಚೇತನ ಶಿಕ್ಷಣ ಸಂಸ್ಥೆಯ ಜ್ಞಾನಜ್ಯೋತಿ ವಿದ್ಯಾಲಯದ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವತಿಯಿಂದ ಸಮೀಪದ ಠಾಕೂರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜ್ಞಾನಜ್ಯೋತಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ನಿರಂತರ ಕಲಿಕಾ ಮನೋಭಾವ, ಸೃಜನಶೀಲತೆ, ಸಂಶೋಧನಾ ದೃಷ್ಟಿ, ನಾಯಕತ್ವ, ಪ್ರಾಮಾಣಿಕತೆ, ಹೊಣೆಗಾರಿಕೆ, ಸಹಾನುಭೂತಿ, ಸಹನಶೀಲತೆ, ಆತ್ಮವಿಶ್ವಾಸ ಬೆಳೆಸಿಕೊಂಡಾಗ ಸಶಕ್ತ ಮಾನವಸಂಪನ್ಮೂಲವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳ ಪಾಲಕರು-ಪೋಷಕರು ವ್ಯಾಪಕ ಕಾಳಜಿವಹಿಸಬೇಕೆಂದು ಸಲಹೆ ನೀಡಿದರು.
ಇನ್ನೋರ್ವ ಅತಿಥಿ ಹಿರಿಯ ಪತ್ರಕರ್ತ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ವಿದ್ಯಾರ್ಥಿಗಳ ಜೀವನ ಒಂದು ತಪಸ್ಸಿದ್ದಂತೆ. ಅಲ್ಲಿ ಪರಿಶ್ರಮದಿಂದ ಗಳಿಸಿದ ಜ್ಞಾನ, ಅನುಭವ, ನಿರಂತರ ಶಿಸ್ತು, ವ್ಯಾಸಂಗದ ಬದ್ಧತೆ ಇದ್ದಾಗ ನಿರ್ದಿಷ್ಟ ಗುರಿಯನ್ನು ಸಾಧಿಸಿ ಸಂಭ್ರಮಿಸಲು ಸಾಧ್ಯವಾಗುತ್ತದೆ ಎಂದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ, ಕವಿವಿ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಎಸ್. ರಮಣೆ, ಕರ್ನಾಟಕ ಕಾನೂನು ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಮಂಜಣ್ಣ ಜಂಗವಾಡ, ಕಲಘಟಗಿ ತಾಲೂಕು ಪಾಳೆ ಗ್ರಾಮದ ಎಸ್‌ಎಂಜಿ ಸಂಸ್ಥೆ ಅಧ್ಯಕ್ಷ ಶಿವಾನಂದ ಜವಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿದ್ಯಾಚೇತನ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಂಗಯ್ಯ ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಶಿಕ್ಷಕಿ ಸೆರೂನ್ ಲಗಳಿ ಸ್ವಾಗತಿಸಿದರು. ಮುಖ್ಯಾಧ್ಯಾಪಕಿ ಬಿಂದು ಲಗಳಿ ನಿರೂಪಿಸಿದರು. ಶಾಲಾ ಆಡಳಿತ ಮಂಡಳಿ ನಿರ್ದೇಶಕ ಮೃತ್ಯುಂಜಯ ಹಿರೇಮಠ ವಂದಿಸಿದರು. ಜ್ಞಾನಜ್ಯೋತಿ ಉತ್ಸವದಲ್ಲಿ ಪ್ರದರ್ಶನಗೊಂಡ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
Related Articles
Thank you for your comment. It is awaiting moderation.


Comments (0)