ವಿಜ್ಞಾನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಆಕ್ಸಿಯಂ-4 ಮಿಷನ್ನ ಅಂತರಿಕ್ಷ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲರೊಂದಿಗೆ ಸಂವಾದಕ್ಕೆ ಅವಕಾಶ
- by Suddi Team
- September 9, 2025
- 102 Views

ಬೆಂಗಳೂರು: ಆಕ್ಸಿಯಂ-4 ಮಿಷನ್ನ ಅಂತರಿಕ್ಷ ಯಾತ್ರಿಕರಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸುವ ಅವಕಾಶ ಆದಷ್ಟು ಬೇಗ ಸಿಗಲಿದೆ.ಇದಕ್ಕೆ ರಾಜ್ಯ ಸರ್ಕಾರವೇ ಆಸಕ್ತಿ ವಹಿಸಿ ಅವಕಾಶ ಕಲ್ಪಿಸುತ್ತಿದೆ.
ಇಸ್ರೋ ಹಾಗೂ ಜೆಎನ್ಪಿ ಸಹಯೋಗದಲ್ಲಿ ಶೀಘ್ರದಲ್ಲೇ ಜವಾಹರಲಾಲ್ ನೆಹರು ಪ್ಲಾನೆಟೇರಿಯಂನ ಯು.ಆರ್.ರಾವ್ ಭವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಂತರಿಕ್ಷ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರೊಂದಿಗೆ ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಅವರು,ಅಂತರಿಕ್ಷ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಇಸ್ರೋ ಅಧ್ಯಕ್ಷ ಡಾ. ವಿ ನಾರಾಯಣ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮ ಮನವಿಯಂತೆ, ಆಕ್ಸಿಯಂ-4 ಮಿಷನ್ನ ಅಂತರಿಕ್ಷ ಯಾತ್ರಿಕರಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರೊಂದಿಗೆ ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಇಸ್ರೋ ಒಪ್ಪಿಗೆ ನೀಡಿದೆ. ಈ ಸಂವಾದ ಕಾರ್ಯಕ್ರಮವು ಶೀಘ್ರದಲ್ಲೇ ಜವಾಹರಲಾಲ್ ನೆಹರು ಪ್ಲಾನೆಟೇರಿಯಂನ ಯು.ಆರ್.ರಾವ್ ಭವನದಲ್ಲಿ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಹೈಸ್ಕೂಲ್ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೇರವಾಗಿ ಅಂತರಿಕ್ಷ ಯಾತ್ರಿಕರೊಂದಿಗೆ ಸಂವಾದಿಸಲು ಇದು ಅವಕಾಶ ಕಲ್ಪಿಸಲಿದೆ. ರಾಜ್ಯದ ಇನ್ನಿತರೆ ಭಾಗಗಳ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಾದೇಶಿಕ ವಿಜ್ಞಾನ ಕೇಂದ್ರಗಳಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ವ್ಯವಸ್ಥೆ ಮಾಡಲಾಗುವುದು.ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ವಿಜ್ಞಾನ, ಸಂಶೋಧನೆ ಹಾಗೂ ಬಾಹ್ಯಾಕಾಶ ಅನ್ವೇಷಣೆಯತ್ತ ಪ್ರೇರೇಪಿಸುತ್ತವೆ. ಕರ್ನಾಟಕವು ಸದಾ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದು, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಕುತೂಹಲ ಮತ್ತು ಹೊಸ ಆಲೋಚನೆಯನ್ನು ಬೆಳೆಸಲು ನೆರವಾಗುತ್ತವೆ ಎಂದು ಅವರು ತಿಳಿಸಿದರು.
“ಕರ್ನಾಟಕದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಬದ್ದವಾಗಿದೆ. ಇಸ್ರೋ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುತ್ತಿರುವ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅಂತರಿಕ್ಷ ಯಾತ್ರಿಕರೊಂದಿಗೆ ಸಂವಾದಿಸಲು ಅಪರೂಪದ ಅವಕಾಶ ಒದಗಿಸುತ್ತದೆ. ಇದು ಅವರಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುವ ಉತ್ಸಾಹವನ್ನು ಇನ್ನಷ್ಟು ಪೋಷಿಸಲಿದೆ,” ಎಂದು ಸಚಿವ ಭೋಸರಾಜು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Articles
Thank you for your comment. It is awaiting moderation.
Comments (0)