ಸುಜಾತಾ ಭಟ್ ಗೆ ಸೂಕ್ತ ರಕ್ಷಣೆ ಒದಗಿಸಿ; ಎಸ್ಐಟಿಗೆ ಮಹಿಳಾ ಆಯೋಗ ಪತ್ರ
- by Suddi Team
- August 29, 2025
- 145 Views

ಬೆಂಗಳೂರು: ಎಸ್ಐಟಿ ರಚನೆಯಾಗಿ ಧರ್ಮಸ್ಥಳ ವಿಚಾರವಾಗಿ ತನಿಖೆ ನಡೆಯುತ್ತಿರುವ ವೇಳೆ ಸುಜಾತಾ ಭಟ್ ಅವರ ಮೇಲಾಗುತ್ತಿರುವ ಮಾನಸಿಕ ಕಿರುಕುಳವು ಮಿತಿಮೀರಿದೆ. ಸತ್ಯಾಸತ್ಯತೆಗಳು ತನಿಖೆಯಿಂದ ಹೊರಬರಬೇಕೇ ಹೊರತು, ಮಹಿಳೆಯ ತೇಜೋವಧೆಯಿಂದಲ್ಲ. ಈ ನಿಟ್ಟಿನಲ್ಲಿ ಅವರಿಗೆ ಸೂಕ್ತ ಭದ್ರತೆ ಒದಗಿಸಿ, ಅವರ ಅಹವಾಲನ್ನು ನಿರ್ಭೀತಿಯಿಂದ ಸಲ್ಲಿಸುವ ವಾತಾವರಣ ಒದಗಿಸಲು ಪೊಲೀಸ್ ಆಯುಕ್ತರಿಗೆ ರಾಜ್ಯ ಮಹಿಳಾ ಆಯೋಗ ತಿಳಿಸಿದೆ.
ಈ ಸಂಬಂಧ ಎಸ್ಐಟಿಗೆ ಪತ್ರ ಬರೆದಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಪತ್ರವನ್ನು ಪರಿಗಣಿಸುವ ಮೂಲಕ, ಧರ್ಮಸ್ಥಳದಲ್ಲಿ ಮಹಿಳೆಯರ/ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ, ಕೊಲೆ, ನಾಪತ್ತೆ, ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಸರ್ಕಾರವು ತಮ್ಮ ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಎಸ್ಐಟಿ ರಚನೆಗಾಗಿ ಉಲ್ಲೇಖ ಮಾಡಲಾದ ಅನನ್ಯಾ ಭಟ್ ನಾಪತ್ತೆ ಪ್ರಕರಣದ ದೂರುದಾರರಾದ ಸುಜಾತಾ ಭಟ್ ಅವರನ್ನು ಕಳೆದ ಎರಡು ವಾರಗಳಿಂದ ಮಾಧ್ಯಮದವರು ನಿರಂತರವಾಗಿ ಹಿಂಬಾಲಿಸಿ ಹೇಳಿಕೆ ನೀಡಲು ಪೀಡಿಸುವುದು, ಅವರನ್ನು ತೇಜೋವಧೆ ಮಾಡಿ ಹೀಯಾಳಿಸಿ ಸುದ್ದಿ ಮಾಡುವುದು, ತಡ ರಾತ್ರಿಯಲ್ಲಿ ಅವರ ಮನೆಗೆ ನುಗ್ಗಿ ವೀಡಿಯೋ ಚಿತ್ರೀಕರಣ ಮಾಡುವುದು. ಕಾರಿನಲ್ಲಿ ಕೂರಿಸಿಕೊಂಡು ತನಿಖೆಯ ದಿಕ್ಕು ತಪ್ಪಿಸುವ ಹಾಗೆ ವೈರುಧ್ಯಗಳಿಂದ ಕೂಡಿದ ಹೇಳಿಕೆ ಪಡೆದು, ಅವರನ್ನು ಮಾನಸಿಕವಾಗಿ ಕುಗ್ಗಿಸುವ ವರದಿ ಪ್ರಸಾರ ಮಾಡಿರುವುದನ್ನು ರಾಜ್ಯ ಮಹಿಳಾ ಆಯೋಗವು ಗಮನಿಸಿರುತ್ತದೆ. ಮಹಿಳೆಯರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡಕ್ಕೆ ಮಹಿಳೆಯರು, ಸಂತ್ರಸ್ಥರು, ನಿರ್ಭೀತಿಯಿಂದ ದೂರನ್ನು ನೀಡಲು ಅವಕಾಶ ಮಾಡಿಕೊಟ್ಟು, ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಟ್ಟು ಅವರಿಗೆ ರಕ್ಷಣೆ ನೀಡುವಂತೆ ಪತ್ರದ ಮೂಲಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಒತ್ತಾಯಿಸಿದ್ದಾರೆ.
ಈ ಪ್ರಕರಣದ ದೂರುದಾರರಾದ ಸುಜಾತಾ ಭಟ್ ರವರು ಮಾಧ್ಯಮಗಳ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿ ಹೋಗುವ ಸಂಭವವಿರುತ್ತದೆ. ಸದರಿ ವಿಷಯವನ್ನು ರಾಜ್ಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ತಾವು ಕೂಡಲೇ, ವಿಶೇಷ ತನಿಖಾ ತಂಡದಿಂದ ಸುಜಾತಾ ಭಟ್, ಇವರಿಗೆ ಭದ್ರತೆ ಒದಗಿಸಿ, ನಿರ್ಭೀತಿಯಿಂದ ಅವರು, ಅಹವಾಲು ಸಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ತುರ್ತಾಗಿ ಕಳುಹಿಸಿಕೊಡುವಂತೆ ಕೋರಿದ್ದಾರೆ.
Related Articles
Thank you for your comment. It is awaiting moderation.
Comments (0)