ಬೆಂಗಳೂರಿನ ಕೆಎಸ್ಪಿಸಿಬಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ; 27 ತಂಡಗಳಿಂದ ಶೋಧ
- by Suddi Team
- June 25, 2025
- 127 Views

ಬೆಂಗಳೂರು: ಕರ್ತವ್ಯ ನಿರ್ಲಕ್ಷ್ಯ, ದುರಾಡಳಿತ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತಿತರ ಕಾನೂನುಬಾಹಿರ ಚಟುವಟಿಕೆ ಆರೋಪ ಸಂಬಂಧ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಕಚೇರಿಗಳ ಮೇಲೆ ದಿಢೀರ್ ಲೋಕಾಯುಕ್ತ ದಾಳಿ ನಡೆಸಲಾಗಿದೆ.
ಹಣಕ್ಕೆ ಬೇಡಿಕೆ, ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದವು. ಇದರಿಂದ, ಕೆಎಸ್ಪಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಸಂಬಂಧ ಶೋಧ ನಡೆಸಲು ನ್ಯಾಯಾಂಗ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ 27 ತಂಡಗಳನ್ನು ರಚಿಸಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು, ಶೋಧ ವಾರಂಟ್ ಹೊರಡಿಸಿದ್ದರು.
ಅದರಂತೆ, ಬುಧವಾರ ಮಧ್ಯಾಹ್ನ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡ ಬೆಂಗಳೂರಿನ ಎಂ.ಜಿ. ರಸ್ತೆ, ಬಸವೇಶ್ವರ ನಗರ ಹಾಗೂ ಪೀಣ್ಯದಲ್ಲಿರುವ ಕೆಎಸ್ಪಿಸಿಬಿ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿವೆ. ಕಚೇರಿಗಳಲ್ಲಿ ರಿಜಿಸ್ಟರ್, ಕಡತ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಕೆಎಸ್ಪಿಸಿಬಿಯ ಸದಸ್ಯ ಕಾರ್ಯದರ್ಶಿ ಕಚೇರಿಗಳು ಮತ್ತಿತರ ಕಚೇರಿಗಳನ್ನು ಹೊಂದಿರುವ ಎಂಜಿ ರಸ್ತೆಯಲ್ಲಿರುವ ಪ್ರಧಾನ ಕಚೇರಿಗೆ ಭೇಟಿ ನೀಡಿ, ಕಟ್ಟಡದಲ್ಲಿ ಒಂಬತ್ತು ಕಚೇರಿಗಳನ್ನು ಪರಿಶೀಲಿಸಿದರೆ, ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ನ್ಯಾಯಾಂಗ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡದೊಂದಿಗೆ ಬಸವೇಶ್ವರನಗರದಲ್ಲಿರುವ ಕೆಎಸ್ಪಿಸಿಬಿ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ, ಅಲ್ಲಿನ 13 ಕಚೇರಿಗಳಲ್ಲಿ ಶೋಧ ನಡೆಸುತ್ತಿದ್ದಾರೆ.
ಮತ್ತೊಂದೆಡೆ, ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದ ಮತ್ತೊಂದು ತಂಡ ಪೀಣ್ಯ ಕೈಗಾರಿಕಾ ಎಸ್ಟೇಟ್ನಲ್ಲಿರುವ ಕೆಎಸ್ಪಿಸಿಬಿಯ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ, ಸ್ಥಳದಲ್ಲಿರುವ 5 ಕಚೇರಿಗಳಲ್ಲಿ ಶೋಧ ನಡೆಸುತ್ತಿದ್ದಾರೆ.
Related Articles
Thank you for your comment. It is awaiting moderation.
Comments (0)