ಇ-ಸಿಗರೇಟ್,ಹಕ್ಕಾ ಫ್ಲೇವರ್,ವಿದೇಶಿ ಸಿಗರೇಟ್ ಮಾರುತ್ತಿದ್ದ ವ್ಯಕ್ತಿ ಬಂಧನ

ಬೆಂಗಳೂರು: ನಿಷೇಧಿತ ಇ-ಸಿಗರೇಟ್, ಹುಕ್ಕಾ ಪ್ಲೇವರ್ ಹಾಗೂ ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಕಾರ್ಯಾಚರಣೆ ವೇಳೆ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು, ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಕಾರ್ಯಾಚರಣೆಯಲ್ಲಿ ನಿಷೇಧಿತ ಇ-ಸಿಗರೇಟ್, ಹುಕ್ಕಾ ಪ್ಲೇವರ್ ಹಾಗೂ ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಬಗ್ಗೆ ಮಾಹಿತಿ ನೀಡಿದರು.

ಆರೋಪಿಯ ಅಂಗಡಿಯಲ್ಲಿ 201 ಇ-ಸಿಗರೇಟುಗಳು, 297 ವಿವಿಧ ಹುಕ್ಕಾ ಪ್ಲೇವರ್‌ಗಳು ಹಾಗೂ 06 ವಿದೇಶಿ ಸಿಗರೇಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹70,000/- ಆಗಿದೆ. ಅಂಗಡಿಯ ಮಾಲೀಕನು ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ ಎಂದರು.

ಬೆಂಗಳೂರು ನಗರ ಪೊಲೀಸರು ಸಾರ್ವಜನಿಕ ಆರೋಗ್ಯ ಮತ್ತು ಕಾನೂನು ಪಾಲನೆಗಾಗಿ ಬದ್ಧರಾಗಿದ್ದು, ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆತಲ್ಲಿ 1908 ಕ್ಕೆ ಕರೆಮಾಡಲು ಕೋರಿದರು.

ಸಿಸಿಬಿ ಮಾದಕದ್ರವ್ಯ ನಿಗ್ರಹ ದಳವು ಅಕ್ರಮ ಮಾದಕವಸ್ತು ವ್ಯಾಪಾರದಲ್ಲಿ ತೊಡಗಿದ್ದ ಇಬ್ಬರು ಹೊರರಾಜ್ಯದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1 ಕೆ.ಜಿ 200 ಗ್ರಾಂ ಗಾಂಜಾ, 220 ಗ್ರಾಂ ಹೈಡ್ರೋ ಗಾಂಜಾ, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ ಹಾಗೂ ಎರಡು ಐಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾದಕವಸ್ತುಗಳು ಮತ್ತು ಇತರ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹13 ಲಕ್ಷವಾಗಿದೆ. ಮಾದಕ ವಸ್ತು ಸಂಬಂಧಿತ ಅಪರಾಧಗಳನ್ನು ನಿರ್ಮೂಲನೆ ಮಾಡಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸಲು ಬೆಂಗಳೂರು ನಗರ ಪೊಲೀಸರು ಬದ್ಧರಾಗಿದ್ದಾರೆ ಎಂದರು.

ಸಿ.ಸಿ.ಬಿ. ಮಾದಕದ್ರವ್ಯ ನಿಗ್ರಹ ದಳದ ಕಾರ್ಯಾಚರಣೆಯಲ್ಲಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು ₹1,38,000 ಮೌಲ್ಯದ 1 ಕೆ.ಜಿ 940 ಗ್ರಾಂ ಗಾಂಜಾ, 13.5 ಗ್ರಾಂ ಎಂಡಿಎಂಎ (ಕ್ರಿಸ್ಟಲ್), ಹಾಗೂ ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.  ನಾಗರಿಕರು ಯಾವುದೇ ಅನುಮಾನಾಸ್ಪದ ಮಾದಕ ದ್ರವ್ಯ ಸಂಬಂಧಿತ ಚಟುವಟಿಕೆಗಳನ್ನು ಅವರ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಲು ಅಥವಾ ತ್ವರಿತ ಕ್ರಮಕ್ಕಾಗಿ #namma112  ಸಹಾಯವಾಣಿಗೆ ಕರೆ ಮಾಡಲು ನಗರ ಪೊಲೀಸ್ ಆಯುಕ್ತರ ಮನವಿ ಮಾಡಿದ್ದಾರೆ.

ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಸರ್ಕಾರದಿಂದ ನಿಷೇಧಿತ ತಂಬಾಕು/ನಿಕೋಟಿನ್ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಗೊಡೌನ ಮೇಲೆ ದಾಳಿ ನಡೆಸಿದ್ದು, ಸದರಿ ಕಾರ್ಯಾಚರಣೆಯಲ್ಲಿ ಗಣೇಶ್ 701 ಟೊಬ್ಯಾಕೋ ಪ್ಯಾಕೆಟ್‌ಗಳಿರುವ 155 ಚೀಲಗಳು, ಕೂಲ್ ಲಿಪ್ ಟೊಬ್ಯಾಕೋ ಇರುವ 160 ಚೀಲಗಳು, ಎಸ್.ಜಿ.ಟಿ-1 ಟೊಬ್ಯಾಕೋ ಇರುವ 60 ಬಾಕ್ಸ್‌ಗಳು ಹಾಗೂ ಸ್ವಾಗತ ಪಾನ್ ಮಸಾಲಾ ಇರುವ 60 ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು. ವಶಪಡಿಸಿದ ವಸ್ತುಗಳ ಒಟ್ಟು ಮೌಲ್ಯ  ರೂ.61,82,500/- ಆಗಿದೆ. ಜೊತೆಗೆ, ತಂಬಾಕು/ನಿಕೋಟಿನ್ ಪದಾರ್ಥಗಳ ಸಾಗಣೆಗೆ ಬಳಸಲಾಗುತ್ತಿದ್ದ ಒಂದು ಗೂಡ್ಸ್ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ,ಮಾದಕ ವಸ್ತು ಸಂಬಂಧಿತ ಅಪರಾಧಗಳನ್ನು ನಿರ್ಮೂಲನೆ ಮಾಡಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸಲು ಬೆಂಗಳೂರು ನಗರ ಪೊಲೀಸರು ಬದ್ಧರಾಗಿದ್ದಾರೆ ಎಂದು ತಿಳಿಸಿದರು.

ವಿಶ್ವ ತಂಬಾಕು ರಹಿತ ದಿನದಂದು (31.05.2025) ಕೈಗೊಂಡ ವ್ಯಾಪಕ ತಂಬಾಕು ವಿರೋಧಿ ಉಪಕ್ರಮಗಳ ಕುರಿತು ತಿಳಿಸಿದರು. ಇದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಅಭಿಯಾನಗಳು ಸೇರಿವೆ. ಅಲ್ಲದೇ COTPA (ತಿದ್ದುಪಡಿ) ಕಾಯ್ದೆ 2023 ರ ಕಟ್ಟುನಿಟ್ಟಿನ ಅನುಷ್ಠಾನದ ಮೇಲೆ ಒತ್ತು ನೀಡಿದ ಬಗ್ಗೆ ಮಾಹಿತಿ ನೀಡಿದರು. ಈ ಕಾಯ್ದೆಯು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಅಥವಾ ವೇಪಿಂಗ್ ಮಾಡುವವರಿಗೆ ₹1,000 ವರೆಗಿನ ದಂಡ, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ ಹುಕ್ಕಾ ಬಾರ್‌ಗಳ ಮೇಲಿನ ನಿಷೇಧ, ಮತ್ತು ಪುನರಾವರ್ತಿತ ತಂಬಾಕು ಜಾಹೀರಾತು ಅಪರಾಧಗಳಿಗೆ 5 ವರ್ಷಗಳವರೆಗಿನ ಜೈಲು ಶಿಕ್ಷೆಯನ್ನು ಒಳಗೊಂಡಿದೆ‌ ಎಂದು ತಿಳಿಸಿದರು.

Related Articles

Comments (0)

Leave a Comment