ದೆಹಲಿಯಲ್ಲಿ ಕಾರು ಸ್ಪೋಟ: ರಾಜ್ಯದಲ್ಲಿ ಹೈ ಅಲರ್ಟ್

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಸಮೀಪದಲ್ಲಿ ಕಾರು ಸ್ಪೋಟ ನಡೆದಿದ್ದು, 10 ಮಂದಿ ಮೃತಪಟ್ಟಿದ್ದು, 30 ಕ್ಕೂ ಹೆಚ್ಚಿನ ಜನರಿಗೆ ಗಾಯಗಳಾಗಿವೆ. ಘಟನೆ ಸಂಬಂಧ ಕಾರು ಮಾಲೀಕರ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಕೆಂಪು ಕೋಟೆ ಸಮೀಪದ ಲಾಲ್‌ ಕಿಲಾ ಮೆಟ್ರೋ ನಿಲ್ದಾಣ ಗೇಟ್ ಸಂಖ್ಯೆ-1ರ ಬಳಿ ಸೋಮವಾರ ಸಂಜೆ 6:45 ರಿಂದ 7 ಗಂಟೆ ಅವಧಿಯಲ್ಲಿ ಕಾರು ಸ್ಫೋಟ ಸಂಭವಿಸಿದ್ದು,ಕಾರಿನಲ್ಲಿದ್ದ ವ್ಯಕ್ತಿಯ ದೇಹ ಛಿದ್ರವಾಗಿ 150 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ. ಕಾರಿನ ಹಿಂದೆ ಮುಂದೆ ಇದ್ದ ವಾಹನಗಳಿಗೂ ಬೆಂಕಿ ಹತ್ತಿದ್ದು ಘಟನೆಗೆ ಭಯೋತ್ಪಾದಕರ ನಂಟಿನ ಬಗ್ಗೆ ತನಿಖೆಯನ್ನು ಎನ್ಐಎ ಕೈಗೆತ್ತಿಕೊಂಡಿದೆ.

ಘಟನೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಅಲರ್ಟ್ ಘೋಷಿಸಲಾಗಿದೆ ಈ ಕುರಿತು ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ,ದೆಹಲಿಯ ಸ್ಪೋಟ ಪ್ರಕರಣವನ್ನು ರಾಜ್ಯ ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ಜನನಿಬಿಡ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿ, ಜನರ ಸುರಕ್ಷತೆಗೆ ಆದ್ಯತೆ ನೀಡುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಯಾವುದೇ ತರನಾದ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಕೂಡ ಪೊಲೀಸ್ ಇಲಾಖೆಯ ಜೊತೆ ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರ್ ಸ್ಪೋಟದಿಂದ ಹಲವರು ಸಾವಿಗೀಡಾದ ಸುದ್ದಿ ನೋವಿನ‌ ಜೊತೆಗೆ ದಿಗ್ಭ್ರಮೆ ಉಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದರು.

Related Articles

Comments (0)

Leave a Comment