ಪ್ರೀತಿ ಹೆಸರಲ್ಲಿ ವಂಚಿಸಿ ಜೈಲು ಸೇರಿದ, ಬೇಲ್ ಮೇಲೆ ಹೊರಬಂದು ಮಸಣದ ಪಾಲಾದ

ಹಾಸನ: ಪ್ರೀತಿ ಹೆಸರಲ್ಲಿ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಜೈಲು ಸೇರಿದ್ದ ಯುವಕನ ಆಟ ಕೊಲೆಯಲ್ಲಿ ಅಂತ್ಯವಾಗಿದೆ. ಅಪ್ತಾಪ್ತ ಬಾಲಕಿಯ ಚಿಕ್ಕಪ್ಪ ಪ್ರಿಯಕರನ್ನು ಗುಂಡಿಕ್ಕಿ ಕೊಂದ ಘಟನೆ ಆಲೂರು ತಾಲ್ಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ. ಮಧು(28) ಕೊಲೆಯಾದ ವ್ಯಕ್ತಿ.

ಸೊಪ್ಪಿನಹಳ್ಳಿ ಗ್ರಾಮದ ಅಪ್ರಾಪ್ತೆ ಯುವತಿ ಹಾಗೂ
ಮಧು ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯ ಸೋಗಿನಲ್ಲಿ ಕಳೆದ ವರ್ಷ ಅಪ್ರಾಪ್ತೆ ಮೇಲೆ‌ ಮಧು ಅತ್ಯಾಚಾರ ಎಸಗಿದ್ದ. ನಂತರ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ರೂ, ಮಧು ಅಪ್ರಾಪ್ತೆ ಮನೆ ಮುಂದೆ ಪದೇ ಪದೇ ಗಲಾಟೆ ಮಾಡಿ ಮದುವೆಗೆ ಒತ್ತಾಯಿಸುತ್ತಿದ್ದ. ಇದರಿಂದ ಕೋಪಗೊಂಡಿದ್ದ ಅಪ್ರಾಪ್ತೆ‌ ಚಿಕ್ಕಪ್ಪ ರೂಪೇಶ್ ಮಧುವನ್ನು ಗುಂಡಿಟ್ಟು ಕೊಂದಿದ್ದಾನೆ.

ಇಂದು ಬೆಳಗ್ಗೆ ಸಹ ಮನೆ ಮುಂದೆ ಬಂದು ಅಪ್ರಾಪ್ತೆಯನ್ನು ಚುಡಾಯಿಸುತ್ತಿದ್ದಾಗ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನಿಂದ ಬಂದು ಹೋಂ ಕ್ವಾರೆಂಟೈನ್ ಆಗಿದ್ದ ಯುವತಿ ಚಿಕ್ಕಪ್ಪ ರೂಪೇಶ್ ಶೂಟ್ ಔಟ್ ನಂತರ ಪರಾರಿಯಾಗಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Comments (0)

Leave a Comment