ಪಕ್ಷಭೇದ ಮರೆತು ಕಾವೇರಿಗಾಗಿ ಒಗ್ಗೂಡಬೇಕು ಸರ್ವಪಕ್ಷ ಸಭೆಯಲ್ಲಿ ಸಿಎಂ ಮನವಿ

ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿ ವಿಚಾರದಿಂದ ರಾಜ್ಯಕ್ಕೆ ಕ್ಲಿಷ್ಠ ಪರಿಸ್ಥಿತಿ ಒದಗಿದೆ. ಈ ಬಗ್ಗೆ ಎಲ್ಲರೂ ಒಗ್ಗೂಡಿ ಪಕ್ಷಭೇದ ಮರೆತು ಒಗ್ಗಟ್ಟಿನ ಕಾವೇರಿ ವಿಚಾರವಾಗಿ ನಮ್ಮ ಬಲವನ್ನು ತೋರಿಸಬೇಕು ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ರಾಜ್ಯದ ಸಂಸದರು ಮತ್ತು ರಾಜ್ಯಸಭಾ ಸದಸ್ಯರಲ್ಲಿ ಮನವಿ ಮಾಡಿದ್ದಾರೆ.

ಕಾವೇರಿ ನದಿ ನೀರು ವಿಚಾರ ಸೇರಿದಂತೆ ರಾಜ್ಯದ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ರಾಜ್ಯದ ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಸಭೆ ಕರೆದಿದ್ದರು. ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರುಗಳಾದ ಅನಂತಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಗಿ ಹಾಗೂ ಅನಂತಕುಮಾರ್ ಹೆಗಡೆ, ಹಿರಿಯ ಸಂಸದರಾದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಸೇರಿದಂತೆ ಕರ್ನಾಟಕದ ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರುಗಳು ಸಭೆಯಲ್ಲಿ ಹಾಜರಿದ್ದರು.

ಸಭೆಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ರಾಜ್ಯದ ನೆಲ-ಜಲ, ಸಂಪನ್ಮೂಲಗಳ ರಕ್ಷಣೆಯ ವಿಚಾರದಲ್ಲಿ ರಾಜ್ಯದ ಸಂಸದರು ಪಕ್ಷ ಭೇದ ಮರೆತು ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಕೈಜೋಡಿಸಿದ್ದನ್ನು ಸ್ಮರಿಸಿದರು. ಅಲ್ಲದೆ, ಈಗ ಕಾವೇರಿ ನಿರ್ವಹಣಾ ಮಂಡಳಿ ವಿಚಾರದಿಂದ ರಾಜ್ಯವು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ಹಕ್ಕಿನ ನೀರನ್ನು ನಾವು ನ್ಯಾಯಯುತವಾಗಿ ಪಡೆದುಕೊಳ್ಳುವ ದಿಶೆಯಲ್ಲಿ ಎಲ್ಲರೂ ಒಗ್ಗೂಡಿ ಧ್ವನಿ ಎತ್ತುವಂತೆ ಮುಖ್ಯಮಂತ್ರಿಗಳು ಸಂಸದರಲ್ಲಿ ಮನವಿ ಮಾಡಿದರು.

ಸಂಸತ್ ಅಧಿವೇಶನದ ಸಮಯದಲ್ಲಿ ರಾಜ್ಯದ ಎಲ್ಲಾ ಸಂಸದರ ಸಭೆ ನಡೆಸಿ, ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ರಾಜ್ಯದ ಪ್ರಸ್ತಾವನೆಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳುವುದು ಒಂದು ಸಂಪ್ರದಾಯವಾಗಿ ನಡೆದು ಬಂದಿದೆ‌. ಈ ಹಿನ್ನೆಲೆಯಲ್ಲಿ ಇಂದಿನ ಈ ಸಭೆ ಕರೆಯಲಾಗಿದೆ ಎಂದು ಸಭೆಯ ಆರಂಭದಲ್ಲಿ ಮುಖ್ಯಮಂತ್ರಿಗಳು ಸಭೆಗೆ ಮನವರಿಕೆ ಮಾಡಿಕೊಟ್ಟರು.

ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದಿರುವ ಮೈತ್ರಿ ಸರ್ಕಾರ ತನ್ನ ಚೊಚ್ಚಲ ಬಜೆಟ್ ಗೆ ಅಧಿವೇಶನದಲ್ಲಿ ಅನುಮೋದನೆಯನ್ನು ಪಡೆದುಕೊಂಡಿದೆ. ಹಿಂದಿನ ಜನಪರ ಯೋಜನೆಗಳನ್ನು ಮುಂದುವರೆಸುವುದರ ಜೊತೆಗೆ, ಮತ್ತಷ್ಟು ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಎಲ್ಲಾ ಜನಪರ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲದ ಕ್ರೂಡೀಕರಣಕ್ಕಾಗಿ ರಾಜ್ಯದ ಪ್ರಸ್ತಾವನೆಗಳ ಶೀಘ್ರ ವಿಲೇವಾರಿಯ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೇಂದ್ರದಲ್ಲಿ ಬಾಕಿ ಉಳಿದಿರುವ ವಿಷಯಗಳು ಮತ್ತು ಯೋಜನೆಗಳ ಬಗ್ಗೆ ಕೇಂದ್ರದ ಗಮನ ಸೆಳೆಯುವಂತೆ ರಾಜ್ಯದ ಸಂಸದರು ಮತ್ತು ರಾಜ್ಯಸಭಾ ಸದಸ್ಯರುಗಳಿಗೆ ಕುಮಾರಸ್ವಾಮಿ ಅವರು ಮನವಿ ಮಾಡಿದರು.

ರಾಜ್ಯದಲ್ಲಿ ರೈತರ ಪರಿಸ್ಥಿತಿ, ಪ್ರಕೃತಿ ವಿಕೋಪ ಪರಿಹಾರ, ರೈತರ ಸಾಲ ಮನ್ನಾ, ನೀರಾವರಿ ಯೋಜನೆಗಳು, ಕಾವೇರಿ-ಕೃಷ್ಣ ನದಿ ವಿವಾದ ಹೀಗೆ ಹತ್ತು ಹಲವು ವಿಷಯಗಳ ಮೇಲೆ ಮುಂಗಾರು ಅಧಿವೇಶನದಲ್ಲಿ ಚರ್ಚೆ ನಡೆಯಬೇಕಿದೆ. ಈ ದಿಸೆಯಲ್ಲಿ ಸಂಸದರ ಸಹಾಯ, ಸಹಕಾರ ಹಾಗೂ ಮಾರ್ಗದರ್ಶನವನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೋರಿದರು.

Related Articles

Comments (0)

Leave a Comment