ನಾವು ಸುರಕ್ಷಿತರಾಗಿದ್ದೇವೆ, ರಾಯಭಾರ ಕಚೇರಿಯ ಅಧಿಕಾರಿಗಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದ ಕನ್ನಡಿಗರು
- by Suddi Team
- June 15, 2025
- 118 Views
ನವದೆಹಲಿ: ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಪ್ರಸ್ತುತ ಇಸ್ರೇಲ್ನಲ್ಲಿ ಸಿಲುಕಿರುವ ಹಲವಾರು ಕನ್ನಡಿಗರೊಂದಿಗೆ ವೀಡಿಯೋ ಕರೆ ಮಾಡಿ ಅವರ ಕ್ಷೇಮ, ಸುರಕ್ಷತೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಬೆಂಗಳೂರಿನಿಂದ ನವದೆಹಲಿಗೆ ಭಾನುವಾರ ಸಂಜೆ ವಾಪಸ್ಸಾದ ಕೇಂದ್ರ ಸಚಿವರು, ತಮ್ಮ ಅಧಿಕೃತ ನಿವಾಸದಿಂದ ಇಸ್ರೇಲ್ ನಲ್ಲಿ ಸಿಲುಕಿರುವ ಕನ್ನಡಿಗರ ಜತೆ ಮಾತನಾಡಿದರು.ಮಾತುಕತೆ ಸಮಯದಲ್ಲಿ ಸಚಿವರು, ಅವರೆಲ್ಲರ ಯೋಗಕ್ಷೇಮ ವಿಚಾರಿಸಿದರು ಮತ್ತು ಭಾರತ ಸರ್ಕಾರದಿಂದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು.
ನಮ್ಮ ಜನರು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ತಾಯ್ನಾಡಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ಸಚಿವಾಲಯದೊಂದಿಗೆ ಈ ವಿಷಯವನ್ನು ತಕ್ಷಣವೇ ಚರ್ಚಿಸುವುದಾಗಿ ಸಚಿವರು ಹೇಳಿದರು.
ವಿಡಿಯೋ ಕರೆಯ ಮೂಲಕ ಮಾತನಾಡಿದ ಎಲ್ಲಾ ಕನ್ನಡಿಗರು, ತಾವು ಸುರಕ್ಷಿತರಾಗಿದ್ದೇವೆ ಮತ್ತು ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದ್ದಾರೆ ಎಂದು ಸಚಿವರಿಗೆ ತಿಳಿಸಿದರು. “ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ” ಎಂದು ಸಚಿವರಿಗೆ ಮಾಹಿತಿ ನೀಡಿದರಲ್ಲದೆ, ಇದಕ್ಕಾಗಿ ರಾಯಭಾರ ಕಚೇರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಅಲ್ಲದೆ, ಸಚಿವ ಕುಮಾರಸ್ವಾಮಿ ಅವರೂ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿಯ ಪ್ರಯತ್ನಗಳನ್ನು ಶ್ಲಾಘಿಸಿದರು ಹಾಗೂ ಇಂಥ ಕಠಿಣ ಸಮಯದಲ್ಲಿ ಅಧಿಕಾರಿಗಳ ಬದ್ಧತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ತನ್ನ ಎಲ್ಲವನ್ನೂ ಮಾಡುತ್ತಿದೆ ಎಂದು ಸಚಿವರು ಒತ್ತಿ ಹೇಳಿದರು.
Related Articles
Thank you for your comment. It is awaiting moderation.


Comments (0)