“ಮತಗಳ್ಳತನ”ಆರೋಪ; ಚುನಾವಣಾ ಆಯೋಗಕ್ಕೆ ದೂರು ನೀಡದೆ ದೆಹಲಿಗೆ ವಾಪಸ್ಸಾದ ರಾಹುಲ್ ಗಾಂಧಿ

ಬೆಂಗಳೂರು: ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ,ಬೃಹತ್ ಪ್ರತಿಭಟನೆ ಹೆಸರಿನಲ್ಲಿ ರಾಜ್ಯಕ್ಕೆ ಬಂದು ಚುನಾವಣಾ ಆಯೋಗಕ್ಕೆ ಯಾವುದೇ ದೂರು ನೀಡದೇ ರಾಜ್ಯದ ಒಂದು ಕ್ಷೇತ್ರದಲ್ಲಿ ನಡೆದಿರುವ ಚುನಾವಣಾ ಅಕ್ರಮ ಕ್ರಿಮಿನಲ್ ಅಪರಾಧ. ಕರ್ನಾಟಕ ಸರ್ಕಾರ ಈ ಅಪರಾಧದ ವಿರುದ್ದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ದೆಹಲಿಗೆ ವಾಪಸ್ಸಾಗಿದ್ದಾರೆ.

ಬಿಜೆಪಿ ಚುನಾವಣಾ ಅಕ್ರಮದಿಂದ ದೆಹಲಿ ಗದ್ದುಗೆ ಹಿಡಿದಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ, ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಉಲ್ಲೇಖಿಸಿದ್ದಕ್ಕೆ ಪೂರಕ ಎನ್ನುವಂತೆ ಬೆಂಗಳೂರಿಗೆ ಬಂದು ಆರೋಪವನ್ನು ಸಮರ್ಥಿಸಿಕೊಂಡರು.ಮಹದೇವಪುರದಲ್ಲಿ ಸುಮಾರು 6.5 ಲಕ್ಷ ಮತಗಳಿವೆ. ಇದರಲ್ಲಿ 1,00,250 ಮತಗಳನ್ನು ಕಳ್ಳತನ ಮಾಡಲಾಗಿದೆ.ಐದು ವಿಧಾನದಲ್ಲಿ ಮತಗಳ್ಳತನ ನಡೆದಿದೆ. ಒಬ್ಬ ಮತದಾರ 4 ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದಾನೆ. ಈ ರೀತಿ ಸುಮಾರು 12 ಸಾವಿರ ಮತಗಳಿವೆ. ನಕಲಿ ವಿಳಾಸ ಹೊಂದಿರುವ ಮತದಾರರು 40,009 ಇದ್ದರೆ, ಒಂದೇ ವಿಳಾಸ ಹೊಂದಿರುವ 10,452 ಇದ್ದಾರೆ, ಗುರುತು ಹಿಡಿಯಲು ಸಾಧ್ಯವೇ ಇಲ್ಲದಂತ ಫೋಟೊಗಳನ್ನು ಹೊಂದಿರುವವರು 4,132 ಇದ್ದಾರೆ. ಸಣ್ಣ, ಸಣ್ಣ ಪೋಟೋಗಳನ್ನು ಹಾಕಿದ್ದಾರೆ. ಈ ಪೋಟೋಗಳು ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿವೆ. ಒಂದು ಬೆಡ್ ರೂಮ್ ಇರುವ ಮನೆಯಲ್ಲಿ 50- 60 ಜನ ವಾಸ ಇದ್ದಾರೆ ಎಂದು ಹೇಳಲಾಗಿದೆ. ಆ ವಿಳಾಸಕ್ಕೆ ನಾವು ಹೋದಾಗ ಆ ಮನೆಯಲ್ಲಿ ಯಾರೋಬ್ಬರೂ ಇರಲಿಲ್ಲ. ಆ ಮನೆ ಯಾರದ್ದು ಎಂದು ಹುಡುಕಿದರೆ ಅದು ಬಿಜೆಪಿ ಮುಖಂಡನಿಗೆ ಸೇರಿದ ಮನೆಯಾಗಿತ್ತು. ನಕಲಿ ಮತದಾರದ ಚೀಟಿ ಹೊಂದಿರುವ ಮತದಾರ ಕರ್ನಾಟಕದಲ್ಲಿಯೂ ಮತ ಹಾಕಿ ನಂತರ ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಮತ ಹಾಕಿದ್ದಾನೆ. ಬೆಂಗಳೂರು, ವಾರಣಾಸಿ, ಲಕ್ನೋ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಮತ ಚಲಾಯಿಸುವ ಹಕ್ಕನ್ನು ನೀಡಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ನಾವು ಹೊರಗೆ ಹಾಕಿರುವ ಚುನಾವಣಾ ಅಕ್ರಮ ಮಾಹಿತಿಗಳು ಅಪರಾಧ ನಡೆದಿದೆ ಎನ್ನುವುದಕ್ಕೆ ಸಾಕ್ಷಿಗಳು. ಸುಮಾರು 6 ತಿಂಗಳ ಕಾಲ ಈ ಮಾಹಿತಿಗಳನ್ನು ನಾವು ಹುಡುಕಿದ್ದೇವೆ. ಚುನವಣಾ ಆಯೋಗ ನಮಗೆ ಮುದ್ರಣ ರೂಪದಲ್ಲಿ ನೀಡಿದ್ದ ಮಾಹಿತಿಯನ್ನು ಜೋಡಿಸಿದರೆ ಸುಮಾರು 7 ಅಡಿಗಳ ಎತ್ತರವಿತ್ತು. ಒಂದು ಭಾವಚಿತ್ರವನ್ನು ಲಕ್ಷಾಂತರ ಭಾವಚಿತ್ರಗಳ ಜೊತೆ ಹೋಲಿಕೆ ಮಾಡಿದ್ದೇವೆ. ಪ್ರತಿಯೊಂದು ಹೆಸರನ್ನು ನಾವು ಪರಿಶೀಲಿಸಿದ್ದೇವೆ. ನಾವು ಪ್ರಶ್ನೆ ಮಾಡಿದ ತಕ್ಷಣ ಎಲ್ಲಾ ಸಾಕ್ಷಿಗಳನ್ನು ನಾಶ ಮಾಡಲು ತೊಡಗುತ್ತಾರೆ. ನಾವು ಒಂದು ಕ್ಷೇತ್ರದ ಅಕ್ರಮಗಳನ್ನು ಹೊರ ಹಾಕಲು 6 ತಿಂಗಳ ಕಾಲ ವ್ಯಯ ಮಾಡಬೇಕಾಯಿತು. ನೀವು ಮಾಹಿತಿ ನೀಡಲಿ ನೀಡದೆ ಹೋಗಲಿ ಎಲ್ಲಾ ಕ್ಷೇತ್ರಗಳ ಅಕ್ರಮಗಳನ್ನು ಹೊರಗೆಡವುತ್ತೇವೆ. ಚುನಾವಣಾ ಆಯೋಗ ನೀವು ಈ ವಿಚಾರವಾಗಿ ಸುಮ್ಮನೆ ಕುಳಿತುಕೊಳ್ಳಲು ನಾವು ಬಿಡುವುದಿಲ್ಲ. ಒಂದಲ್ಲ ಒಂದು ದಿನ ವಿರೋಧ ಪಕ್ಷದ ಮುಂದ ಬರಲೇ ಬೇಕು. ಆಯೋಗದ ಪ್ರತಿಯೊಬ್ಬ ಅಧಿಕಾರಿ, ಮುಖ್ಯ ಆಯುಕ್ತರಿಗೆ ಈ ವಿಚಾರ ಮನವರಿಕೆಯಾಗಬೇಕು ಪರೋಕ್ಷ ಎಚ್ಚರಿಕೆ ನೀಡಿದರು.

ಕರ್ನಾಟಕದ ಒಂದು ಕ್ಷೇತ್ರದಲ್ಲಿ ನಡೆದಿರುವ ಅಕ್ರಮ ಕ್ರಿಮಿನಲ್ ಅಪರಾಧ. ಕರ್ನಾಟಕ ಸರ್ಕಾರ ಈ ಅಪರಾಧದ ವಿರುದ್ದ ತನಿಖೆ ನಡೆಸಬೇಕು ಎಲ್ಲವನ್ನು ಹೊರಗೆಡವಬೇಕು, ಜನರಿಗೆ ನ್ಯಾಯ ಕೊಡಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. ಮತದಾರರ ಪಟ್ಟಿಗೆ 20 ಸಾವಿರದಷ್ಟು ಮತದಾರರನ್ನು ಅಕ್ರಮವಾಗಿ ಸೇರಿಸಿದವರನ್ನು ನಾವು ಪ್ರಶ್ನೆ ಮಾಡಬೇಕಿದೆ. ಮಹದೇವಪುರ ಚುನಾವಣೆಯಲ್ಲಿ ನಡೆದ ಅಕ್ರಮಗಳನ್ನು ನಾವು ಜನರ ಮುಂದೆ ಇಡಬೇಕು ಎನ್ನುವ ಕರೆಯೊಂದಿಗೆ ರಾಹುಲ್ ಗಾಂಧಿ ಭಾಷಣ ಮುಗಿಸಿ ದೆಹಲಿಗೆ ವಾಪಸ್ಸಾದರು.

ಆರೋಪ ಸಂಬಂಧ ದಾಖಲೆಗಳನ್ನು ಒಳಗೊಂಡ ದೂರನ್ನು ಚುನಾವಣಾ ಆಯೋಗಕ್ಕೆ ರಾಹುಲ್ ಗಾಂಧಿ ನೇತೃತ್ವದಲ್ಲಿಯೇ ನೀಡಲಾಗುತ್ತದೆ ಎನ್ನಲಾಗಿತ್ತು ಆದರೆ ಆ ನಿರೀಕ್ಷೆ ಹುಸಿಯಾಯಿತು. ಕೇವಲ ಆರೋಪ ಮಾಡಿದ ರಾಹುಲ್ ಗಾಂಧಿ ದೂರು ನೀಡುವ ಜವಾಬ್ದಾರಿಯನ್ನ ರಾಜ್ಯ ಘಟಕಕ್ಕೆ ವಹಿಸಿ ದೆಹಲಿಗೆ ಹಿಂದಿರುಗಿದರು. ಇದು ಮತಗಳ್ಳತನ ಆರೋಪದ ವಿರುದ್ಧದ ಕಾಂಗ್ರೆಸ್ ಹೋರಾಟದ ದೊಡ್ಡ ವೇಗ ನೀಡುವ ಅವಕಾಶ ತಪ್ಪಿದಂತಾಗಿದೆ ಎನ್ನಲಾಗುತ್ತಿದೆ.

Related Articles

Comments (0)

Leave a Comment