ಸೆಪ್ಟೆಂಬರ್ ಎರಡರ ಬೆಳಗಿನಲ್ಲಿ ಅಲ್ಲ ಸೆಪ್ಟೆಂಬರ್ ಒಂದರ ರಾತ್ರಿಯೇ ಸಿಗೋಣವಾ; ಅಭಿಮಾನಿಗಳಿಗೆ ಕಿಚ್ಚನ ಸರ್ಪೈಸ್..!
- by Suddi Team
- August 27, 2025
- 125 Views

ಬೆಂಗಳೂರು:ಸೆಪ್ಟೆಂಬರ್ ಒಂದರ ರಾತ್ರಿ ನಾವೆಲ್ಲರೂ ಒಂದು ಕಡೆ ಸೇರೋಣ. ಎಲ್ಲಿ, ಹೇಗೆ? ಅನ್ನೋದನ್ನು ತಿಳಿಸುತ್ತೇನೆ. ಆದರೆ ಮಾರನೇ ದಿನ ಅಂದರೆ ಸೆಪ್ಟೆಂಬರ್ 2 ರಂದು ದಯವಿಟ್ಟು ಯಾರೂ ಮನೆ ಹತ್ತಿರ ಬರಬೇಡಿ ಎಂದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ ಆದರೂ ಎಲ್ಲೋ ಒಂದ್ ಕಡೆ ಸೆಲೆಬ್ರೇಷನ್ ಇದೆ ಅನ್ನೋ ಸರ್ಪೈಸ್ ಕೂಡ ಕೊಟ್ಟಿದ್ದಾರೆ.
ಈ ಬಾರಿಯ ಹುಟ್ಡುಹಬ್ಬದ ಆಚರಣೆಗೆ ಸಂಬಂಧಪಟ್ಟಂತೆ ನಟ,ನಿರ್ದೇಶಕ,ನಿರ್ಮಾಪಕ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಪತ್ರ ಬರೆದಿದ್ದಾರೆ, ಪ್ರಿಯ ಸ್ನೇಹಿತರೇ..ಸೆಪ್ಟೆಂಬರ್ ಎರಡರ ಬೆಳಗಿನಲ್ಲಿ ಅಲ್ಲ ಸೆಪ್ಟೆಂಬರ್ ಒಂದರ ರಾತ್ರಿಯೇ ಸಿಗೋಣವಾ…! ಎಂದು ಸಸ್ಪೆನ್ಸ್ ಮತ್ತು ಸರ್ಪೈಸ್ ಎರಡನ್ನೂ ಒಟ್ಟಿಗೆ ನೀಡುತ್ತಿದ್ದಾರೆ.
ಸೆಪ್ಟೆಂಬರ್ ಎರಡರಂದು ನೀವು ನನ್ನನ್ನು ಭೇಟಿಮಾಡುವುದಕ್ಕಾಗಿ ಎಷ್ಟು ಕಾಯುವಿರೋ ಅದಕ್ಕಿಂತ ಹೆಚ್ಚಾಗಿ ನಾನು ನಿಮಗಾಗಿ ಕಾಯುತ್ತೇನೆ. ಆ ದಿನ ನೀವು ಪಡುವ ಸಂಭ್ರಮ, ಆಚರಿಸುವ ವಿಡಿಯೋಗಳನ್ನು ನೋಡಿದಾಗ ಪ್ರತಿಸಲವೂ ನನಗೆ ಮರುಹುಟ್ಟು ಪಡೆದಂತಾಗುತ್ತದೆ. ನಿಸ್ಸಂದೇಹವಾಗಿ ನನ್ನ ಬದುಕಿಗೆ ಮೌಲ್ಯ ತುಂಬಿದವರು ನೀವು. ನಿಮ್ಮೆದರು ನಿಂತು ವಿನೀತನಾಗುವುದಕ್ಕಿಂತ ಖುಷಿ ಏನಿದೆ? ಆದ್ದರಿಂದಲೇ ದಶಕಗಳಿಂದ ನಿಮ್ಮನ್ನು ಮನೆಯ ಹತ್ತಿರ ಭೇಟಿಮಾಡುತ್ತಲೇ ನಾನೂ ಸಂಭ್ರಮಸಿದ್ದೇನೆ. ಆದರೆ ಈ ಸಲ ತುಂಬಾ ಕಷ್ಟವಾಗುತ್ತಿದೆ ಏಕೆಂದರೆ ಅಮ್ಮನಿಲ್ಲದ ಮೊದಲ ವರ್ಷವಿದು. ಅಮ್ಮನಿಲ್ಲದ ಸಂಭ್ರಮವನ್ನು ಊಹಿಸಿಕೊಳ್ಳುವುದೂ ನನಗೆ ಕಷ್ಟವಾಗುತ್ತಿದೆ.ಆದರೆ ನಿಮ್ಮನ್ನು ನಿರಾಸೆಗೊಳಿಸುವುದು ನನಗಿಷ್ಟವಿಲ್ಲ! ನಿಮ್ಮ ಮೂಲಕವೇ ನನ್ನ ಹುಟ್ಟಬ್ಬ ಹುಟ್ಟಬೇಕು!. ಗಡಿಯಾರ ಹನ್ನೆರಡು ಗಂಟೆ ಎಂದು ಸದ್ದುಮಾಡುವಾಗ ನನಗೆ ನಿಮ್ಮ ಶುಭಾಶಯಗಳೇ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟೆಂಬರ್ ಒಂದರ ರಾತ್ರಿ ನಾವೆಲ್ಲರೂ ಒಂದು ಕಡೆ ಸೇರೋಣ. ಎಲ್ಲಿ, ಹೇಗೆ? ಅನ್ನೋದನ್ನು ತಿಳಿಸುತ್ತೇನೆ. ಆದರೆ ಮಾರನೇ ದಿನ ಅಂದರೆ ಸೆಪ್ಟೆಂಬರ್ 2 ರಂದು ದಯವಿಟ್ಟು ಯಾರೂ ಮನೆ ಹತ್ತಿರ ಬರಬೇಡಿ. ನಾನು ಆ ದಿನ ಮನೆಯಲ್ಲಿ ಇರುವುದಿಲ್ಲ. ನಾನಿರುವುದಿಲ್ಲವೆಂದು ಹೇಳಿದ ಮೇಲೂ ನೀವು ಮನೆ ಬಳಿ ಬಂದು ಕಾದರೆ ನನ್ನ ಮನಸಿಗೆ ನೋವಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ನನಗೆ ನಂಬಿಕೆ ಇದೆ; ನೀವು ನನ್ನನ್ನು ಅರ್ಥಮಾಡಿಕೊಳ್ಳುವಿರೆಂದು ಮತ್ತು ನಿರಾಸೆಗೊಳಿಸುವುದಿಲ್ಲವೆಂದು. ಅದು ಬಿಟ್ಟರೆ ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಸೇವಾ ಕಾರ್ಯಗಳು ಯಥಾಪ್ರಕಾರ ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ ಮತ್ತು ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ.ಸದಾ ಪ್ರೀತಿ ಇರಲಿ ನಿಮ್ಮ ಕಿಚ್ಚ ಎಂದು ಅಭಿಮಾನಿಗಳಿಗೆ ಸುದೀಪ್ ಪತ್ರದ ಮೂಲಕ ವಿನಂತಿ ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)