ಕೊಟ್ಟ ಮಾತಿನಂತೆ ‘ಕರ್ಣ’ ಬಂದೇ ಬರ್ತಾನೆ: ಪ್ರೇಕ್ಷಕರಿಗೆ ಜೀ ಕನ್ನಡ ಭರವಸೆ

ಬೆಂಗಳೂರು: ಕಿರುತೆರೆಯಲ್ಲಿ ಪ್ರೋಮೋ ಮೂಲಕವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಶೃತಿ ನಾಯ್ಡು ನಿರ್ಮಾಣದ ‘ಕರ್ಣ’ ಧಾರಾವಾಹಿ ನಿರೀಕ್ಷಿತ ದಿನದಂದು ಪ್ರಸಾರಗೊಳ್ಳದೆ ಪ್ರೇಕ್ಷಕರಲ್ಲಿ ಬೇಸರ ಮೂಡಿಸಿದ್ದರೂ, ಕೊಟ್ಟ ಮಾತಿನಂತೆ ‘ಕರ್ಣ’ ಬಂದೇ ಬರ್ತಾನೆ ಎನ್ನುವ ಅಭಯವನ್ನು ಜೀ ಕನ್ನಡ ವಾಹಿನಿ ನೀಡಿದ್ದು ಶೀಘ್ರದಲ್ಲೇ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ.

ಕನ್ನಡ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದಾಗಿದ್ದ ‘ಕನ್ನಡತಿ’ ಸೀರಿಯಲ್‌ ನಾಯಕ ನಟನಾಗಿ ಜನಪ್ರಿಯತೆ ಗಳಿಸಿರುವ ಕಿರಣ್ ರಾಜ್ ಇದೀಗ ‘ಕರ್ಣ’ ಧಾರಾವಾಹಿ ನಾಯಕನಾಗಿ ಜೀ ವಾಹಿನಿ ಮೂಲಕ ಮತ್ತೊಮ್ಮೆ ಎಂಟ್ರಿ ಕೊಡುತ್ತಿದ್ದು, ಡಾಕ್ಟರ್ ಆಗಿ ಕಿರುತೆರೆಯಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಆದರೆ, ಕಾರಣಾಂತರಗಳಿಂದ ಧಾರವಾಹಿ ಪ್ರಸಾರ ದಿನಾಂಕ ಮುಂದೂಡಿಕೆಯಾಗಿ ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿದೆ.

‘ಕರ್ಣ’ ಸೀರಿಯಲ್‌ನಲ್ಲಿ ಇಬ್ಬರು ನಾಯಕಿಯರು. ಒಬ್ಬರು ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ. ಕರ್ಣ ಧಾರಾವಾಹಿಗೆ ಎಂಟ್ರಿಕೊಟ್ಟಿರುವ ಭವ್ಯಾ, ಡಾಕ್ಟರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಂಟ್ರಡಕ್ಷನ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿವೆ,

ನಾಗಿಣಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಸೂಪರ್ ಸಕ್ಸಸ್ ಕಂಡಿದ್ದ ನಮ್ರತಾ ಗೌಡ, ನಂತರ ಬಿಗ್‌ಬಾಸ್‌ ಸೀಸನ್‌ 10ರ ಮೂಲಕ ಸದ್ದು ಮಾಡಿದ್ದರು. ಈಗ ‘ಕರ್ಣ’ ಸೀರಿಯಲ್‌ಗೆ ಎಂಟ್ರಿಕೊಟ್ಟಿದ್ದಾರೆ.

ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಕಾತರ ಮೂಡಿಸಿದ್ದ ‘ಕರ್ಣ’ ಧಾರಾವಾಹಿ ಜೂನ್ 16 ರಿಂದ ಪ್ರಸಾರವಾಗಬೇಕಿತ್ತು. ಆದರೆ, ಕೊನೇ ಕ್ಷಣದಲ್ಲಿ ಪ್ರಸಾರವನ್ನು ರದ್ದು ಮಾಡಲಾಗಿದೆ. ಇದಕ್ಕೆ ಪ್ರತಿಸ್ಪರ್ಧಿ ವಾಹನಿಯೊಂದಿಗಿನ ಭವ್ಯಾಗೌಡ ಅವರ ಒಡಂಬಡಿಕೆ ನಿಯಮ ಉಲ್ಲಂಘನೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಿಂದ ಕರ್ಣ ಧಾರಾವಾಹಿಗೆ ಸಂಬಂಧಿಸಿ ಎಲ್ಲ ಪೋಸ್ಟ್ ಗಳನ್ನು ಭವ್ಯಾಗೌಡ ಡಿಲೀಟ್ ಮಾಡಿದ್ದಾರೆ.

ಇದೀಗ ಜೀ ಕನ್ನಡ ವಾಹಿನಿ ಧಾರಾವಾಹಿ ಪ್ರಸಾರಕ್ಕೆ ಬೇಕಾದ ಅಡೆತಡೆಗಳ ನಿವಾರಿಸಿಕೊಳ್ಳುತ್ತಿದ್ದು, ಸಧ್ಯದಲ್ಲೇ ಪ್ರಸಾರ ಮಾಡಲು ನಿರ್ಧರಿಸಿದೆ, ಧಾರಾವಾಹಿಯಿಂದ ಭವ್ಯಾಗೌಡರಿಗೆ ಕೊಕ್ ನೀಡಿದ್ದಾರೋ ಅಥವಾ ಸಮಸ್ಯೆಗೆ ಭವ್ಯಾಗೌಡರೇ ಪರಿಹಾರ ಕಂಡುಕೊಂಡಿದ್ದಾರೋ ಗೊತ್ತಿಲ್ಲ. ಆದರೆ, ಜೀ ಕನ್ನಡ ವಾಹಿನಿ ಮಾತ್ರ ಮತ್ತೆ ಪ್ರೋಮೋ ಶುರು ಮಾಡಿದ್ದು, ಅತಿ ಶೀಘ್ರದಲ್ಲೇ ನಿರೀಕ್ಷಿಸಿ ಎಂದು ಪ್ರಮೋಷನ್ ಮುಂದುವರಿಸಿದೆ.

ಪ್ರೇಕ್ಷಕರಿಗೆ ಜೀ ವಾಹಿನಿ ಭರವಸೆ:

ಕರ್ಣ! ಹುಟ್ಟುವ ಮೊದಲೇ ಶಾಪಗ್ರಸ್ಥ. ತನ್ನದಲ್ಲದ ತಪ್ಪಿಗೆ ಜೀವನ ಪೂರ್ತಿ ಪರಿತಪಿಸಿದವನು. ಹೆಜ್ಜೆ ಹೆಜ್ಜೆಗೂ ದ್ವೇಷ, ಅಸೂಯೆ, ಹತಾಶೆ, ನಿರಾಶೆ, ನೋವು, ಅವಮಾನಗಳಿಗೆ ಗುರಿಯಾದವನು. ಆದರೆ, ಎಲ್ಲ ಸವಾಲುಗಳನ್ನೂ ಹಿಮ್ಮೆಟ್ಟಿ ಜನರ ಪ್ರೀತಿ ಗಳಿಸಿದವನು. ನಿಷ್ಠೆ, ನಿಯತ್ತು, ತ್ಯಾಗ, ಧೈರ್ಯಕ್ಕೆ ಇನ್ನೊಂದು ಹೆಸರು ಅವನು. ಯುಗ ಯುಗಗಳೇ ಕಳೆದರೂ ದಾನಶೂರನಾಗಿ ಎಲ್ಲರ ಮನದಲ್ಲಿ ನೆಲೆಯಾದವನು! ಕರ್ಣ ಬರೋದನ್ನ ತಡ ಆಗುವಂತೆ ಮಾಡಬಹುದು. ಆದ್ರೆ, ಬರೋದನ್ನ ತಡೆಯೋದಕ್ಕೆ ಸಾಧ್ಯವೇ ಇಲ್ಲ! ಇಡೀ ಕರ್ನಾಟಕ ಕಾಯ್ತಾ ಇದೆ ಅನ್ನೋದು ಗೊತ್ತು. ಕೊಟ್ಟ ಮಾತಿನಂತೆ ಕರ್ಣ ಬಂದೇ ಬರ್ತಾನೆ… ಶೀಘ್ರದಲ್ಲೇ, ಅದೇ ಪ್ರೀತಿ – ವಿಶ್ವಾಸದಿಂದ ‘ಕರ್ಣ’ನನ್ನ ಬರಮಾಡಿಕೊಳ್ತೀರಿ ಅಲ್ವಾ?! ಎಂದು ಜೀ ವಾಹಿನಿ ಕರ್ಣನ ಪ್ರಮೋಷನ್ ಮುಂದುವರಿಸಿದೆ.

ಕಲಾವಿದರು: ನಾಯಕನಾಗಿ ಕಿರಣ್ ರಾಜ್, ನಾಯಕಿಯರಾಗಿ ಭವ್ಯಾ ಗೌಡ ಮತ್ತು ನಮ್ರತಾ ಗೌಡ. ಹಿರಿಯ ನಟ-ನಿರ್ದೇಶಕ ಟಿ.ಎಸ್. ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ‘ಒಲವಿನ ನಿಲ್ದಾಣ’ ಸೀರಿಯಲ್‌ನ ವರಲಕ್ಷ್ಮೀ ಶ್ರೀನಿವಾಸ್ ಮತ್ತು ಶ್ಯಾಮ್ ಸಿಮ್ರನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Related Articles

Comments (0)

Leave a Comment