ದುಬಾರಿ ಹಣ ಕೊಟ್ಟು ಕಾಂತಾರ ಸಿನಿಮಾ ನೋಡಿದ್ದೀರಾ? ಹಾಗಾದ್ರೆ ಟಿಕೆಟ್ ಭದ್ರವಾಗಿಟ್ಟುಕೊಳ್ಳಿ..,!

ಬೆಂಗಳೂರು: ಸಿನಿಮಾ ಟಿಕೆಟ್‍ಗಳ ಮೇಲೆ ವಿಧಿಸಿದ್ದ 200 ರೂ. ಮಿತಿಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ಮುಂದುವರೆಸಿದ್ದರೂ ರಿಟ್ ಅರ್ಜಿ / ಅಪೀಲು ಸಂಬಂಧದಲ್ಲಿ ಹೈಕೋರ್ಟ್ ನೀಡುವ ಅಂತಿಮ ಆದೇಶದಲ್ಲಿ ಅರ್ಜಿದಾರರಿಗೆ ಹಿನ್ನಡೆಯಾದಲ್ಲಿ ಗ್ರಾಹಕರಿಂದ ಸಂಗ್ರಹವಾದ ಹೆಚ್ಚುವರಿ ಮೊಬಲಗನ್ನು ಅವರುಗಳು ಪಾವತಿಸಿದ ವಿಧಾನದಲ್ಲಿಯೇ ಹಿಂದಿರುಗಿಸಲು ವ್ಯವಸ್ಥೆ ಮಾಡುಕೊಳ್ಳುವಂತೆ ಸಿನಿಮಾ ಮಂದಿರ ಮತ್ತು ಮಲ್ಟಿಫ್ಲೆಕ್ಸ್ ಗಳಿಗೆ ಒಳಾಡಳಿತ ಇಲಾಖೆಯ (ಸೆರೆಮನೆ ಮತ್ತು ಸಿನಿಮಾ) ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸರ್ಕಾರದ ಅಧೀನ ಕಾರ್ಯದರ್ಶಿಗಳು,ರಾಜ್ಯದ ಎಲ್ಲಾ ಮಲ್ಟಿಫ್ಲೆಕ್ಸ್‍ಗಳಲ್ಲಿ ಸಿನಿಮಾ ಟಿಕೆಟ್‍ಗಳ ಮೇಲೆ ವಿಧಿಸಿದ್ದ 200 ರೂ.ಗಳ ದರ ಮಿತಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ಮುಂದುವರಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಧಾನ ಪೀಠದಲ್ಲಿ ದಾಖಲಾಗಿದ್ದ, ರಿಟ್ ಅಪೀಲು ಸಂಖ್ಯೆ: 1623/2025ರ (ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಇಂಡಿಯಾ) ಪ್ರಕರಣದಲ್ಲಿ ದಿನಾಂಕ:30.09.2025ರಂದು ಮಾನ್ಯ ನ್ಯಾಯಾಲಯವು ಸಿನಿಮಾ ಟಿಕೆಟ್‍ಗಳ ಮೇಲೆ ವಿಧಿಸಿದ್ದ ರೂ.200/-ಗಳ ಮಿತಿಗೆ ದಿನಾಂಕ:23.09.2025ರಂದು ನೀಡಿದ ತಡೆಯಾಜ್ಞೆಯನ್ನು ಮುಂದುವರೆಸುವ ಜೊತೆಗೆ ಕೆಲ ನಿರ್ದೇಶನಗಳನ್ನು ನೀಡಿದ್ದಾರೆ ಅದನ್ನು ಪಾಲಿಸುವಂತೆ ಚಿತ್ರಮಂದಿರಗಳ ಮಾಲೀಕರಿಗೆ ತಿಳಿಸಿದ್ದಾರೆ.

ದಾಖಲೆಗಳ ನಿರ್ವಹಣೆ:

ಪ್ರತಿವಾದಿ ಸಂಖ್ಯೆ 1 ಮತ್ತು ಅದರ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಮಲ್ಟಿಪ್ಲೆಕ್ಸ್‍ಗಳು, ಮಾರಾಟವಾದ ಪ್ರತಿಯೊಂದು ಟಿಕೆಟ್‍ಗೆ ಸಮಗ್ರ ಮತ್ತು ಲೆಕ್ಕಪರಿಶೋಧಿಸಬಹುದಾದ ದಾಖಲೆಗಳನ್ನು ನಿರ್ವಹಿಸಲು ನಿರ್ದೇಶಿಸಲಾಗಿದೆ. ದಾಖಲೆಗಳು ಈ ಕೆಳಗಿನವುಗಳನ್ನು ಒಳಗೊಂಡಿರಬೇಕು.

ಮಾರಾಟದ ದಿನಾಂಕ ಮತ್ತು ಸಮಯ, ಆನ್‍ಲೈನ್ ಅಥವಾ ಭೌತಿಕ ಕೌಂಟರ್‍ಗಳಲ್ಲಿ ಬುಕಿಂಗ್ ಮಾಡಿರುವ ವಿವರ,  ಕ್ರೆಡಿಟ್/ಡೆಬಿಟ್ ಕಾರ್ಡ್, ಯುಪಿಐ ನೆಟ್ ಬ್ಯಾಂಕಿಂಗ್ ಅಥವಾ ನಗದು ಪಾವತಿ ಮಾಡಿರುವ ವಿವರ, ಸಂಗ್ರಹಿಸಿದ ಮೊತ್ತ, ಜಿಎಸ್‍ಟಿ ಘಟಕ.

ಎಲ್ಲಾ ನಗದು ವಹಿವಾಟುಗಳಿಗೆ ಡಿಜಿಟಲ್ ಆಗಿ ಪತ್ತೆಹಚ್ಚಬಹುದಾದ ರಸೀದಿಗಳನ್ನು ನೀಡಬೇಕು ಮತ್ತು ಪ್ರತಿದಿನ ಕ್ಯಾಶ್ ರಿಜಿಸ್ಟರ್‍ಗಳನ್ನು ಮಲ್ಟಿಪ್ಲೆಕ್ಸ್‍ನ ವ್ಯವಸ್ಥಾಪಕರು ಪ್ರತಿ ಸಹಿ ಮಾಡಬೇಕು.

ಎಲೆಕ್ಟ್ರಾನಿಕ್ ವಹಿವಾಟುಗಳು:

ಅರ್ಜಿದಾರರು ಈ ಮೇಲ್ಮನವಿ/ಅರ್ಜಿಯ ಅಂತಿಮ ತೀರ್ಪಿನಲ್ಲಿ ಸಿಲುಕಿದರೆ, ಈ ನಿಬಂಧದ ಬಾಕಿ ಇರುವ ಸಮಯದಲ್ಲಿ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ (ಅನ್ವಯವಾಗುವ ಜಿಎಸ್‍ಟಿ ಹೊರತುಪಡಿಸಿ) ಸಂಗ್ರಹಿಸಿದ ಎಲ್ಲಾ ಮೊತ್ತವನ್ನು ಟಿಕೆಟ್‍ಗಳನ್ನು ಬುಕ್ ಮಾಡಿದ ವೈಯಕ್ತಿಕ ಗ್ರಾಹಕರಿಗೆ ಬುಕಿಂಗ್‍ಗೆ ಬಳಸುವ ಅದೇ ಪಾವತಿ ವಿಧಾನದ ಮೂಲಕ ಮರುಪಾವತಿಸಬೇಕು.

ಪ್ರತಿವಾದಿ ಸಂಖ್ಯೆ 1 ಇಂದಿನಿಂದ 45 ದಿನಗಳಲ್ಲಿ ಪರವಾನಗಿ ಪ್ರಾಧಿಕಾರಕ್ಕೆ ಮರುಪಾವತಿ ಪ್ರಕ್ರಿಯೆ ಯೋಜನೆಯನ್ನು ಅನುಮೋದನೆಗಾಗಿ ಸಲ್ಲಿಸಬೇಕು, ಇದು ಗ್ರಾಹಕರಿಗೆ ಮರುಪಾವತಿ ಮಾಡುವ ಕಾರ್ಯವಿಧಾನವನ್ನು ವಿವರಿಸುತ್ತದೆ. ಪರವಾನಗಿ ಪ್ರಾಧಿಕಾರದಿಂದ ಅನುಮೋದನೆಯ ನಂತರ ಅದನ್ನು ಅಂತಿಮ ಅನುಮೋದನೆಗಾಗಿ ಈ ನ್ಯಾಯಾಲಯದ ಮುಂದೆ ಇಡಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ, ಸಾರ್ವಜನಿಕರು ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನನ್ವಯ, ಹಾಲಿ ಚಲನಚಿತ್ರ ಪ್ರದರ್ಶನಕ್ಕೆ ನೀಡಿರುವ ದರಕ್ಕೆ ಸಂಬಂಧಿಸಿದಂತೆ ಭೌತಿಕವಾಗಿ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪಡೆದ ಟಿಕೆಟ್‍ಗಳನ್ನು ಭದ್ರವಾಗಿ ಕಾಯ್ದಿರಿಸಿಕೊಳ್ಳತಕ್ಕದ್ದು, ಹಾಗೆಯೇ, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ಎಲ್ಲಾ ರೀತಿಯಾ ಸಿನಿಮಾ ಟಿಕೆಟ್‍ಗಳ ಮಾರಾಟದ ಸಂಪೂರ್ಣ ದಾಖಲೆಗಳನ್ನು ನಿರ್ವಹಿಸಬೇಕಾಗಿರುತ್ತದೆ.ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ / ಅಪೀಲು ಸಂಬಂಧದಲ್ಲಿ ನೀಡುವ ಅಂತಿಮ ಆದೇಶದಲ್ಲಿ ಅರ್ಜಿದಾರರಿಗೆ ಹಿನ್ನಡೆಯಾದಲ್ಲಿ ಗ್ರಾಹಕರಿಂದ ಸಂಗ್ರಹವಾದ ಹೆಚ್ಚುವರಿ ಮೊಬಲಗನ್ನು ಅವರುಗಳು ಪಾವತಿಸಿದ ವಿಧಾನದಲ್ಲಿಯೇ ಹಿಂದಿರುಗಿಸಲು ಅನುಕೂಲವಾಗುವಂತೆ ಅರ್ಜಿದಾರರು, ರಾಜ್ಯ ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮೇಲಿನ ನಿರ್ದೇಶನಗಳನ್ನು ನೀಡಿರುತ್ತದೆ ಎಂದು ಒಳಾಡಳಿತ ಇಲಾಖೆಯ (ಸೆರೆಮನೆ ಮತ್ತು ಸಿನಿಮಾ) ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Comments (0)

Leave a Comment