ಬೆಂಗಳೂರು ಚಲನಚಿತ್ರೋತ್ಸವ ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಹಂಸಲೇಖ ಆಯ್ಕೆ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ಹಾಗೂ ಚಿತ್ರ ಸಾಹಿತಿ ‘ನಾದಬ್ರಹ್ಮ’ ಡಾ. ಹಂಸಲೇಖ ಅವರು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (BIFFes 2026) ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ ಅವರ ನೇತೃತ್ವದ ಆಯ್ಕೆ ಸಮಿತಿಯು ಮೂರು ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದು ಅದರಲ್ಲಿ ಹಂಸಲೇಖ ಅವರ ಹೆಸರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿ ಆದೇಶ ಹೊರಡಿಸಿದೆ.

ಕಳೆದ ನಾಲ್ಕು ದಶಕಗಳಿಂದ ಕನ್ನಡ ಸಿನಿರಂಗಕ್ಕೆ ಹಂಸಲೇಖ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಫೆಬ್ರವರಿ 5 ರಂದು ಹೊರಡಿಸಲಾದ ಅಧಿಕೃತ ಆದೇಶದಂತೆ, ಶುಕ್ರವಾರ ನಡೆಯಲಿರುವ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರಿಗೆ ಈ ಗೌರವ ಸಮರ್ಪಿಸಲಾಗುವುದು.

ಪ್ರಶಸ್ತಿ ಪ್ರದಾನ: ಫೆಬ್ರವರಿ 6ರ ಸಂಜೆ 6 ಗಂಟೆಗೆ ಲುಲು ಮಾಲ್‌ನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ವಿಶೇಷ ಗೌರವ: ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ನಟಿ ಜಯಮಾಲಾ, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು, ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ (ಮರಣೋತ್ತರ) ಮತ್ತು ಛಾಯಾಗ್ರಾಹಕ ಎಸ್. ರಾಮಚಂದ್ರ (ಮರಣೋತ್ತರ) ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುವುದು.

ರಾಯಭಾರಿ: ಈ ಬಾರಿಯ ಚಿತ್ರೋತ್ಸವಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ರಾಯಭಾರಿಯಾಗಿದ್ದಾರೆ.

ಸಿನಿಮಾ ಹಬ್ಬ: ಜನವರಿ 29 ರಿಂದ ಆರಂಭವಾಗಿರುವ ಈ ಚಿತ್ರೋತ್ಸವದಲ್ಲಿ 65ಕ್ಕೂ ಹೆಚ್ಚು ದೇಶಗಳ 250ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

Related Articles

Comments (0)

Leave a Comment