ಚಿತ್ರೋತ್ಸವ ನಮಗೆ ‘ವಿಶ್ವವಿದ್ಯಾಲಯ’ವಿದ್ದಂತೆ: ನಿರ್ದೇಶಕ ಮಂಸೋರೆ ಅಭಿಮತ
- by Suddi Team
- February 6, 2026
- 63 Views
ಬೆಂಗಳೂರು: “ಸಿನಿಮಾ ಎನ್ನುವುದು ಮೂಲತಃ ನಿರ್ದೇಶಕರ ಮಾಧ್ಯಮ. ಇಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಿತ್ರೋತ್ಸವಗಳು ನಿರ್ದೇಶಕರಿಗೆ ಹಬ್ಬವಿದ್ದಂತೆ. ಇಲ್ಲಿ ಕೇವಲ ಸಿನಿಮಾ ನೋಡುವುದಷ್ಟೇ ಅಲ್ಲ, ಅವುಗಳ ಕುರಿತ ಚರ್ಚೆಗಳಿಂದ ಕಲಿಯುವುದು ಬಹಳಷ್ಟಿದೆ,” ಎಂದು ನಿರ್ದೇಶಕ ಮಂಸೋರೆ ತಿಳಿಸಿದ್ದಾರೆ.
ನಗರದಲ್ಲಿ ನಡೆಯುತ್ತಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚಿತ್ರೋತ್ಸವದಲ್ಲಿ ಮಂಸೋರೆ ನಿರ್ದೇಶನದ ‘ದೂರ ತೀರ ಯಾನ’ ಚಿತ್ರ ಪ್ರದರ್ಶನಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಚಿತ್ರೋತ್ಸವದಲ್ಲಿ ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ದಿನಕ್ಕೆ 4-5 ಚಿತ್ರಗಳಂತೆ ಒಂದು ವಾರದಲ್ಲಿ ಸುಮಾರು 35 ಚಿತ್ರಗಳನ್ನು ವೀಕ್ಷಿಸಬಹುದು. ಇದು 35 ಪಠ್ಯಪುಸ್ತಕಗಳನ್ನು ಓದಿದಂತೆ. ಪ್ರತಿ ಸಿನಿಮಾವನ್ನು ಸಾಮಾಜಿಕ ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಅರ್ಥೈಸಿಕೊಂಡಾಗ ಸಿನಿಮಾ ನಿರ್ಮಾಣದ ಹೊಸ ಹೊಳಹುಗಳು ದಕ್ಕುತ್ತವೆ,” ಎಂದರು.
ನಾನೇನು ಯಾರ ಬಳಿಯೂ ಕೆಲಸ ಕಲಿತಿಲ್ಲ…
ತಮ್ಮ ಸಿನಿಮಾ ಜರ್ನಿಯಲ್ಲಿ ಬೆಂಗಳೂರು ಚಿತ್ರೋತ್ಸವದ ಪಾತ್ರವನ್ನು ನೆನಪಿಸಿಕೊಂಡ ಮಂಸೋರೆ:”ನಾನು ಯಾವ ಹಿರಿಯ ನಿರ್ದೇಶಕರ ಬಳಿಯೂ ಸಹಾಯಕನಾಗಿ ಕೆಲಸ ಕಲಿತಿಲ್ಲ.” “ನನಗೆ ಚಿತ್ರೋತ್ಸವಗಳೇ ವಿಶ್ವವಿದ್ಯಾಲಯಗಳು. ಇಲ್ಲಿ ಸಿನಿಮಾ ನೋಡಿಯೇ ನಾನು ನಿರ್ದೇಶನ ಕಲಿತೆ.””ಕೇವಲ ಹಾಡು, ಫೈಟುಗಳ ಆಚೆಗೂ ಸಿನಿಮಾದಲ್ಲಿ ಏನೋ ಅದ್ಭುತ ಲೋಕವಿದೆ ಎಂದು ತೋರಿಸಿಕೊಟ್ಟಿದ್ದೇ ಈ ವೇದಿಕೆ.”ಎಂದರು.
ಸ್ಟೀವನ್ ಸ್ಪೀಲ್‌ಬರ್ಗ್ ಸ್ಫೂರ್ತಿ:
ಸಾಮಾಜಿಕ ಕಳಕಳಿಯ ಸಿನಿಮಾಗಳ ನಂತರ ಈಗ ‘ದೂರ ತೀರ ಯಾನ’ ಎಂಬ ಪ್ರೇಮಕಥೆಯ ಮೂಲಕ ಹೊಸ ಪ್ರಯೋಗಕ್ಕೆ ಕೈಹಾಕಿರುವ ಅವರು, “ಯಾವುದೇ ಒಬ್ಬ ನಿರ್ದೇಶಕ ಒಂದು ನಿರ್ದಿಷ್ಟ ಚೌಕಟ್ಟಿಗೆ ಸಿಲುಕಬಾರದು. ಸ್ಟೀವನ್ ಸ್ಪೀಲ್‌ಬರ್ಗ್ ಅವರಂತೆ ಪ್ರತಿ ಸಿನಿಮಾದಲ್ಲೂ ಹೊಸತನಕ್ಕೆ ಪ್ರಯತ್ನಿಸಬೇಕು. ನಾನು ಈ ಚಿತ್ರದಲ್ಲಿ ಪ್ರೇಮಕಥೆ ಮತ್ತು ಕಲಾತ್ಮಕ ಶೈಲಿಯ ನಡುವಿನ ಹೊಸ ಪಥವನ್ನು ಹುಡುಕುವ ಪ್ರಯತ್ನ ಮಾಡಿದ್ದೇನೆ,” ಎಂದು ವಿವರಿಸಿದರು.
ಇಲ್ಲಿಯವರೆಗೆ ಮಂಸೋರೆ ಅವರ ಒಟ್ಟು 5 ಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದು, ಈ ಪೈಕಿ ಮೂರು ಜನಪ್ರಿಯ ವಿಭಾಗದಲ್ಲಿ ಹಾಗೂ ಎರಡು ಸ್ಪರ್ಧಾತ್ಮಕ ವಿಭಾಗದಲ್ಲಿ ಆಯ್ಕೆಯಾಗಿರುವುದು ವಿಶೇಷ.
Related Articles
Thank you for your comment. It is awaiting moderation.


Comments (0)