ಜಾಲಿವುಡ್ ಸ್ಟುಡಿಯೋ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ; ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅವಕಾಶ?

ಬೆಂಗಳೂರು: ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮವನ್ನು ಪುನರಾರಂಭ ಮಾಡಲು ಅವಕಾಶ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರದ ಸೂಚನೆ ಪಾಲಿಸಿದಲ್ಲಿ ಆದಷ್ಟು ಬೇಗ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಆಟಕ್ಕೆ ಮರು ಚಾಲನೆ ಸಿಗಲಿದೆ.

ಹೌದು,”ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬಿದ್ದಿರುವ ಬೀಗವನ್ನು ತೆರವುಗೊಳಿಸಲು ಅವಕಾಶವನ್ನು ಸರ್ಕಾರ ನೀಡುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲ ಸೂಚನೆ ಪಾಲಿಸಿದಲ್ಲಿ ಮತ್ತೆ “ಬಿಗ್ ಬಾಸ್ ಕಾರ್ಯಕ್ರಮ ಜಾಲಿವುಡ್ ಸ್ಟುಡಿಯೋದಲ್ಲಿ ಆರಂಭ ಮಾಡಲು ಗ್ರೀನ್ ಸಿಗ್ನಲ್ ನೀಡುವ ಭರವಸೆ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್,”ಜಾಲಿವುಡ್ ಸ್ಟುಡಿಯೋದವರು ಮಾಲಿನ್ಯ ನಿಯಮಗಳನ್ನು ಪಾಲಿಸಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿತ್ತು. ಅದರ ಆದೇಶದಂತೆ ಈಗ ಕ್ರಮ ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳು ಕಾನೂನಾತ್ಮಕವಾಗಿ ಕೆಲಸ ಮಾಡಿದ್ದಾರೆ. ಈ ವಿಚಾರಗಳನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ”. ಬಿಗ್ ಬಾಸ್ ನಂತಹ ಮನರಂಜನಾ ಕಾರ್ಯಕ್ರಮಗಳ ಇರಬೇಕು, ಖಾಸಗಿಯವರು ಬಂಡವಾಳ ಹೂಡಿರುತ್ತಾರೆ ತಪ್ಪಾಗಿದೆ ಅದನ್ನು ಅವರು ಸರಿಪಡಿಸಿಕೊಳ್ಳಲು ಒಂದು ಅವಕಾಶ ನೀಡಬೇಕು ಎಂದು ಸೂಚಿಸಿದ್ದೇನೆ ಎಂದರು.

“ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಜಾಲಿವುಡ್ ಸ್ಟುಡಿಯೋವನ್ನು ಉದ್ಘಾಟನೆ ಮಾಡಿದ್ದೇ ನಾನು. ಅಲ್ಲಿ ಏನಾಗಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದೇನೆ. ಜೊತೆಗೆ ಉದ್ಯೋಗ ಮುಖ್ಯ ಎಂದೂ ಹೇಳಿದ್ದೇನೆ. ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ. ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬಹುದೋ ಅದಕ್ಕೆ ಅವಕಾಶ ನೀಡಿ ಎಂದೂ ತಿಳಿಸಿದ್ದೇನೆ. ಬಿಗ್ ಬಾಸ್ ಒಂದೇ ಅಲ್ಲ. ಎಲ್ಲಾ ಮನರಂಜನಾ ಕಾರ್ಯಕ್ರಮಗಳು ನಡೆಯಬೇಕು” ಎಂದರು.

ನಟ್ಟು ಬೋಲ್ಟ್ ಟೈಟ್ ಎಂದು ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರು ಎಕ್ಸ್ (ಟ್ವೀಟ್) ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ, “ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಕುಮಾರಸ್ವಾಮಿ ಅವರಾದರೂ ಮಾಡಿಕೊಳ್ಳಲಿ, ಮೇಲಿನಿಂದ ಯಾರನ್ನಾದರೂ ಕರೆದುಕೊಂಡಾದರೂ ಬಂದು ಮಾಡಿಕೊಳ್ಳಲಿ” ಎಂದು ವ್ಯಂಗ್ಯವಾಡಿದರು.

“ಈ ವಿಚಾರದಲ್ಲಿ ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆ. ಪ್ರತಿದಿನ ನನ್ನನ್ನು, ನನ್ನ ಹೆಸರನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ (ಕುಮಾರಸ್ವಾಮಿ) ನೆಮ್ಮದಿ, ನಿದ್ದೆ  ಹಾಗೂ ಯಾವುದಕ್ಕೂ ಶಕ್ತಿ ಬರುವುದಿಲ್ಲ” ಎಂದು ಲೇವಡಿ ಮಾಡಿದರು.

Related Articles

Comments (0)

Leave a Comment