ಬೆಂಗಳೂರಿನಲ್ಲಿ ತಲೆ ಎತ್ತಿದ ಸೆಮಿಕಂಡಕ್ಟರ್ ಚಿಪ್ ಉತ್ಪಾದಿಸುವ ಆರ್ಮ್ (ಎ.ಆರ್.ಎಂ.) ಕಂಪನಿಯ ನೂತನ ಕಚೇರಿ
- by Suddi Team
- September 17, 2025
- 20 Views

ಬೆಂಗಳೂರು:ಸೆಮಿಕಂಡಕ್ಟರ್ ಕ್ಷೇತ್ರದ ಮೊದಲ ಆವೃತ್ತಿಯನ್ನು ನಾವು ಪ್ರಾಯೋಗಿಕವಾಗಿ ಪೂರ್ಣಗೊಳಿಸಿದ್ದು, ಈಗ ಎರಡನೇ ಆವೃತ್ತಿಯತ್ತ ಸಾಗುತ್ತಿದ್ದೇವೆ ಎಂದು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೆಮಿಕಂಡಕ್ಟರ್ ಚಿಪ್ ಗಳನ್ನು ಉತ್ಪಾದಿಸುವ ಆರ್ಮ್ (ಎ.ಆರ್.ಎಂ.) ಕಂಪನಿಯ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಎಐ ಸರ್ವರ್, ಡ್ರೋನ್, ಮೊಬೈಲ್ ಫೋನ್ಗಳಲ್ಲಿ ಬಳಸುವ ಅತ್ಯಾಧುನಿಕ 2 ಎನ್.ಎಮ್ ಚಿಪ್ಗಳನ್ನು ಇಲ್ಲಿ ವಿನ್ಯಾಸಗೊಳಿಸಲಾಗುವುದು”. ಮೊಬೈಲ್ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ನ್ಯಾನೋ ಮೀಟರ್ ಚಿಪ್ ಗಳನ್ನು ವಿನ್ಯಾಸಗೊಳಿಸಲಿದೆ. ನಮ್ಮ ಸೆಮಿಕಂಡಕ್ಟರ್ ಪಯಣದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲು ಎಂದರು.
“ಸೆಮಿಕಂಡಕ್ಟರ್ ಗಳ ವಿನ್ಯಾಸ, ಉತ್ಪಾದನೆ ಮತ್ತು ಅದಕ್ಕೆ ಅವಶ್ಯಕವಾಗಿರುವ ಉಪಕರಣ ಹಾಗೂ ಸಾಮಗ್ರಿಗಳ ಉತ್ಪಾದನೆ ಮಾಡುವುದು ನಮ್ಮ ಧ್ಯೇಯವಾಗಿದೆ. ಇದು ಅತ್ಯಂತ ದೂರದೃಷ್ಟಿ ಪ್ರಕ್ರಿಯೆಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಿದ್ದಾರೆ. ಸೆಮಿಕಂಡಕ್ಟರ್ ಕ್ಷೇತ್ರದ ಮುಂದಿನ 20 ವರ್ಷಗಳ ಯೋಚನೆಯ ಜೊತೆಗೆ ನಮ್ಮ ಯುವಪೀಳಿಗೆ, ಪ್ರತಿಭಾನ್ವಿತ ಇಂಜಿನಿಯರ್ ಗಳು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಅವಕಾಶಗಳನ್ನು ಪಡೆಯಲಿದ್ದಾರೆ” ಎಂದು ಸಚಿವರು ಹೇಳಿದರು.
ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿನ ಉತ್ಪಾದನೆಯು ಸೆಮಿಕಂಡಕ್ಟರ್ ಚಿಪ್ ಗಳ ಬೇಡಿಕೆ ಹೆಚ್ಚಿಸಿದ್ದು, ಇದರ ಪ್ರಗತಿ ದ್ವಿಗುಣವಾಗುತ್ತಿದೆ, ಕಳೆದ 11 ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಉತ್ಪಾದನೆಯನ್ನು 6 ಪಟ್ಟು ವೃದ್ಧಿಸಲಾಗಿದೆ. ಪ್ರಸ್ತುತ ಇದು ₹11.5 ಲಕ್ಷ ಕೋಟಿ ಮೌಲ್ಯದ ಉದ್ಯಮವಾಗಿದೆ. ರಫ್ತು 8 ಪಟ್ಟು ಹೆಚ್ಚಳವಾಗಿದ್ದು, ಎಲೆಕ್ಟ್ರಾನಿಕ್ಸ್ ಗಳು ಭಾರತದ ಪ್ರಮುಖ ರಫ್ತು ಉತ್ಪನ್ನವಾಗುತ್ತಿವೆ. ಮೊಬೈಲ್, ಲ್ಯಾಪ್ಟಾಪ್ ಜೋಡಣೆಯಿಂದ (ಅಸೆಂಬ್ಲಿ) ಆರಂಭಗೊಂಡ ಈ ಪಯಣ, ಈಗ ಅವುಗಳ ಮಾದರಿ, ಘಟಕ, ಸಿದ್ಧ ಉತ್ಪನಗಳ ಉತ್ಪಾದನೆಯತ್ತ ಸಾಗುತ್ತಿದೆ. ಈ ಪಯಣದಲ್ಲಿ ನಾವು ಅತ್ಯಂತ ವ್ಯವಸ್ಥಿತವಾಗಿ ಸಾಗುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಸೆಮಿಕಂಡಕ್ಟರ್ ಕ್ಷೇತ್ರ ಲಕ್ಷ ಕೋಟಿ ಡಾಲರ್ ಮೌಲ್ಯದ ಉದ್ಯಮವಾಗಿ ಬೆಳೆಯುತ್ತಿದ್ದು, ಇದಕ್ಕೆ ಪ್ರತಿಭೆಗಳ ಅವಶ್ಯಕತೆಯೂ ಅಷ್ಟೇ ಮುಖ್ಯವಾಗಿದೆ. ಇದೊಂದು ಸೂಕ್ತ ಅವಕಾಶ. ಇದಕ್ಕಾಗಿ 278 ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳು ಸೆಮಿಕಂಡಕ್ಟರ್ ಚಿಪ್ ಗಳ ವಿನ್ಯಾಸ ಹಾಗೂ ನಾವೀನ್ಯತೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳಿಂದ ತಯಾರಿಸಲ್ಪಟ್ಟ 28 ಚಿಪ್ ಗಳು ಸಿದ್ಧಗೊಂಡಿವೆ. ಸೆಮಿಕಂಡಕ್ಟರ್ ಕ್ಷೇತ್ರದ ಮೊದಲ ಆವೃತ್ತಿಯನ್ನು ನಾವು ಪ್ರಾಯೋಗಿಕವಾಗಿ ಪೂರ್ಣಗೊಳಿಸಿದ್ದು, ಈಗ ಎರಡನೇ ಆವೃತ್ತಿಯತ್ತ ಸಾಗುತ್ತಿದ್ದೇವೆ. ಇದು ಸೆಮಿಕಂಡಕ್ಟರ್ ಚಿಪ್ ಗಳಿಗೆ ಅವಶ್ಯಕವಾದ ಉಪಕರಣ ಹಾಗೂ ಸಾಮಗ್ರಿಗಳ ಉತ್ಪಾದನೆಯತ್ತ ಗಮನ ಹರಿಸಲಿದೆ ಎಂದು ವಿವರಿಸಿದರು.
ಇದಕ್ಕೂ ಪೂರ್ವದಲ್ಲಿ, ಸೆಮಿಕಂಡಕ್ಟರ್ ಉತ್ಪಾದನಾ ಉಪಕರಣಗಳಲ್ಲಿ ಬಳಸುವ ಹೆಚ್ಚಿನ ನಿಖರತೆಯ ಘಟಕಗಳ ತಯಾರಿಕೆಯ ಕುರಿತು ಸಚಿವರು ಚರ್ಚೆ ನಡೆಸಿದರು. ಸೆಮಿಕಂಡಕ್ಟರ್ ಗಳ ತಯಾರಿಕೆಗೆ ಬಳಸುವ ಕೆಲವು ವಸ್ತುಗಳನ್ನು ಕಾರ್ಬೊರಂಡಮ್ ಯೂನಿವರ್ಸಲ್ ಲಿಮಿಟೆಡ್ (CUMI) ಪ್ರದರ್ಶಿಸಿತು.
Related Articles
Thank you for your comment. It is awaiting moderation.
Comments (0)