2 ವರ್ಷದ ಸಾಧನೆಯ ಹೆಜ್ಜೆಗಳನ್ನು ಬಿಚ್ಚಿಟ್ಟ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ 

ಬೆಂಗಳೂರು:ರಾಜ್ಯದಲ್ಲಿ ವ್ಯವಸ್ಥಿತ ಮತ್ತು ವ್ಯಾಪಕ ಕೈಗಾರಿಕಾ ಬೆಳವಣಿಗೆಯನ್ನು ಸಾಧಿಸಲು 44,165 ಎಕರೆ ವಿಸ್ತೀರ್ಣದಲ್ಲಿ ಹಾಲಿ ಇರುವ ಪೀಣ್ಯ ಸೇರಿದಂತೆ ಒಟ್ಟು 18 ಕೈಗಾರಿಕಾ ವಸಹಾತುಗಳನ್ನು  ವಿಶೇಷ ಬಂಡವಾಳ ಹೂಡಿಕೆ ಪ್ರದೇಶಗಳಾಗಿ (ಎಸ್ಐಆರ್- ಸ್ಪೆಷಲ್ ಇನ್ವೆಸ್ಟ್ಮೆಂಟ್ ರೀಜನ್) ಘೋಷಣೆ ಮಾಡಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶುಕ್ರವಾರ ಹೇಳಿದ್ದಾರೆ

ಈ ಸಂಬಂಧ ಈಗಾಗಲೇ ನಾಲ್ಕು ಅಧಿಸೂಚನೆಗಳನ್ನು ಹೊರಡಿಸಲಾಗಿದೆ ಎಂದು ಅವರು ವಿವರಿಸಿದರು.ಸರಕಾರಕ್ಕೆ ಎರಡು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗಳಲ್ಲಿ ಮಾಡಿರುವ ಸಾಧನೆಗಳನ್ನು ವಿವರಿಸಿಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಯು ಮತ್ತಷ್ಟು ತ್ವರಿತ ಮತ್ತು ವಿಸ್ತೃತವಾಗಿ ನಡೆಯಬೇಕು ಎನ್ನುವುದು ಸರಕಾರದ ಉದ್ದೇಶವಾಗಿದೆ. ಇದಕ್ಕಾಗಿ ಎಸ್ಐಆರ್ ಮಾದರಿಯನ್ನು ಜಾರಿಗೆ ತರಲಾಗುತ್ತಿದೆ. ಹೊಸ ವ್ಯವಸ್ಥೆಯಿಂದಾಗಿ ಈ ಪ್ರದೇಶಗಳಲ್ಲಿನ ಕೈಗಾರಿಕೆಗಳಿಂದ ಇನ್ನು ಮುಂದೆ ಕೆಐಎಡಿಬಿಯೇ ಆಸ್ತಿ ತೆರಿಗೆ ಸಂಗ್ರಹಿಸಲಿದೆ. ಅದರಲ್ಲಿ ಶೇ 70ರಷ್ಟು ಹಣವನ್ನು ಸ್ಥಳೀಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಗೆ ಮೀಸಲಿಡಲಿದೆ. ಉಳಿದ ಶೇ 30ರಷ್ಟು ಹಣವನ್ನು ಸ್ಥಳೀಯ ಪಾಲಿಕೆ/ ನಗರಸಭೆ ಸಂಸ್ಥೆಗಳಿಗೆ ನೀಡಲಿದೆ ಎಂದು ಅವರು ವಿವರಿಸಿದರು.

ಬೆಂಗಳೂರಿನ ಪೀಣ್ಯ 1ರಿಂದ 4ನೇ ಹಂತದವರೆಗಿನ ಕೈಗಾರಿಕಾ ಪ್ರದೇಶದ1461.46 ಎಕರೆಯನ್ನು ಎಸ್ಐಆರ್ ಎಂದು ಘೋಷಿಸಲಾಗಿದೆ.ಉಳಿದಂತೆ ಬೆಂಗಳೂರಿನಲ್ಲಿರುವ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಹಂತ-1ರಲ್ಲಿ 3013.53 ಎಕರೆ, ಡಾಬಸಪೇಟೆ ಕೈಗಾರಿಕಾ ಪ್ರದೇಶದ 1, 2, 4 ಮತ್ತು 5ನೇ ಹಂತಗಳಲ್ಲಿರುವ 3657.24 ಎಕರೆ, ಬಿಡದಿ 1 ಮತ್ತು 2ನೇ ಹಂತಗಳಲ್ಲಿರುವ 1542.92 ಎಕರೆ, ಮೈಸೂರಿನ ಕಡಕೋಳ ಮತ್ತು ಅಡಕನಹಳ್ಳಿ ಸಬ್-ಲೇಔಟ್, ಕೋಚನಹಳ್ಳಿ, ಇಮ್ಮಾವು, ತಾಂಡ್ಯಾ 2ನೇ ಹಂತ, ಮಹಿಳಾ ಉದ್ಯಮಿಗಳ ಪಾರ್ಕ್ 1 ಮತ್ತು 2ನೇ ಹಂತ, ಎಸ್.ಯು.ಸಿ, ಫಿಲಂ ಸಿಟ ವ್ಯಾಪ್ತಿಯಲ್ಲಿ 3198.50 ಎಕರೆ, ಮೈಸೂರಿನ ಹೆಬ್ಬಾಳ, ಹೂಟಗಳ್ಳಿ, ಬೆಳವಾಡಿ, ಬೆಳಗೊಳ, ಕೂರಗಳ್ಳಿ, ಹೆಬ್ಬಾಳ 2ನೇ ಹಂತ ಮತ್ತು ಎಸ್.ಯು.ಸಿ. ವ್ಯಾಪ್ತಿಯಲ್ಲಿ 3,799.19 ಎಕರೆ, ತುಮಕೂರಿನ ವಸಂತ ನರಸಾಪುರ 1, 2 ಮತ್ತು 3ನೇ ಹಂತ ಮತ್ತು ಸಬ್-ಲೇಔಟುಗಳು, ಜಪಾನ್ ಕೈಗಾರಿಕಾ ವಸಾಹತುವಿನ ವ್ಯಾಪ್ತಿಯಲ್ಲಿ 3878.20 ಎಕರೆ, ಗೌರಿಬಿದನೂರು ಕೈಗಾರಿಕಾ ಪ್ರದೇಶದ 1, 2 ಮತ್ತು 3ನೇ ಹಂತಗಳಲ್ಲಿ 1470.73 ಎಕರೆ, ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 1, 2 ಮತ್ತು 3ನೇ ಹಂತಗಳಲ್ಲಿನ 2416.73 ಎಕರೆ, ಹಾಸನದಲ್ಲಿರುವ ಗ್ರೋತ್ ಸೆಂಟರ್ ವ್ಯಾಪ್ತಿಯಲ್ಲಿ 2260.96 ಎಕರೆ, ಚಾಮರಾಜನಗರದ ಬದನಗುಪ್ಪೆ-ಕೆಲ್ಲಂಬಳ್ಳಿಯಲ್ಲಿ 2367.53 ಎಕರೆ, ಯಾದಗಿರಿ ಜಿಲ್ಲೆಯ ಕಡೇಚೂರಿನಲ್ಲಿ 3284.27 ಎಕರೆ ಮತ್ತು ರಾಯಚೂರು ಗ್ರೋತ್ ಸೆಂಟರಿನಲ್ಲಿ 1744.75 ಎಕರೆ ಪ್ರದೇಶವನ್ನು ವಿಶೇಷ ಹೂಡಿಕೆ ಪ್ರದೇಶ ಎಂದುಗುರುತಿಸಲಾಗಿದೆ ಎಂದು ಅವರು ವಿವರಿಸಿದರು.

ಉಳಿದಂತೆ ನರಸಾಪುರ-ಜಕ್ಕಸಂದ್ರದ 1 ಮತ್ತು 2ನೇ ಹಂತಗಳಲ್ಲಿ 2019.97 ಎಕರೆ, ದೊಡ್ಡಬಳ್ಳಾಪುರ ತಾ.ನಲ್ಲಿರುವ  ಒಬಡೇನಹಳ್ಳಿ ಮತ್ತು ಆದಿನಾರಾಯಣ ಹೊಸಹಳ್ಳಿ ವ್ಯಾಪ್ತಿಯಲ್ಲಿ 1696.09 ಎಕರೆ, ಬೀದರಿನ ನೌಬಾದ್ ಮತ್ತು ಕೊಲ್ಹಾರ ಕೈಗಾರಿಕಾ ಪ್ರದೇಶದಲ್ಲಿ 1705.34 ಎಕರೆ, ಬೆಂಗಳೂರಿನ ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶದ ಹಂತ 1, 2, 3 ಮತ್ತು 4ನೇ ಹಂತ, ಬೊಮ್ಮನಹಳ್ಳಿ-ಜಿಗಣಿ ಲಿಂಕ್ ರಸ್ತೆ, ಜಿಗಣಿಯ 1 ಮತ್ತು 2ನೇ ಹಂತಗಳಲ್ಲಿನ 1830.07 ಎಕರೆಯನ್ನೂ ಸೇರಿಸಲಾಗಿದೆ.

ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿ ಮತ್ತು ನರೇಂದ್ರ ಹಾಗೂ ಗುಗ್ಗಲಗಟ್ಟಿಗಳಲ್ಲಿ 2818.23 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಮಾರ್ಚ್ 19ರಂದು ಅಧಿಸೂಚನೆ ಹೊರಬಿದ್ದಿದೆ. ಹೀಗೆ ಒಟ್ಟು 44165.71 ಎಕರೆ ಭೂಮಿಯನ್ನು ವಿಶೇಷ ಹೂಡಿಕೆ ಪ್ರದೇಶದಡಿ ತರಲಾಗುತ್ತಿದೆ. ಇದರಿಂದ ಹೂಡಿಕೆ ಆಕರ್ಷಣೆ, ಮೂಲಸೌಕರ್ಯ ಅಭಿವೃದ್ಧಿ, ಸಮರ್ಪಕ ಸಂಪರ್ಕ ಸಾಧ್ಯವಾಗಲಿದ್ದು, ಕೈಗಾರಿಕಾ ಬೆಳವಣಿಗೆಯು ಅಪೇಕ್ಷಿತ ವೇಗದಲ್ಲಿ ಸಂಭವಿಸಲಿದೆ ಎಂದು ಪಾಟೀಲ ಹೇಳಿದ್ದಾರೆ.

 

Related Articles

Comments (0)

Leave a Comment