ಕರ್ನಾಟಕವು ದೇಶದ ‘ಎಂಆರ್‌ಓ, ರಾಜಧಾನಿಯಾಗಿ ಹೊರಹೊಮ್ಮಿದೆ;ಎಂ‌ ಬಿ ಪಾಟೀಲ

ಬೆಂಗಳೂರು: ವೈಮಾನಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕ್ರೋನ್ಸ್, ಸಾಫ್ರಾನ್, ಟಿಎಎಸ್ಎಲ್ ಮುಂತಾದ ಕಂಪನಿಗಳು ಈಗಾಗಲೇ ರಾಜ್ಯದಲ್ಲಿ ಹೂಡಿಕೆಯ ಭರವಸೆಯನ್ನು ಮುಂದಿನ ಹಂತಕ್ಕೆ ಒಯ್ದಿವೆ. ಜೊತೆಗೆ ಇಂಡಿಗೋ ಮತ್ತು ಏರ್  ಇಂಡಿಯಾ ಕೂಡ ತಮ್ಮ‌ ಎಂಆರ್ ಓ ಘಟಕಗಳನ್ನು ರಾಜ್ಯದಲ್ಲಿ ಆರಂಭಿಸಿವೆ. ಈ‌ ಮೂಲಕ ಕರ್ನಾಟಕವು ದೇಶದ ಎಂಆರ್ ಓ ರಾಜಧಾನಿಯಾಗಿ ಹೊರಹೊಮ್ಮಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟವು ಶನಿವಾರ ಇಲ್ಲಿ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯೆಲ್ ಅವರೊಂದಿಗೆ ಏರ್ಪಡಿಸಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಈ ವರ್ಷದ ಫೆಬ್ರವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ತಯಾರಿಕೆ ವಲಯಕ್ಕೆ ಖಾತ್ರಿಯಾಗಿದ್ದ ಒಟ್ಟು 5.56 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಪೈಕಿ ಈಗಾಗಲೇ 3.4 ಲಕ್ಷ ಕೋಟಿ ರೂ. ಹೂಡಿಕೆಯ ಹಲವು ಪ್ರಕ್ರಿಯೆಗಳು ನೈಜವಾಗಿ ನಡೆಯುತ್ತಿವೆ.ಫೆಬ್ರವರಿಯಲ್ಲಿ ಜಾರಿಗೆ ತಂದ ರಾಜ್ಯದ ನೂತನ ಕೈಗಾರಿಕಾ ನೀತಿಯು ಉದ್ಯಮಸ್ನೇಹಿಯಾಗಿದೆ. ಇದರಲ್ಲಿ ಪರಿಸರಸ್ನೇಹಿ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆಗೆ ಒತ್ತು ಕೊಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯವು ಪ್ರಾದೇಶಿಕ ಅಸಮತೋಲನ‌ ನಿವಾರಣೆ, ಮಹಿಳೆಯರ ಉದ್ಯಮಶೀಲತೆ, ಉದ್ಯೋಗಸೃಷ್ಟಿ ಮತ್ತು ಆರ್ & ಡಿ ಇವುಗಳಿಗೆ ಆದ್ಯತೆ ನೀಡಿದೆ. ಹೂಡಿಕೆದಾರರ ಸಮಾವೇಶದಲ್ಲಿ ಆದ ಒಡಂಬಡಿಕೆಗಳನ್ನು ಸಕಾರಾತ್ಮಕವಾಗಿ ಮುಂದಿನ ಹಂತಗಳಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಪಾಟೀಲ ಹೇಳಿದ್ದಾರೆ.

Related Articles

Comments (0)

Leave a Comment