ಸ್ವೀಡನ್ನಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ರೋಡ್ಷೋ
- by Suddi Team
- June 16, 2025
- 5 Views

ಗೋಥೆನ್ಬರ್ಗ್ (ಸ್ವೀಡನ್): ಕರ್ನಾಟಕವನ್ನು ಶುದ್ಧ ಇಂಧನ ಸಂಚಾರ (ಕ್ಲೀನ್ ಮೊಬಿಲಿಟಿ) ಮತ್ತು ವಿದ್ಯುತ್ಚಾಲಿತ ವಾಹನ (ಇವಿ) ತಯಾರಿಕೆಯ ನಾವೀನ್ಯತೆಯ ಜಾಗತಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಹೂಡಿಕೆದಾರರ ಗಮನ ಸೆಳೆಯಲು ಸ್ವೀಡನ್ನ ಗೋಥೆನ್ಬರ್ಗ್ನಲ್ಲಿ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿನ ಕರ್ನಾಟಕದ ಉನ್ನತ ಮಟ್ಟದ ನಿಯೋಗವು ರೋಡ್ಷೋ ನಡೆಸಿತು.
ಇದೇ ವರ್ಷದ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ʼಇನ್ವೆಸ್ಟ್ ಕರ್ನಾಟಕ 2025ʼರಲ್ಲಿ ಆಗಿರುವ ಹೂಡಿಕೆ ಒಪ್ಪಂದಗಳನ್ನು ತ್ವರಿತವಾಗಿ ಜಾರಿಗೊಳಿಸಲು ಹಾಗೂ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಲು ನಡೆಯಲಿರುವ 10 ದಿನಗಳ ಅಂತರರಾಷ್ಟ್ರೀಯ ರೋಡ್ಷೋಗಳಲ್ಲಿ ಸಚಿವ ಪಾಟೀಲ ಅವರು ಭಾಗವಹಿಸಲಿದ್ದಾರೆ.
ಸ್ವೀಡನ್ ನಂತರ ಕರ್ನಾಟಕದ ನಿಯೋಗವು ಸಚಿವ ಪಾಟೀಲ ಅವರ ನೇತೃತ್ವದಲ್ಲಿ ಡೆನ್ಮಾರ್ಕ್ನಲ್ಲಿಯೂ ರೋಡ್ಷೋ ನಡೆಸಲಿದೆ. ಇಲ್ಲಿ ನಡೆಯುತ್ತಿರುವ ಇವಿಎಸ್38 ಶೃಂಗಸಭೆಯು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ, ಬಳಕೆ ಹೆಚ್ಚಳ ಮತ್ತು ಅತ್ಯಾಧುನಿಕ ವಾಹನ ತಯಾರಿಕೆಯ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸಿದ ಪ್ರಮುಖ ಜಾಗತಿಕ ಸಮ್ಮೇಳನವಾಗಿದೆ.
ಶೃಂಗಸಭೆಯ ಸಂದರ್ಭದಲ್ಲಿ ನಡೆದ ರೋಡ್ಷೋ ಉದ್ದೇಶಿಸಿ ಮಾತನಾಡಿದ ಸಚಿವ ಪಾಟೀಲ ಅವರು, ʼಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸದೃಢ ಪ್ರಗತಿಪರ ಇವಿ ನೀತಿ, ರಾಜ್ಯದಲ್ಲಿನ ತಯಾರಿಕಾ ಸಾಮರ್ಥ್ಯ ಮತ್ತು ಅಭಿವೃದ್ಧಿ ಪಥದಲ್ಲಿ ಮುನ್ನಡೆದಿರುವ ನವೋದ್ಯಮಗಳ ಸಾಧನೆಯನ್ನು ಜಾಗತಿಕ ಹೂಡಿಕೆದಾರರಿಗೆ, ಉದ್ಯಮ ದಿಗ್ಗಜರಿಗೆ ಮನವರಿಕೆ ಮಾಡಿಕೊಟ್ಟು, ಬಂಡವಾಳ ಹೂಡಿಕೆಗೆ ಆಹ್ವಾನ ನೀಡಿದರು.
ಕರ್ನಾಟಕವು ವಿದ್ಯುತ್ ಚಾಲಿತ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ, ನಾವೀನ್ಯತೆ ಮತ್ತು ತಯಾರಿಕೆಗೆ ಪ್ರಮುಖ ಜಾಗತಿಕ ತಾಣವಾಗಿರುವುದರ ಮಾಹಿತಿಯನ್ನು ರೋಡ್ಷೋದಲ್ಲಿ ಪ್ರಸ್ತುತಪಡಿಸಲಾಯಿತು.
ಸಚಿವ ಪಾಟೀಲ ಅವರು ವೋಲ್ವೊ ಗ್ರೂಪ್ನ ಅಧ್ಯಕ್ಷ ಮತ್ತು ಸಿಇಒ ಮಾರ್ಟಿನ್ ಲುಂಡ್ಸ್ಟೆಡ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಕರ್ನಾಟಕದಲ್ಲಿ ತನ್ನ ವಾಹನಗಳ ತಯಾರಿಕಾ ಸಾಮರ್ಥ್ಯ ವಿಸ್ತರಿಸಲು ವೋಲ್ವೊ ಸಮೂಹದ ಬದ್ಧತೆಯನ್ನು ಮಾರ್ಟಿನ್ ಅವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.
Related Articles
Thank you for your comment. It is awaiting moderation.
Comments (0)