Live- 17 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದ ನೇರ ಪ್ರಸಾರ
- by Suddi Team
- January 29, 2026
- 63 Views
ಬೆಂಗಳೂರು:17 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಸಂಜೆ 5.30ಕ್ಕೆ ಡಾ. ಜ್ಯೋತ್ಸ್ನಾ ಶ್ರೀಕಾಂತ್ ಅವರ ನೇತೃತ್ವದಲ್ಲಿ 35 ಕಲಾವಿದರಿಂದ ‘ವಿಶ್ವ ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಆರು ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭವಾಗಲಿದೆ. ರಾತ್ರಿ 8ಕ್ಕೆ ಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ನೆದರ್ಲ್ಯಾಂಡ್ ದೇಶದ ‘ಫೋರ್ಟ್ ಬ್ಯಾಗೇಜ್’ ಚಿತ್ರವು ಉದ್ಘಾಟನಾ ಚಿತ್ರವಾಗಿ ಪ್ರದರ್ಶನವಾಗಲಿದೆ.
ಇಂದಿನಿಂದ ರಿಂದ ಫೆಬ್ರವರಿ 06ರವರೆಗೂ, ಈ ಚಿತ್ರೋತ್ಸವದಲ್ಲಿ 65 ದೇಶಗಳ ಸುಮಾರು 225 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು ಆಯಾ ದೇಶದ ಸ್ಥಿತಿ-ಗತಿ, ಜನ ಜೀವನ ಮತ್ತು ಸಂಸ್ಕøತಿಯನ್ನು ಬಿಂಬಿಸಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು ಈ ಚಿತ್ರೋತ್ಸವದಲ್ಲಿ ‘ಬೆಂಗಳೂರಿನಲ್ಲಿ ಜಗತ್ತು’ ಎನ್ನುವ ಶೀರ್ಷಿಕೆಯಡಿ ಪ್ರದರ್ಶನಗೊಳ್ಳಲಿವೆ. ಈ ಚಿತ್ರೋತ್ಸವವನ್ನು ಪ್ರತೀ ವರ್ಷವೂ ಅರ್ಥಪೂರ್ಣವಾದ ಧ್ಯೇಯವಾಕ್ಯದ ಮೂಲಕ ನಡೆಸಲಾಗುತ್ತಿದ್ದು, ಈ ಬಾರಿ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪನವರ ಪ್ರಸಿದ್ಧ ಗೀತೆಯಾಗಿರುವ *ಸ್ತ್ರೀ ಎಂದರೆ ಅಷ್ಟೇ ಸಾಕೆ* ಎಂಬ ಸಾಲಿನೊಂದಿಗೆ *ಸ್ತ್ರೀ ಸಂವೇದನೆ, ಸಮಾನತೆಯ ದನಿ* ಎಂಬ ಟ್ಯಾಗ್ ಲೈನ್ ಹೊಂದಿರುವ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.
ಇದಲ್ಲದೆ ಈ ಚಿತ್ರೋತ್ಸವದಲ್ಲಿ ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗ, ಚಿತ್ರ ಭಾರತಿ (ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ), ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಸಮಕಾಲೀನ ವಿಶ್ವ ಸಿನಿಮಾ, ಕನ್ನಡ ಜನಪ್ರಿಯ ಸಿನಿಮಾ, ಫಿಪ್ರೆಸ್ಕಿ – ವಿಮರ್ಶಕರ ವಾರ, ಜೀವನ ಕಥನ ಆಧಾರಿತ ಚಿತ್ರಗಳು, ದೇಶ ಕೇಂದ್ರಿತ ವಿಶೇಷ: ಫೋಲೆಂಡ್, ಭಾರತೀಯ ಉಪಭಾಷಾ ಚಲನಚಿತ್ರಗಳು, ಪುನರಾವಲೋಕನ ಮುಂತಾದ ವಿಭಾಗಗಳಡಿ ಹಲವು ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಕನ್ನಡದ ಮೇರು ನಟ ಪದ್ಮಭೂಷಣ ಡಾ. ರಾಜಕುಮಾರ್ ಅಭಿನಯದ ಐದು ಮಹತ್ವದ ಕನ್ನಡ ಚಲನಚಿತ್ರಗಳ ಪ್ರದರ್ಶನ, ಪೋಲೆಂಡಿನ ಪ್ರಖ್ಯಾತ ನಿರ್ದೇಶಕ ಆಂದ್ರೆ ವಾಜ್ದಾ ಅವರ ನಿರ್ದೇಶನದ ಏಳು ಪೋಲಿಷ್ ಚಲನಚಿತ್ರಗಳ ಪ್ರದರ್ಶನ, ಖ್ಯಾತ ಅಭಿನೇತ್ರಿ ಸ್ಮಿತಾ ಪಾಟೀಲ್ ಅವರ ಹೆಸರಾಂತ ಚಲನಚಿತ್ರಗಳ ಪ್ರದರ್ಶನ, ಥಾಯ್ಲೆಂಡಿನ ಖ್ಯಾತ ನಿರ್ದೇಶಕ ಅಚಿತಪಾಂಗ್ ವೀರಸೆಥಕುಲ್ ಅವರ ನಾಲ್ಕು ಪ್ರಮುಖ ಚಲನಚಿತ್ರಗಳ ಪ್ರದರ್ಶನ, ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಜನಮನ್ನಣೆ ಪಡೆದ ಸಮಕಾಲೀನ ಭಾರತೀಯ ಚಲನಚಿತ್ರಗಳ ಪ್ರದರ್ಶನ, ಸಂರಕ್ಷಿಸಲ್ಪಟ್ಟ ಮಹತ್ವದ ಭಾರತೀಯ ಚಲನಚಿತ್ರಗಳ ಪ್ರದರ್ಶನ ಕೂಡಾ ನಡೆಯಲಿದೆ.
ಚಿತ್ರೋತ್ಸವ ನಡೆಯುವ ಎಂಟು ದಿನಗಳ ಕಾಲ ಪ್ರತೀ ದಿನ ಚಿತ್ರ ನಿರ್ಮಾಣ, ನಿರ್ದೇಶನ, ಚಿತ್ರಕತೆ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ಮಾಸ್ಟರ್ ಕ್ಲಾಸ್, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳಿರುತ್ತವೆ. ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಅವರಿಂದ ‘ನಾವು ಮತ್ತು ನಮ್ಮ ಸಿನಿಮಾ’ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ. ಮಿಕ್ಕಂತೆ ಖ್ಯಾತ ಸಂಕಲನಕಾರರಾದ ಶ್ರೀಕರ್ ಪ್ರಸಾದ್ ಅವರಿಂದ ‘ಚಲನಚಿತ್ರದ ಸಂಕಲನದ ಮಹತ್ವ’, ನಿರ್ದೇಶಕ ಮತ್ತು ಸಂಕಲನಕಾರ ಮಹೇಶ್ ನಾರಾಯಣನ್ ಅವರಿಂದ ‘ಸಮಕಾಲೀನ ಚಲನಚಿತ್ರ ಕಥನ ನಿರೂಪಣೆ ಮತ್ತು ಶೈಲಿ’, ಹೆಸರಾಂತ ಧ್ವನಿ ವಿನ್ಯಾಸಕರಾದ ಬಿಶ್ವದೀಪ್ ಚಟರ್ಜಿ ಅವರಿಂದ ‘ದೃಶ್ಯಾತೀತ ಧ್ವನಿ- ಆಡಿಯೋಗ್ರಫಿಯ ಕಲೆ’, ಅನುರಾಗ್ ಕಶ್ಯಪ್ರವರಿಂದ ‘ಸಾಂಪ್ರದಾಯಿಕ ಕಲ್ಪನೆಗಳಾಚೆಗಿನ ಚಲನಚಿತ್ರ ಕಥನಗಾರಿಕೆ’ ಕುರಿತ ಉಪನ್ಯಾಸ ನಡೆಯಲಿದೆ.
ಹೆಸರಾಂತ ಛಾಯಾಗ್ರಾಹಕ ವಿ.ಕೆ. ಮೂರ್ತಿ ಕುರಿತು ವಾರ್ಷಿಕ ಸ್ಮಾರಕ ಉಪನ್ಯಾಸ ನಡೆಯಲಿದ್ದು, ‘ಲೆನ್ಸ್ಗಳ ಆಯ್ಕೆ, ಬೆಳಕಿನ ವಿನ್ಯಾಸ ಮತ್ತು ಛಾಯಾಗ್ರಹಣ ಕಲೆ’ ಕುರಿತು ಮಾತುಕತೆ ನಡೆಯಲಿದ್ದು, ಹಿರಿಯ ಛಾಯಾಗ್ರಾಹಕರಾದ ಜಿ.ಎಸ್. ಭಾಸ್ಕರ್ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. ಡಾ. ಗಿರೀಶ್ ಕಾಸರವಳ್ಳಿ, ಡಾ. ಸಾಧು ಕೋಕಿಲ, ಡಾ. ಜಯಮಾಲ ಹಾಗೂ ಇತರರೊಂದಿಗೆ ಕಳೆದ ನಾಲ್ಕು ದಶಕಗಳ ಕನ್ನಡ ಸಿನಿಮಾ ಬಗ್ಗೆ ಸಂವಾದ, ಗಿರೀಶ್ ಕಾಸರವಳ್ಳಿ ಅವರಿಂದ ‘ಚಲನಚಿತ್ರ ಕಥನಗಳಲ್ಲಿ ನಮ್ಮತನ ಮತ್ತು ನೈಜತೆʼ ಕುರಿತ ಉಪನ್ಯಾಸ ನಡೆಯಲಿದೆ. ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಚಿತ್ರೋತ್ಸವದ ಧ್ಯೇಯವಾಕ್ಯ ಕೇಂದ್ರಿತ ಸಂವಾದ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ.
ಈ ಪ್ರತಿಷ್ಠಿತ ಚಿತ್ರೋತ್ಸವವು ಫೆಬ್ರವರಿ 06ರವರೆಗೂ ನಡೆಯಲಿದ್ದು, ಬೆಂಗಳೂರಿನ ರಾಜಾಜಿನಗರದ ಲುಲು ಮಾಲ್ನ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್ ಅಲ್ಲದೆ, ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿ ಮತ್ತು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಚಿತ್ರಗಳು ಪ್ರದರ್ಶನವಾಗಲಿವೆ.
Related Articles
Thank you for your comment. It is awaiting moderation.


Comments (0)