ಭೀಮಣ್ಣ ಖಂಡ್ರೆ ನಿಧನಕ್ಕೆ ಕಾಶಿ ಜಗದ್ಗುರುಗಳ ಸಂತಾಪ

ವಾರಣಾಸಿ : ಅಖಿಲ ಭಾರತ ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷ, ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಭೀಮಣ್ಣ ಖಂಡ್ರೆ ನಿಧನಕ್ಕೆ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಕಿರಿಯ ಜಗದ್ಗುರು ಶ್ರೀಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿ.ಎಂ. ದೇವರಾಜ ಅರಸ ಅವರ ಕಾಲಘಟ್ಟದಿಂದಲೂ ಮೀಸಲಾತಿಯ ಹೆಸರಿನಲ್ಲಿ ವೀರಶೈವ-ಲಿಂಗಾಯತರನ್ನು ಒಡೆಯುವ ಹುನ್ನಾರಗಳನ್ನು ನಿರ್ಭಿಡೆಯಿಂದ ವಿರೋಧಿಸಿ ವೀರಶೈವ-ಲಿಂಗಾಯತರ ಒಗ್ಗಟ್ಟನ್ನು ಕಾಪಾಡುವಲ್ಲಿ ತಮ್ಮದೇ ಆದ ಸಮಷ್ಟಿ ಭಾವದ ವಿಚಾರಗಳನ್ನು ಪ್ರತಿಪಾದನೆ ಮಾಡಿದ್ದನ್ನು ಮರೆಯಲಾಗದು. ‘ವೀರಶೈವ-ಲಿಂಗಾಯತರು ಒಳಪಂಗಡಗಳನ್ನು ಮರೆತು ಒಂದಾಗಿದ್ದು ಒಗ್ಗಟ್ಟನ್ನು ಪ್ರದರ್ಶಿಸಿದಾಗ ಮಾತ್ರ ನಮ್ಮ ಬೇಡಿಕೆಗಳು ಈಡೇರುತ್ತವೆ’ ಎಂಬ ಮಾತನ್ನು ಅವರು ಪದೇ ಪದೇ ಪುನರುಚ್ಛರಿಸುತ್ತಿದ್ದರು.

ವೀರಶೈವ ಭವನ: ಅಖಿಲ ಭಾರತ ವೀರಶೈವ ಮಹಾಸಭೆಗಾಗಿಯೇ ಬೆಂಗಳೂರು ಮಹಾನಗರದಲ್ಲಿ ‘ವೀರಶೈವ ಭವನ’ ನಿರ್ಮಿಸುವಲ್ಲಿ ಭೀಮಣ್ಣ ಖಂಡ್ರೆ ಅವರ ಮುಂಚೂಣಿ ಪ್ರಯತ್ನವನ್ನು ಮರೆಯುವಂತಿಲ್ಲ. ವೀರಶೈವ-ಲಿಂಗಾಯತರ ಒಗ್ಗಟ್ಟನ್ನು ಕಾಪಾಡುವಲ್ಲಿ ವೀರಶೈವ ಧರ್ಮದ ಪಂಚಪೀಠಗಳ ಎಲ್ಲಾ ಜಗದ್ಗುರುಗಳನ್ನು ಹಾಗೂ ಎಲ್ಲ ವಿರಕ್ತ ಮಠಾಧೀಶರನ್ನು ಸಮನ್ವಯ ದೃಷ್ಟಿಕೋನದಿಂದ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಮಾಡಿ ಅಖಿಲ ಭಾರತ ವೀರಶೈವ ಮಹಾಸಭೆಯ ಸಂಘಟನೆಗೆ ವ್ಯಾಪಕ ಶಕ್ತಿತುಂಬಿದ್ದರು. ಜೊತೆಗೆ ರಾಜಕಾರಣದಲ್ಲಿಯೂ ಶುದ್ಧಹಸ್ತರಾಗಿ ಜನರ ಬೇಕು-ಬೇಡಗಳಿಗೆ ಸ್ಪಂದಿಸಿದ್ದ ಭೀಮಣ್ಣ ಖಂಡ್ರೆ ಅವರು ಜನಾನುರಾಗಿಯಾಗಿದ್ದರು ಎಂದೂ ಉಭಯ ಕಾಶಿ ಜಗದ್ಗುರುಗಳು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

Related Articles

Comments (0)

Leave a Comment