ಕುವೆಂಪು@120: ಮಹಾಮಾನವತಾವಾದಿ ಜನ್ಮದಿನ

ಶಿವಮೊಗ್ಗ : “ಓ ನನ್ನ ಚೇತನ ಆಗು ನೀ ಅನಿಕೇತನ” ಎನ್ನುವ ಸಾಲಿನೊಂದಿಗೆ ವಿಶ್ವಮಾನವ ಸಂದೇಶದ ಪಂಚ ಮಂತ್ರಗಳನ್ನು ಜಗತ್ತಿಗೆ ಸಾರಿದ ರಸಋಷಿಯ ಹುಟ್ಟು ಹಬ್ಬ ಇಂದು. ಕನ್ನಡ ಸಾಹಿತ್ಯ ಲೋಕದ ಮೇರು ಕವಿಯಾಗಿ ಸಾಹಿತ್ಯ ಲೋಕವನ್ನಾಳಿದ ಮಹಾಮಾನವತಾವಾದಿಗೆ 120 ವಸಂತಗಳು ತುಂಬಿದ್ದು ನಾಡಿನಾದ್ಯಂತ ರಾಷ್ಟ್ರಕವಿಯ    ಸ್ಮರಣೆ ಮಾಡಲಾಗುತ್ತಿದೆ.

ಇಂದು ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ 120ನೇ ಜನ್ಮ ದಿನಾಚರಣೆ, ಕನ್ನಡ ಸಾಹಿತ್ಯದ ಕಂಪನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ನಿಜಕ್ಕೂ ಕುವೆಂಪು ಅವರಿಗೆ ಸಲ್ಲುತ್ತದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಹಿರೇಕೂಡಿಗೆಯಲ್ಲಿ ಜನಿಸಿದ ಕುವೆಂಪು, ಬೆಳೆದದ್ದು ಕುಪ್ಪಳ್ಳಿಯಲ್ಲಾದರೆ  ಆಸರೆಯಾಗಿಸಿಕೊಂಡಿದ್ದು ಮೈಸೂರನ್ನ. ಮಲೆನಾಡಿನಲ್ಲಿ ಜನಿಸಿದರೂ ವಿಶ್ವಪತಾಕೆಯನ್ನು ಮೈಸೂರಿಗೆ ತಂದುಕೊಡುವ ಜೊತೆಗೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ವ್ಯಕ್ತಿಯಾಗಿದ್ದರು.

ಕಾರ್ಲ್ಸ್ಮಾರ್ಕ್ಸ್, ಕುಮಾರವ್ಯಾಸ, ವರ್ಡ್ಸ್ವರ್ತ್, ರಾಮಕೃಷ್ಣ ಪರಮಹಂಸರ ಪ್ರಭಾವಕ್ಕೊಳಗಾದ ಕುವೆಂಪು ಬಂಡಾಯ ಮತ್ತು ನವೋದಯದ ಸಾಹಿತ್ಯ ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಿ, ಕಥೆಗಾರ, ಕಾದಂಬರಿಕಾರ, ನಾಟಕಕಾರ, ಮೀಮಾಂಸಕ, ಚಿಂತಕ ಹಾಗೂ ಮಹಾಮಾನವತಾವಾದಿಯಾದ ಪುಟ್ಟಪ್ಪ ರಚಿಸಿದ ಶ್ರೀರಾಮಾಯಣ ದರ್ಶನಂ ಎನ್ನುವ ಮಹಾಕಾವ್ಯಕ್ಕೆ 1967ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು ಇದು ಕನ್ನಡಕ್ಕೆ ಸಿಕ್ಕ ಮೊದಲ ಜ್ಞಾನಪೀಠ ಪ್ರಶಸ್ತಿಯಾಗಿದೆ.

“ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ” ಎನ್ನುವ ಕವಿತೆಯನ್ನು ನಾಡಗೀತೆಯಾಗಿ ನೀಡಿರುವ ಕುವೆಂಪು, ಆ ಮತ ಈ ಮತ ಅಲ್ಲ ಮನುಜ ಮತ, ಆ ಪಥ ಈ ಪಥ ಅಲ್ಲ ವಿಶ್ವಪಥ, ಆ ಒಬ್ಬರ ಉದಯ ಮಾತ್ರವಲ್ಲ ಸರ್ವರ ಸರ್ವಸ್ತರದ ಉದಯ, ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ ಸಮನ್ವ ಯಗೊಳ್ಳುವುದು ಹಾಗೂ ಎಲ್ಲವನ್ನೂ ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ ಎಂದು ಪಂಚಮಂತ್ರಗಳ ವಿಶ್ವಮಾನವ ಸಂದೇಶ ಸಾರಿದ ಕೀರ್ತಿ ಮಹಾಮಾನವತಾವಾದಿ ಕುವೆಂಪು ಅವರದ್ದು.

ಲೇಖಕ, ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದ ಕುವೆಂಪು ಹೇಮಾವತಿ ಎನ್ನುವವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿ ಮಂತ್ರ ಮಾಂಗಲ್ಯದ ಮೂಲಕ ಸರಳ ವಿವಾಹಕ್ಕೆ ಕರೆ ನೀಡಿದ್ದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಚಿದಾನಂದ್ ಕುವೆಂಪು ಅವರ ಪುತ್ರ ರತ್ನಗಳು.

ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದ ಪುಟ್ಟಪ್ಪನವರ ಮಲೆಗಳಲ್ಲಿ ಮಧುಮಗಳು, ಕಾನೂರು ಹೆಗ್ಗಡತಿ ಎನ್ನುವ ಕಾದಂಬರಿಗಳು, ಬೆರಳ್ಗೆ ಕೊರಳ್, ಶೂದ್ರ ತಪಸ್ವಿ, ಸ್ಮಶಾನ, ರಕ್ತಾಕ್ಷಿ, ಯಮನ ಸೋಲು, ಚಂದ್ರಹಾಸ , ಜಲಗಾರ, ಮಹಾರಾತ್ರಿ ಸೇರಿದಂತೆ ಹಲವು ನಾಟಕಗಳು, ಮಲೆನಾಡಿನ ಚಿತ್ರಗಳ ಚಿತ್ರ ಪ್ರಬಂಧ, ಅನಿಕೇತನ, ಅಗ್ನಿಹಂಸ, ಕೊಳಲು, ಪ್ರೇಮಕಾಶ್ಮೀರ, ಕಿಂಕಿಣಿ, ಮಂತ್ರಾಕ್ಷತೆ, ಪಾಂಚಜನ್ಯ ಸೇರಿದಂತೆ ಹಲವಾರು ಕಾವ್ಯಗಳು, ದ್ರೌಪದಿಯ ಶ್ರೀಮುಡಿ ಎನ್ನುವ ವಿಮರ್ಶೆ ಇಂದಿಗೂ ಸಾಹಿತ್ಯಾಸಕ್ತರ ಮನದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ. ಇನ್ನು ಅವರ ಆತ್ಮಕಥನವಾದ ನೆನಪಿನ ದೋಣಿಯಲ್ಲಿ ಒಂದು ವಿಭಿನ್ನ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ.

1955ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, 1958ರಲ್ಲಿ ಪದ್ಮಭೂಷಣ, 1986ರಲ್ಲಿ ಪದ್ಮವಿಭೂಷಣ, 1988ರಲ್ಲಿ ಪಂಪ ಪ್ರಶಸ್ತಿ, 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಗೆ ಪುರಸ್ಕರತರಾದ ಕುವೆಂಪು ಅವರ ಮಹಾಕಾವ್ಯ ಶ್ರೀರಾಮಾಯಣ ದರ್ಶನಂಗೆ 1967ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, 1964ರಲ್ಲಿ ರಾಷ್ಟ್ರಕವಿ ಬಿರುದಾವಳಿಗೆ ಪಾತ್ರರಾಗಿದ್ದಾರೆ.

ಕುವೆಂಪು ಅವರು 1994ರಲ್ಲಿ ಮೈಸೂರಿನಲ್ಲಿ ಒಂಟಿಕೊಪ್ಪಲಿನಲ್ಲಿರುವ ಉದಯರವಿ ನಿವಾಸಲ್ಲಿ ನಿಧನರಾದ ಬಳಿಕ ಹುಟ್ಟೂರು ಕುಪ್ಪಳ್ಳಿಯಲ್ಲಿ ಕುವೆಂಪು ಪ್ರತಿಷ್ಟಾಪನವನ್ನು ಸ್ಥಾಪಿಸಲಾಗಿದ್ದು, ಅವರ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಿ ಸಾರ್ವಜನಿಕ ಪ್ರದರ್ಶನಕ್ಕೆ ಮೀಸಲಿಡಲಾಗಿದೆ. ಕುವೆಂಪು ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಹುಟ್ಟಿ ಬೆಳೆದು ಸುತ್ತಾಡಿ, ತಿರುಗಾಡಿದ ಸ್ಥಳಗಳು, ಕಲ್ಲು ಬಂಡೆಗಳ ಮೇಲೆ ಕುಳಿತು ರಚಿಸಿದ ಕಾವ್ಯಗಳು, ಕೃತಿಗಳು ಮಾತ್ರ  ಎಂದಿಗೂ ಅಚ್ಚಳಿಯದೇ ಉಳಿದಿವೆ.

ಒಟ್ಟಾರೆಯಾಗಿ ಮೇರು ಕವಿ ಇಲ್ಲ ಎನ್ನುವ ಕೊರಗು ಅವರ ಸಾಹಿತ್ಯ ಶಕ್ತಿಯಿಂದ ತುಂಬಿದ್ದು, ಸಾಹಿತ್ಯ ಲೋಕಕ್ಕೆ ಅಪರಿಮಿತ ಕಾಣಿಕೆ ನೀಡಿದ ವಿಶ್ವಮಾನವನ ಹುಟ್ಟುಹಬ್ಬವಾದ ಇಂದು ಎಲ್ಲರೂ ಒಮ್ಮೆ ಕುವೆಂಪು ಅವರನ್ನು ನೆನಪು ಮಾಡಿಕೊಂಡು ಅವರ ಕೃತಿ ಓದುವ ಮೂಲಕ ಅವರ ವಿಚಾರಧಾರೆಗಳನ್ನು ಪುನರ್‌ಮನನ ಮಾಡಿಕೊಳ್ಳುವುದು  ಆಧುನಿಕ ಸಂದರ್ಭದ ಅನೇಕ ಮೌಡ್ಯಗಳಿಗೆ ಸಕಾರಾತ್ಮಕ ಉತ್ತರವಾಗಬಲ್ಲದು.

Related Articles

Comments (0)

Leave a Comment