ತಿರುಮಲಕ್ಕೆ‌ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭೇಟಿ: ನಿರ್ಮಾಣ ಹಂತದ ಕಾಮಗಾರಿಗಳ ಪರಿವೀಕ್ಷಣೆ 

ತಿರುಮಲ: ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರದಿಂದ ಕೈಗೆತ್ತಿಕೊಂಡಿರುವ ಅತಿಥಿಗೃಹ ಹಾಗು ಛತ್ರದ ನಿರ್ಮಾಣ ಅಂತಿಮ ಹಂತಕ್ಕೆ ಬಂದಿದ್ದು, ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕಾಮಗಾರಿಯನ್ನು ಪರಿಶೀಲಿಸಿದರು.

ನೆರೆ ರಾಜ್ಯದ ಆಂಧ್ರಪ್ರೇಶದಲ್ಲಿರುವ ಧಾರ್ಮಿಕ ಕ್ಷೇತ್ರ ತಿರುಪತಿಯ ತಿರುಮಲಕ್ಕೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದರು. ಅಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಕೈಗೆತ್ತಿಕೊಂಡಿರುವ ಅಭಿವೃದ್ದಿ ಕಾರ್ಯಗಳ ಪರಿವೀಕ್ಷಣೆ ನಡೆಸಿದರು. ತಿರುಮಲದಲ್ಲಿರುವ ಕರ್ನಾಟಕ ಸರ್ಕಾರದ 3 ಅತಿಥಿ ಗೃಹಗಳು ಹಾಗೂ ಛತ್ರ ನಿರ್ಮಾಣದ ಬಾಕಿ ಉಳಿದಿರುವ ಎಲ್ಲಾ ಸಮಸ್ಯೆ/ ಕಾಮಗಾರಿಗಳನ್ನು ಮಾರ್ಚ್ 2026 ರೊಳಗೆ ಪೂರ್ಣಗೊಳಿಸುವಂತೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸಭೆ ವಿವರ:

1. ತಿರುಮಲದಲ್ಲಿನ ಭೂಮಿಯ ಲೀಸ್ ವಿಷಯ

2. ಟಿಟಿಡಿ ವಾಪಸ್ ಪಡೆದ ಭೂಮಿಗೆ ಬದಲಾಗಿ ತಿರುಪತಿಯಲ್ಲಿ 30 ಸೆಂಟ್ಸ್ ಪರ್ಯಾಯ ಭೂಮಿ ಒದಗಿಸುವುದು.

3. ತಿರುಮಲದಲ್ಲಿ ನಮ್ಮ ಪರವಾಗಿ ಟಿಟಿಡಿ ಕೈಗೊಂಡ ನಾಗರಿಕ ಕಾಮಗಾರಿಗಳ ಮೇಲೆ ವಿಧಿಸಲಾಗುವ ಸೆಂಟೇಜ್ ಶುಲ್ಕಕ್ಕೆ ವಿನಾಯಿತಿ ನೀಡುವುದು.

4. ತಿರುಮಲದಲ್ಲಿರುವ ಎಲ್ಲಾ ಅತಿಥಿ ಗೃಹಗಳ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಹಸ್ತಾಂತರಿಸುವುದು.

5. ಪ್ರೀಫ್ಯಾಬ್ರಿಕೇಟೆಡ್ ನಾಗರಿಕ ರಚನೆಗಳಿಂದ ಉಂಟಾಗುವ ನೀರು ಸೋರಿಕೆ ಸಮಸ್ಯೆಯನ್ನು ತಡೆಯುವುದು.

6. ಎಕ್ಸ್ಹಾಸ್ಟ್ ಡಕ್ಟ್‌ಗಳಿಗೆ ಸೂಕ್ತ ವಾತಾಯನ ವ್ಯವಸ್ಥೆ ಒದಗಿಸುವುದು.

7. ಎಲ್ಲಾ ಸ್ನಾನಗೃಹಗಳಲ್ಲಿ ಇರುವ PoP ಮೇಲ್ಚಾವಣಿಯನ್ನು PVC ಮೇಲ್ಚಾವಣಿಯಿಂದ ಬದಲಿಸುವುದು.

8. ಛತ್ರಕ್ಕೆ ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣಪತ್ರ ಪಡೆಯುವುದು

9. HT ಲೈನ್ ಅನುಮತಿ ಪಡೆಯಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು.

10. ಹೊರಾಂಗಣ ಪೋರ್ಟಿಕೋದಲ್ಲಿರುವ PoP ಮೇಲ್ಚಾವಣಿಯನ್ನು PVC ಮೇಲ್ಚಾವಣಿಯಿಂದ ಬದಲಿಸುವುದು.

11. ಕರ್ನಾಟಕದ ಭಕ್ತರಿಗೆ ದರ್ಶನ ಸೌಲಭ್ಯ ಒದಗಿಸುವ ಕುರಿತು ರಾಮಲಿಂಗಾರೆಡ್ಡಿ ಟಿಟಿಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು‌.

ಇತ್ತೀಚೆಗೆ  ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ ಜೆಡಿಎಸ್ ಎಂಎಲ್ಸಿ ಶರವಣ ತಿರುಪತಿ ತಿರುಮಲದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ನ್ಯೂನತೆಗಳಿರುವುದಾಗಿ ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಾವೇ ಖುದ್ದು ಭೇಟಿ ನೀಡಿ ಪರಿವೀಕ್ಷಣೆ ನಡೆಸುವುದಾಗಿ ಉತ್ತರಿಸಿದ್ದರು. ಅದರಂತೆ ಸಾರಿಗೆ ಹಾಗೂ ಮುಜರಾಯಿ ಸಚಿವರು ತಿರುಮಲಕ್ಕೆ ಭೇಟಿ ನೀಡಿ, ಟಿಟಿಡಿ ಅಧಿಕಾರಿಗಳೊಂದಿಗೆ ತಿರುಮಲದಲ್ಲಿರುವ ಕರ್ನಾಟಕ ಸರ್ಕಾರದ 3 ಅತಿಥಿ ಗೃಹಗಳು ಹಾಗೂ ಛತ್ರದ ಪರಿಶೀಲನೆ ನಡೆಸಿದರು.

ಈ‌ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಆಯುಕ್ತ ಶರತ್ ದರ್ಶನ್ ಟಿಟಿಡಿ ಟ್ರಸ್ಟ್‌ನ ಸದಸ್ಯರು ಉಪಸ್ಥಿತರಿದ್ದರು.

Related Articles

Comments (0)

Leave a Comment