ನಾಟಿಕೋಳಿ ಸಾರು ಸವಿದು ಹೈಕಮಾಂಡ್ ಕಡೆ ಬೆರಳು ತೋರಿದ ಸಿಎಂ,ಡಿಸಿಎಂ

ಬೆಂಗಳೂರು:ರಾಜ್ಯ ಸರ್ಕಾರದ ಅಧಿಕಾರ ಹಸ್ತಾಂತರ ಪ್ರಹಸನದ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿದೆ. ನಾಟಿಕೋಳಿ ಸಾರು ಸವಿದಿದ್ದು ಬಿಟ್ಟರೆ ಹೊಸ ರಾಜಕೀಯ ನಿರ್ಧಾರದ ಬಗ್ಗೆ ಉಭಯ ನಾಯಕರು ಬಾಯಿ ಬಿಡಲಿಲ್ಲ, ಎಲ್ಲವನ್ನೂ ಹೈಕಮಾಂಡ್ ಕಡೆ ಬೆರಳು ಮಾಡಿ ಗೊಂದಲಕ್ಕೆ ಅಲ್ಪ ವಿರಾಮ ಇಟ್ಟಿದ್ದಾರೆ.

ರಾಜ್ಯ ಕಾಂಗ್ರೆಸ್ ನಲ್ಲಿನ ಬಣ ರಾಜಕೀಯ,ಅಧಿಕಾರ ಹಸ್ತಾಂತರ ಗೊಂದಲಕ್ಕೆ ತೆರೆ ಎಳೆಯಲು ಹೈಕಮಾಂಡ್ ನೇರವಾಗಿ ರಂಗಪ್ರವೇಶ ಮಾಡುವ ಬದಲು ಇಬ್ಬರು ಕುಳಿತು ಮಾತುಕತೆ ನಡೆಸಿ ಎನ್ನುವ ಸಂದೇಶವನ್ನು ಕಳಿಸಿಕೊಟ್ಟಿದೆ ಅದರಂತೆ ಮೊದಲು ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕರೆಸಿಕೊಂಡು ಮೊದಲ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದರು. ಇಂದು ಅದರ ಮುಂದುವರೆದ ಭಾಗವಾಗಿ ಡಿಕೆ ಶಿವಕುಮಾರ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದರು. ಮೊದಲ ಮೀಟಿಂಗ್ ವೆಜ್, ಎರಡನೇ ಮೀಟಿಂಗ್ ನಾನ್ ವೆಜ್ ಅನ್ನೋದು ಬಿಟ್ಟರೆ ಉಳಿದಂತೆ ರಾಜಕೀಯ ಗೊಂದಲ ಕುರಿತ ನಿರ್ಧಾರದಲ್ಲಿ ಯಾವ ಬದಲಾವಣೆಯೂ ಇಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ದ, ರಾಹುಲ್ ಗಾಂಧಿ ಹೇಳಿದಂತೆ ಇಬ್ಬರೂ ಕೇಳುತ್ತೇವೆ ಎನ್ನುವ ಮೊದಲ ಸಭೆಯ ನಿರ್ಧಾರವನ್ನೇ ಇಲ್ಲಿಯೂ ನೀಡಿದ್ದಾರೆ.

ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿದ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ,ಹೈ ಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದಾಗಿ ಮೊನ್ನೆ ಹಾಗೂ ಇಂದೂ ಕೂಡ ಚರ್ಚಿಸಲಾಗಿದೆ ಎಂದರು. ಆ ಮೂಲಕ ಮೊದಲ ಬ್ರೇಕ್ ಫಾಸ್ಟ್ ಮೀಟಿಂಗ್ ನ ನಿರ್ಧಾರವನ್ನೇ ಮರು ಪ್ರಕಟಿಸಿದರು. ನಾನು ಹಾಗೂ ಉಪಮುಖ್ಯಮಂತ್ರಿಗಳು ಸಹೋದರರಿದ್ದಂತೆ, ಒಂದೇ ಪಕ್ಷದಲ್ಲಿದ್ದು,  ಒಂದೇ ಸಿದ್ಧಾಂತ ನಂಬಿಕೊಂಡಿದ್ದೇವೆ. 2028 ರ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಕೂಡ ಒಗ್ಗಟ್ಟು, ಒಟ್ಟಾಗಿ ಚುನಾವಣೆ ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ,ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಎಲ್ಲ ಗೊಂದಲಗಳನ್ನೂ ಹೈಕಮಾಂಡ್ ಹೆಸರಿನಲ್ಲಿ ಹಾಗೆಯೇ ಉಳಿಸಿಕೊಂಡರು.

ಸಿದ್ದರಾಮಯ್ಯ ಮಾಸ್ ಲೀಡರ್,‌ಅಹಿಂದ ನಾಯಕ, ಮುಂದಿನ ಚುನಾವಣಾ ದೃಷ್ಟಿಯಿಂದ ಸಿದ್ದರಾಮಯ್ಯ ವಿರೋಧ ಕಟ್ಟಿಕೊಳ್ಳುವಂತಿಲ್ಲ, ಡಿಕೆ ಶಿವಕುಮಾರ್ ಪಕ್ಷ ಕಷ್ಟದಲ್ಲಿದ್ದಾಗೆಲ್ಲಾ ಹೈಕಮಾಂಡ್ ಗೆ ಹೆಗಲು ಕೊಡುವ ರಾಜಕಾರಣಿ, ಅವರನ್ನೂ ನಿರಾಶರಾಗಿಸುವಂತಿಲ್ಲ ಹೀಗಾಗಿ ಹೈಕಮಾಂಡ್ ನಾಯಕರು ಯಾರ ಪರವೂ ನಿಲ್ಲಲು ಸಾಧ್ಯವಾಗದೆ ನೀವೇ ಮಾತುಕತೆ ನಡೆಸಿ ಎಂದರು ಆದರೆ ಉಭಯ ನಾಯಕರು ಹೈಕಮಾಂಡ್ ಹೇಳಿದ್ದನ್ನು ಪಾಲಿಸಿ ಸಭೆ ನಡೆಸಿದರು ಆದರೆ ನಿರ್ಧಾರವನ್ನು ಮತ್ತೆ ಹೈಕಮಾಂಡ್ ಗೆ ಬಿಟ್ಟಿದ್ದಾರೆ ಹಾಗಾಗಿ ಎರಡೂ ಸಭೆಯ ಔಟ್ ಪುಟ್ ಹೈಕಮಾಂಡ್ ಅಂಗಳವಾಗಿದೆ.

Related Articles

Comments (0)

Leave a Comment