ತಪ್ಪು ಗ್ರಹಿಕೆ ಬೇಡವೆಂದು ಸಿಎಂ ಪೋಸ್ಟ್ ಡಿಲೀಟ್; ರಾಮಲಿಂಗಾರೆಡ್ಡಿ ಸ್ಪಷ್ಟನೆ
- by Suddi Team
- October 18, 2025
- 8 Views

ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ಟಿಸಿ)ಕ್ಕೆ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವತಿಯಿಂದ ಎರಡು ಪ್ರಶಸ್ತಿಗಳನ್ನು ನೀಡಿರುವ ಕುರಿತು ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿತ್ತು ಆದರೆ ಆ ಪೋಸ್ಟ್ ನ ಅಡಿ ಸಾರ್ವಜನಿಕ ಟಿಪ್ಪಣಿಯನ್ನು (ಕಮ್ಯೂನಿಟಿ ನೋಟ್) ಸೇರಿಸಲಾಗಿತ್ತು. ಇದು ಹೆಚ್ಚಿನ ತಪ್ಪು ಗ್ರಹಿಕೆಗೆ ಎಡೆಮಾಡಿಕೊಡಬಾರದು ಎಂಬ ಕಾರಣಕ್ಕೆ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟೀಕರಣ ನೀಡಿದ್ದಾರೆ.
1997ರಿಂದ ಇಂದಿನವರೆಗೆ ಕೆಎಸ್ಆರ್ಟಿಸಿಯು ತನ್ನ ಕಾರ್ಯಕ್ಷಮತೆಗೆ 464 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ವೀಕರಿಸಿದೆ. ಮತ್ತು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಅತಿಹೆಚ್ಚು ಉಚಿತ ಟಿಕೆಟ್ ವಿತರಿಸುವ ಮೂಲಕ ಕರ್ನಾಟಕವು ಉನ್ನತ ಸಾಧನೆಯನ್ನು ತೋರಿದೆ ಎನ್ನುವ ಉಲ್ಲೇಖದ ಮೂಲಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಾರಿಗೆ ಸಚಿವರು ಸಿಎಂ ಪೋಸ್ಟ್ ನ ಉದ್ದೇಶವು ಆಡಳಿತದಲ್ಲಿನ ಪ್ರಗತಿಗೆ ಮತ್ತು ಸಕ್ಷಮ ಸಾರ್ವಜನಿಕ ಸೇವೆಗೆ ಸಿಕ್ಕಿದ ಮಾನ್ಯತೆಯನ್ನು ಸಂಭ್ರಮಿಸುವುದಾಗಿತ್ತು. ಆದರೆ ದುರದೃಷ್ಟವಶಾತ್ ಪ್ರಶಸ್ತಿಯನ್ನು ನೀಡಿದ ಸಂಸ್ಥೆಯ ಇರುವಿಕೆಯ ಬಗ್ಗೆ ಕೆಲವರು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಇದರಿಂದ ‘ಎಕ್ಸ್’ ಖಾತೆಯ ಆ ಪೋಸ್ಟ್ ನ ಅಡಿ ಸಾರ್ವಜನಿಕ ಟಿಪ್ಪಣಿಯನ್ನು (ಕಮ್ಯೂನಿಟಿ ನೋಟ್) ಸೇರಿಸಲಾಗಿತ್ತು. ಇದು ಹೆಚ್ಚಿನ ತಪ್ಪು ಗ್ರಹಿಕೆಗೆ ಎಡೆಮಾಡಿಕೊಡಬಾರದು ಎಂಬ ಕಾರಣಕ್ಕೆ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ ಎಂದಿದ್ದಾರೆ.
ಸ್ಪಷ್ಟನೆ:
ಯಾವುದೇ ಥರ್ಡ್ ಪಾರ್ಟಿ ಮಾನ್ಯತೆ ನೀಡುವಾಗ ಉಲ್ಲೇಖಿಸಿರುವ ನಮ್ಮ ಸಂಸ್ಥೆಯ ಸಾಧನೆಗಳು ವಾಸ್ತವದಿಂದ ಕೂಡಿವೆ ಮತ್ತು ಪರಿಶೀಲಿಸಬಹುದಾಗಿದೆ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.
ಲಂಡನ್ ಬುಕ್ ಆಫ್ ರೆಕಾರ್ಡ್ ಒಂದು ಖಾಸಗಿ ಸಂಸ್ಥೆಯಾಗಿದ್ದು, ಈ ಹಿಂದೆ ದೇಶಾದ್ಯಂತ ಹಲವು ಸಾರ್ವಜನಿಕ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ. ಉದಾಹರಣೆಗೆ ಹಿಂದೆ ಮಹಾರಾಷ್ಟ್ರಾದ ಮುಖ್ಯಮಂತ್ರಿಯಾಗಿದ್ದ ಶ್ರೀ ಏಕನಾಥ್ ಶಿಂಧೆ, ಪುದುಚೇರಿ ಸರ್ಕಾರ ಸೇರಿದಂತೆ ಸಿನಿಮಾ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಹಲವು ಸಾಧಕರನ್ನು ಗುರುತಿಸಿ ಮಾನ್ಯತೆ ನೀಡಿದೆ ಎಂದಿದ್ದಾರೆ.
ದಶಕಗಳಿಂದ ಕೆಎಸ್ಆರ್ಟಿಸಿ ಉತ್ತಮ ಸಾಧನೆಯನ್ನು ತೋರುತ್ತಿದ್ದು, ಶಕ್ತಿ ಯೋಜನೆ ಅನುಷ್ಠಾನದ ಬಳಿಕ ವಿಶ್ವಾದ್ಯಂತ ಗುರುತಿಸಿಕೊಳ್ಳುತ್ತಿದೆ. ಲಕ್ಷಾಂತರ ಮಹಿಳೆಯರು ದಿನನಿತ್ಯ ಉಚಿತವಾಗಿ ಸಂಚರಿಸುವ ಸೌಲಭ್ಯವನ್ನು ನಮ್ಮ ಸರ್ಕಾರ ಒದಗಿಸಿರುವುದರಿಂದ ಮಹಿಳೆಯ ಸ್ವಾವಲಂಬಿ ಬದುಕು ಸಾಕಾರಗೊಳ್ಳುತ್ತಿದೆ. ಇದು ಕರ್ನಾಟಕಕ್ಕೆ ಹೆಮ್ಮೆಯನ್ನು ತಂದುಕೊಟ್ಟಿರುವ ಸಾಧನೆಯಾಗಿದೆ. ಈಗಾಗಲೇ ಸಾಕಷ್ಟು ರಾಷ್ಟ್ರಮಟ್ಟದ ಸಂಸ್ಥೆಗಳು, ತಜ್ಞರು ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ ಎಂದು ಸಂಸ್ಥೆಯ ಸಾಧನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಎಲ್ಲ ಸಾಧನೆಗಳು ಕ್ಷುಲಕ ವಿಚಾರಕ್ಕೆ ಕಡೆಗಣನೆಗೆ ಒಳಪಡದಿರಲಿ ಎಂಬ ಸದುದ್ದೇಶದಿಂದ ಆ ಪೋಸ್ಟ್ ಅನ್ನು ಹಿಂಪಡೆಯಲಾಗಿದೆ. ಕರ್ನಾಟಕದ ಪ್ರಗತಿಯ ಮಾದರಿಯು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಗುರುತಿಸಲ್ಪಡುತ್ತಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಫಿಲೆಮನ್ ಯಾಂಗ್ ಅವರು ಶಕ್ತಿ ಸೇರಿದಂತೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಹೊಗಳಿದ್ದರು. ಲಿಂಗ ಸಮಾನತೆ ಮತ್ತು ಎಲ್ಲರನ್ನೂ ಒಳಗೊಂಡ ಸಾರ್ವಜನಿಕ ಸೇವೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕರ್ನಾಟಕದ ಕಲ್ಯಾಣ ಯೋಜನೆಗಳ ಅದ್ಭುತ ಯಶಸ್ಸನ್ನು ಅಥವಾ ಕೆಎಸ್ಆರ್ಟಿಸಿಯ ರಾಷ್ಟ್ರೀಯ ನಾಯಕತ್ವವನ್ನು ಸಹಿಸಲಾಗದವರು ಸಣ್ಣಪುಟ್ಟ ತಾಂತ್ರಿಕ ದೋಷಗಳನ್ನೇ ದೊಡ್ಡದು ಮಾಡಲು ಯತ್ನಿಸುತ್ತಿದ್ದಾರೆ ಮತ್ತು ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಾಧನೆಗಳ ವಾಸ್ತವಗಳು ಸ್ಥಿರವಾಗಿವೆ: ಕೆಎಸ್ಆರ್ಟಿಸಿ ಸಂಸ್ಥೆಯು ತನ್ನ ಉತ್ಕೃಷ್ಟ ಸೇವೆಗಾಗಿ 464 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ವೀಕರಿಸಿದೆ. ಶಕ್ತಿ ಯೋಜನೆ ಜಾರಿಯಾದ ದಿನದಿಂದ ಇಂದಿನವರೆಗೆ ರಾಜ್ಯಾದ್ಯಂತ ಮಹಿಳೆಯರು ಸುಮಾರು 500 ಕೋಟಿ ಉಚಿತ ಟಿಕೆಟ್ ಪಡೆದು ಪ್ರಯಾಣದ ನಡೆಸಿದ್ದು, ವಿಶ್ವದಲ್ಲೇ ಅತಿದೊಡ್ಡ ಮಹಿಳಾ ಕಲ್ಯಾಣ ಕಾರ್ಯಕ್ರಮ ಎಂಬ ಶ್ಲಾಘನೆಗೆ ಪಾತ್ರವಾಗಿದೆ ಎಂದಿದ್ದಾರೆ.
ಕರ್ನಾಟಕ ಸರ್ಕಾರವು ಜನಪರ ಕಾರ್ಯಕ್ರಮ ನೀಡುವಲ್ಲಿ, ಸಮಸಮಾಜ ನಿರ್ಮಿಸುವಲ್ಲಿ ಮತ್ತು ನಾವೀನ್ಯತೆಯ ಕಾರ್ಯಕ್ರಮ ರೂಪಿಸುವಲ್ಲಿ ಬದ್ಧವಾಗಿದೆ. ರಾಜಕೀಯ ಪ್ರೇರಿತ ಗದ್ದಲದಿಂದ ವಿಮುಖವಾಗಿದೆ. ನಮ್ಮ ಕೆಲಸವು ವಿರೋಧಿಗಳ ಗದ್ದಲಕ್ಕಿಂತ ಹೆಚ್ಚು ಸದ್ದು ಮಾಡುತ್ತಿದ್ದು, ನಮ್ಮ ಜನಪರ ಆಡಳಿತವನ್ನು ಮತ್ತಷ್ಟು ಪ್ರಖರವಾಗಿ ಮುಂದುವರಿಸುತ್ತೇವೆ ಎಂದು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
Related Articles
Thank you for your comment. It is awaiting moderation.
Comments (0)