ಅಕ್ಟೋಬರ್ 7 ರೊಳಗೆ ಜಾತಿಗಣತಿ ಸಮೀಕ್ಷೆ ಪೂರ್ಣ; ಸಿಎಂ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸಮೀಕ್ಷಾ ಕಾರ್ಯವು ಅಕ್ಟೋಬರ್ 7 ರೊಳಗೆ ಪೂರ್ಣಗೊಳ್ಳುವ ಭರವಸೆಯಿದೆ,ಸಮೀಕ್ಷೆಯ ಪ್ರಗತಿ ನೋಡಿ ದಿನಾಂಕ ವಿಸ್ತರಣೆ ಕುರಿತು ನಿರ್ಧರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಾತಿಸಮೀಕ್ಷೆ ಕಾರ್ಯದ ಪ್ರಗತಿ ಬಗ್ಗೆ ಮಾಹಿತಿ ನೀಡಿದರು, ರಾಜ್ಯದಲ್ಲಿ ಈಗಾಗಲೇ ಸುಮಾರು 80 ಲಕ್ಷ ಮನೆಗಳಿಂದ 3 ಕೋಟಿ ಜನಸಂಖ್ಯೆಯ ಸಮೀಕ್ಷೆ ಪೂರ್ಣಗೊಂಡಿದ್ದು, ಅಕ್ಟೋಬರ್ 7ರೊಳಗೆ ಸಮೀಕ್ಷೆ ಕಾರ್ಯ ಮುಗಿಯುವ ಭರವಸೆಯಿದೆ.  1.80 ಕೋಟಿ ಕುಟುಂಬಗಳ ಸಮೀಕ್ಷೆ ನಡೆಯಬೇಕಿದೆ. ಸಮೀಕ್ಷೆಯ ಪ್ರಗತಿಯನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸಮೀಕ್ಷೆಯಲ್ಲಿ ಜಾತಿವಿವರ- ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ:

ಮತಾಂತರ ಹಾಗೂ ಜಾತಿಒಡೆಯುವ ದೃಷ್ಠಿಯಿಂದ ಸಮೀಕ್ಷೆಯನ್ನು ಸರ್ಕಾರ ಮಾಡುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪ್ರಹ್ಲಾದ್ ಜೋಷಿಯವರು ಕೇಂದ್ರ ಸಚಿವರಾಗಿದ್ದು, ಕೇಂದ್ರ ನಡೆಸಲಿರುವ ಜಾತಿಸಮೀಕ್ಷೆಯ ಉದ್ದೇಶವನ್ನು ತಿಳಿಸಬೇಕು. ಕೇಂದ್ರಸರ್ಕಾರಕ್ಕೆ ಜಾತಿ, ಧರ್ಮ ಒಡೆಯುವ ಉದ್ದೇಶವಿದೆಯೇ? ಕರ್ನಾಟಕದಲ್ಲಿ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಜನರ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುವ ಉದ್ದೇಶವಿದೆ. ಕಾಂತರಾಜು ವರದಿಯಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್, ಎಂಬಿತ್ಯಾದಿ ಜಾತಿಗಳನ್ನು ನಮೂದಿಸಲಾಗಿತ್ತು. ಜನರು ತಮ್ಮ ಜಾತಿಯನ್ನು ಸ್ವಯಂಪ್ರೇರಿತರಾಗಿ ನಮೂದಿಸಿದರೆ ಅದಕ್ಕೆ ಸರ್ಕಾರ ಜವಾಬ್ದಾರವಾಗುವುದಿಲ್ಲ. ಆದರೆ ಆಯೋಗ, ಈ ಜಾತಿಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ. ಆದ್ದರಿಂದ ಜನರು ಸ್ವಯಂಪ್ರೇರಿತವಾಗಿ ಹೇಳುವ ಜಾತಿಯ ಮಾಹಿತಿಯನ್ನು ಆಯೋಗ ಪಡೆಯಲಿದೆ. ಇದರಲ್ಲಿ ಜಾತಿ ಒಡೆಯುವ ಪ್ರಶ್ನೆಯಿಲ್ಲ.  ಜನರನ್ನು ರಾಜಕೀಯ ಉದ್ದೇಶದಿಂದ ದಾರಿತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದರು.

ರಾಜಕಾರಣಕ್ಕಾಗಿ ಆರೋಪ:

ವಿಪಕ್ಷ ನಾಯಕ ಅಶೋಕ್ ರವರು ರೈತರ ಸಮಸ್ಯೆ ಬಗೆಹರಿಸದಿದ್ದರೆ ಸರ್ಕಾರ ಇದ್ದರೂ ಸತ್ತಂತೆಯೇ ಎಂದು ಹೇಳಿಕೆ ನೀಡಿರುವ ಬಗ್ಗೆ ಉತ್ತರಿಸಿ, ಅಶೋಕ್ ಅವರು ವಿಪಕ್ಷದ ನಾಯಕರಾಗಿದ್ದರೂ, ಆರ್ ಎಸ್ ಎಸ್ ನವರ ನಿರ್ದೇಶನದಂತೆ ಮಾತನಾಡುತ್ತಾರೆ. ಅಶೋಕ್ ರವರು ರಾಜಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ ಎಂದರು.

Related Articles

Comments (0)

Leave a Comment