ಗಾಂಧೀಜಿ,ಶಾಸ್ತ್ರೀಜಿ ಆದರ್ಶಗಳನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ; ರಾಮಲಿಂಗಾರೆಡ್ಡಿ
- by Suddi Team
- October 2, 2025
- 288 Views

ಬೆಂಗಳೂರು:ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ಜಗತ್ತಿಗೇ ದಾರಿ ತೋರಿದ ಗಾಂಧೀಜಿಯವರ ಜೀವನ ನಮಗೆಲ್ಲರಿಗೂ ಸ್ಪೂರ್ತಿ. ಅದೇ ರೀತಿ, ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಯೊಂದಿಗೆ ದೇಶದ ಸೈನಿಕರು ಮತ್ತು ರೈತರ ಮಹತ್ವವನ್ನು ಸಾರಿದ ಶಾಸ್ತ್ರೀಜಿಯವರ ಸರಳತೆ, ಪ್ರಾಮಾಣಿಕತೆ ಮತ್ತು ನಾಯಕತ್ವ ಸದಾ ಸ್ಮರಣೀಯ,ಅವರ ಆದರ್ಶಗಳನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸರ್ಕಾರದ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ರವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ವನಿಮಿತ್ತ ಕಾರ್ಯಕ್ರಮಗಳ ಕಾರಣ ಅವರ ಅನುಪಸ್ಥಿತಿಯಲ್ಲಿ, ಸರ್ಕಾರದ ಪರವಾಗಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ವೇಳೆ ಮಾತನಾಡಿದ ಸಚಿವರು,ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೇ ಸದಾ ಶಾಶ್ವತವಾಗಿರುವ ಹೆಸರು ಅಂದರೆ ಅದು ರಾಷ್ಟ್ರಪಿತ ಮಹಾತ್ಮ ಗಾಂಧಿ. ಅಹಿಂಸಾ ಮಾರ್ಗದಲ್ಲಿ ನಡೆದು ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಗಾಂಧೀಜಿ ದೇಶ ಕಂಡ ಮಹಾನ್ ನಾಯಕ.ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಮಹನೀಯರು ಮಹತ್ವದ ಪಾತ್ರವಹಿಸಿದ್ದಾರೆ. ಉದಾ. ಮಹಾರಾಷ್ಟ್ರ ಪ್ರಾಂತ್ಯದಲ್ಲಿ ಗೋಪಾಲಕೃಷ್ಣ ಗೋಖಲೆ ( ಗಾಂಧಿಯವರು ಗುರುಗಳು), ಲಾಲಲಜಪತರಾಯ್ ಪಂಜಾಬ್, ಬಿಪಿನ್ ಚಂದ್ರ ಪಾಲ್ ಬಂಗಾಳ, ಬಾಲಗಂಗಾಧರ ನಾಥ್ ತಿಲಕ್ , ಮೋತಿಲಾಲ್ ನೆಹರು ,ಉತ್ತರಪ್ರದೇಶ, ಇವರೆಲ್ಲರೂ 1930 ರ ಮುಂಚೆಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಪಶ್ಚಿಮ ಬಂಗಾಳದಲ್ಲಿ ಸುಭಾಸ್ ಚಂದ್ರ ಬೋಸ್ , ಗುಜರಾತ್ ನಲ್ಲಿ ಸರದಾರ್ ವಲ್ಲಭಬಾಯಿ ಪಟೇಲ್ ಹೀಗೆ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಬೇರೂರಿದ್ದರೂ ಸಹ, ದೇಶದಲ್ಲಿ ವಿವಿಧತೆಯಲ್ಲಿ ಏಕತೆಗೆ ಕಾರಣರಾಗಿದ್ದು ಮಹಾತ್ಮ ಗಾಂಧೀಜಿ ಅವರು. ದೇಶದ ಮೂಲೆ ಮೂಲೆಯಲ್ಲಿನ ವಿವಿಧ ಧರ್ಮಗಳ, ಜಾತಿಗಳ, ಸಂಸ್ಕೃತಿಗಳ ಜನರನ್ನು ಒಟ್ಟಾಗಿಸಿ ದೇಶಾಭಿಮಾನ ಮೂಡುವಂತೆ ಮಾಡಿ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅಣಿ ಮಾಡಿದರು ಎಂದರು.
ಗ್ರಾಮ ನೈರ್ಮಲ್ಯ ಆರೋಗ್ಯ ಶಿಕ್ಷಣ , ನೀರು,ವಿದ್ಯುತ್ , ರಸ್ತೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಬೇಕು ಗ್ರಾಮಸ್ವರಾಜ್ಯದ ಗಾಂಧೀಜಿ ಕನಸಾಗಿತ್ತು. ಸಮಾಜದ ದುರ್ಬಲವರ್ಗದವರಿಗೆ ಶಕ್ತಿ ತುಂಬಿದಾಗ ಮಾತ್ರ ಸಮಾಜ ಅಭಿವೃದ್ಧಿ ಸಾಧ್ಯ ಎಂಬುದು ಗಾಂಧೀಜಿಯವರ ತತ್ವವಾಗಿತ್ತು.ಗಾಂದೀಜಿಯವರ ಹಾದಿಯಲ್ಲಿ ನಡೆದು ನಮ್ಮ ಸರ್ಕಾರ, ಆರ್ಥಿಕವಾಗಿ ದುರ್ಬಲರಿರುವ ಜನತೆಗೆ ಗ್ಯಾರಂಟಿ ಯೋಜನೆಗಳ ಮೂಲಕ ಶಕ್ತಿಯನ್ನು ತುಂಬುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಹೆಮ್ಮೆ ನಮ್ಮ ಸರ್ಕಾರಕ್ಕಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳು, ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾಗಿದ್ದು, ರಾಜ್ಯಾದ್ಯಂತ ಅಪಾರ ಜನಮನ್ನಣೆಯನ್ನು ಗಳಿಸಿದೆ ಎಂದರು.
ಅದೇ ರೀತಿ, ದೇಶ ಕಂಡ ಮತ್ತೊಬ್ಬ ಅತ್ಯಂತ ಪ್ರಾಮಾಣಿಕ, ಸರಳ, ಸಜ್ಜನ, ಸಮರ್ಪಣೆಗೆ ಹೆಸರಾದವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರು. ಜೈ ಜವಾನ್ – ಜೈ ಕಿಸಾನ್ ಎಂಬ ಘೋಷವಾಕ್ಯವನ್ನು ದೇಶಕ್ಕೆ ನೀಡಿ,ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯು ಆರ್ಥಿಕ ಅವಶ್ಯಕತೆ ಮಾತ್ರವಲ್ಲದೆ, ಸಂಘರ್ಷದ ಸಮಯದಲ್ಲಿ ಕಾರ್ಯತಂತ್ರದ ಅಡಿಪಾಯ, ಭಾರತಕ್ಕೆ ಸ್ಥಿರವಾದ ಆಹಾರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರೈತರು ಅವಿಶ್ರಾಂತವಾಗಿ ಕೆಲಸ ಮಾಡುವಂತೆ ಈ ಘೋಷಣೆ ಪ್ರೋತ್ಸಾಹಿಸಿತು.ಆದರೆ ಹೊಸ ಪೀಳಿಗೆಯು ಈ ಮಹಾತ್ಮರುಗಳನ್ನು ಓದದೆ, ತಿಳಿದುಕೊಳ್ಳದೆ, ಅವರ ಮೌಲ್ಯಗಳನ್ನು ವಿರೋಧಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿರುವುದು ವಿಷಾದನೀಯ ಎಂದರು.
ಗಾಂಧೀಜಿಯವರ ಸರಳತೆ, ಸತ್ಯಪರತೆ ಹೋರಾಟದ ಬದುಕು ನಮ್ಮಗೆಲ್ಲರಿಗೂ ಸ್ಪೂರ್ತಿಯಾಗಲಿ. ಶಾಸ್ತ್ರೀಜಿಯವರ ಸಮರ್ಪಣೆ ನಮಗೆ ಮಾದರಿಯಾಗಲಿ.ಗಾಂಧೀಜಿಯವರ ರಾಮರಾಜ್ಯದ ಕಲ್ಪನೆಗೆ ಶಕ್ತಿ ತುಂಬುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ ಸಚಿವರು ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ರವರ ಜಯಂತಿಗೆ ಶುಭಾಶಯ ಕೋರಿದರು.
ಈ ಕಾರ್ಯಕ್ರಮದಲ್ಲಿ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪಕಾರ್ಯದರ್ಶಿ ಮತ್ತಿತ್ತರು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.
Comments (0)