ಸಮೀಕ್ಷೆ ಹೆಸರಲ್ಲಿ ಹಿಂದೂ ಸಮಾಜ ಒಡೆಯಲು ಹೊರಟಿದ್ದಾರೆ: ವಿಜಯೇಂದ್ರ
- by Suddi Team
- September 30, 2025
- 30 Views

ಕಲಬುರಗಿ: ರಾಜ್ಯ ಸರಕಾರವು ಜಾತಿ ಜನಗಣತಿ ನೆಪದಲ್ಲಿ ಪಗಡೆಯಾಟ ಮಾಡಲು ಹೊರಟಿದೆ. ಹಿಂದೂ ಸಮಾಜ ಒಡೆಯಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆ ನಡೆಸಲು ರಾಜ್ಯ ಸರಕಾರಕ್ಕೆ ಅಧಿಕಾರ ಇದೆಯೋ ಇಲ್ಲವೋ; ನಾವು ಜಾತಿ ಜನಗಣತಿಯನ್ನು ವಿರೋಧಿಸುತ್ತಿಲ್ಲ. ಸಿಎಂ ಇಚ್ಛಾಶಕ್ತಿ ಬಗ್ಗೆ ಗೊಂದಲ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ ಜನಗಣತಿ ಮಾಡಲು ಹೊರಟಿದ್ದಾರಾ ಅಥವಾ ಪ್ರಾಮಾಣಿಕವಾಗಿ ಹಿಂದುಳಿದ, ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡಲೆಂದು ಇದನ್ನು ಮಾಡುತ್ತಿದ್ದಾರಾ? ಅವರಲ್ಲಿ ಪ್ರಾಮಾಣಿಕ ಕಳಕಳಿ ಕಾಣುತ್ತಿಲ್ಲ; ಜನರಲ್ಲೂ ಅನುಮಾನ ಹುಟ್ಟುಹಾಕಿದ್ದಾರೆ ಎಂದು ಆಕ್ಷೇಪಿಸಿದರು.
ಶೋಷಿತ- ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ನ್ಯಾಯ ಕೊಡಬೇಕೆಂಬ ಬದ್ಧತೆ ಬಿಜೆಪಿಗೆ ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಬಿಜೆಪಿ ಅಲ್ಲ ಎಂದು ತಿಳಸಿದರು. ಸಿದ್ದರಾಮಯ್ಯನವರ ಮನಸ್ಥಿತಿಗೆ ನಮ್ಮ ವಿರೋಧ ಇದೆ.
ಹೈಕೋರ್ಟ್ ಏನು ಆದೇಶ ಮಾಡಿದೆ? ಯಾಕೆ ಕೆಲಸಕ್ಕೆ ಬಾರದ ಪ್ರಶ್ನೆಗಳನ್ನು ಇಟ್ಟುಕೊಂಡಿದ್ದಾರೆ? 60ಕ್ಕೂ ಹೆಚ್ಚು ಪ್ರಶ್ನೆಗಳಿದ್ದು, ಇದರಲ್ಲಿ ಎಲ್ಲವೂ ಕಡ್ಡಾಯವಲ್ಲ ಎಂದು ರಾಜ್ಯ ಹೈಕೋರ್ಟ್ ತಿಳಿಸಿದೆ ಎಂದು ಗಮನ ಸೆಳೆದರು.
ಮುಖ್ಯಮಂತ್ರಿಗಳು ನಿನ್ನೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕೇಂದ್ರ ಸರಕಾರದ ಜಾತಿ ಸಮೀಕ್ಷೆಯನ್ನೂ ವಿರೋಧಿಸುತ್ತೀರಾ ಎಂದು ಕೇಳಿದ್ದಾರೆ. ಕಾಂತರಾಜು ವರದಿಗೆ 180 ಕೋಟಿ ಖರ್ಚು ಮಾಡಿದ್ದೀರಲ್ಲವೇ? ನೀವೇ ಮುಖ್ಯಮಂತ್ರಿ ಇದ್ದರೂ ಅದನ್ನು ಅನುಷ್ಠಾನ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದರು.
ಇವತ್ತು 500- 600 ಕೋಟಿ ಖರ್ಚು ಮಾಡಿ ಸಮೀಕ್ಷೆ ಮಾಡುವುದನ್ನು ಬಿಜೆಪಿ ವಿರೋಧಿಸಲು ಹೊರಟಿಲ್ಲ. ಸ್ವಾತಂತ್ರ್ಯಾನಂತರದಲ್ಲಿ ಹಿಂದಿನ ಕಾಂಗ್ರೆಸ್, ಯುಪಿಎ ಸರಕಾರವು ಜಾತಿ ಗಣತಿ ಕುರಿತು ಇಂಥ ದಿಟ್ಟ ನಿರ್ಧಾರ ಮಾಡಿರಲಿಲ್ಲ. ಮನಮೋಹನ್ ಸಿಂಗ್ ಅವರ ಸರಕಾರ ತೀರ್ಮಾನ ಮಾಡಿದರೂ ರಾಹುಲ್ ಗಾಂದಿಯವರು ಅದನ್ನು ವಿರೋಧಿಸಿದ್ದರು ಎಂದರು.
ರೈತರೊಬ್ಬರು ಬೆಳೆ ನಾಶವಾಗಿದೆ. ತೊಗರಿ ಬೆಳೆ ನಾಶವಾಗಿದೆ. 4 ಎಕರೆಗೆ ಪರಿಹಾರ ಕೊಡಿಸಿ ಎಂದು ಕೇಳಿದರೆ, ನನ್ನದೇ 40 ಎಕರೆ ಇದೆ; ನನ್ನ ಬೆಳೆಯೂ ಸಂಪೂರ್ಣ ನಾಶವಾಗಿದೆ. ಪರಿಹಾರ ಬಂದಿಲ್ಲ ಎಂಬ ಮಾತು ಮಲ್ಲಿಕಾರ್ಜುನ ಖರ್ಗೆಯವರದು.ಮೊದಲು ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬಕ್ಕೆ ಪರಿಹಾರ ಕೊಡಿ. ಜೊತೆಗೇ ರೈತರ ಸಂಕಷ್ಟಕ್ಕೂ ಸ್ಪಂದಿಸಿ ಎಂದು ಸರ್ಕಾರದ ಕಾಲೆಳೆದರು.
ಒಣಭೂಮಿಗೆ ಎನ್ಡಿಆರ್ಎಫ್ ನಿಯಮದಡಿ ಹೆಕ್ಟೇರ್ಗೆ 6 ಸಾವಿರ ರೂ. ಪರಿಹಾರ ಇತ್ತು. ಆದರೆ, ಮುಖ್ಯಮಂತ್ರಿಗಳಾಗಿದ್ದ ರೈತನಾಯಕ ಯಡಿಯೂರಪ್ಪ ಅವರು ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ಪ್ರವಾಹಪೀಡಿತರಿಗೆ ರಾಜ್ಯದಿಂದ ಎನ್ಡಿಆರ್ಎಫ್ ಮಾದರಿಯ ನೆರವು ನೀಡಿದ್ದರು. ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪ ಮಾಡುತ್ತಿಲ್ಲ; ಆ ಕಾಳಜಿ ವ್ಯಕ್ತವಾಗಲಿ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಸಂದಿಗ್ಧ ಪರಿಸ್ಥಿತಿಯಲ್ಲಿರುವ ರೈತರ ಬಗ್ಗೆ ಈಗ ನೀವು ಕಾಳಜಿ ತೋರಿಸದೇ ಇದ್ದರೆ ಇನ್ಯಾವಾಗ ಕಾಳಜಿ ತೋರಿಸುತ್ತೀರಿ ಎಂದು ಪ್ರಶ್ನಿಸಿದರು. ಎಕರೆಗೆ 25ರಿಂದ 30 ಸಾವಿರ ರೂ. ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.
Related Articles
Thank you for your comment. It is awaiting moderation.
Comments (0)