ರಾಜ್ಯದಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿ: ಹೆಚ್ಚುವರಿ ಪ್ಯಾಕೇಜ್  ಘೋಷಿಸಿದ ಸಿಎಂ ಸಿದ್ದರಾಮಯ್ಯ

ಕಲಬುರಗಿ:ಎನ್ಡಿಆರ್ಎಫ್(NDRF) ಹಣದ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತೀ ಹೆಕ್ಟೇರ್ ಗೆ 8500 ರೂ ಪರಿಹಾರ ಕೊಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಕಲಬುರಗಿ, ವಿಜಯಪುರ,ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ,ಎನ್ಡಿಆರ್ಎಫ್ (NDRF) ನಿಯಮದ ಪ್ರಕಾರ ಕುಷ್ಕಿ ಜಮೀನಿಗೆ ಹೆಕ್ಟೇರ್ ಗೆ 8500ರೂ, ನೀರಾವರಿ ಜಮೀನಿಗೆ ಹೆಕ್ಟೇರ್ ಗೆ 17 ಸಾವಿರ, ಬಹು ವಾರ್ಷಿಕ ಬೆಳೆಗೆ 22,500 ರೂ ಇದೆ. ಈ ಹಣವನ್ನು ಸಮೀಕ್ಷೆ ಮುಗಿದ ತಕ್ಷಣ ಬಿಡುಗಡೆ ಮಾಡಲಾಗುತ್ತದೆ.ಇದರ ಜತೆ ರಾಜ್ಯ ಸರ್ಕಾರವೂ ವಿಶೇಷ ಪ್ಯಾಕೇಜ್ ರೂಪದಲ್ಲಿ ಪ್ರತೀ ಹೆಕ್ಟೇರ್ ಗೆ 8500 ರೂ ಪರಿಹಾರ ಕೊಡಲಿದೆ ಇದರಿಂದಾಗಿ ಕುಷ್ಕಿ ಜಮೀನಿಗೆ ಹೆಕ್ಟೇರ್ ಗೆ 8500ರೂ+8500 ರೂ ಸೇರಿ ಒಟ್ಟು 17000 ಆಗಲಿದೆ.ನೀರಾವರಿ ಜಮೀನಿಗೆ 17000+8500 ಸೇರಿ ಒಟ್ಟು 25500 ರೂ ಆಗಲಿದೆ. ಬಹುವಾರ್ಷಿಕ ಬೆಳೆಗೆ ಹೆಕ್ಟೇರ್ ಗೆ 22500+8500 ಸೇರಿ ಒಟ್ಟು 31000 ಸಾವಿರ ರೂಪಾಯಿ ಆಗಲಿದೆ.ಎನ್ಡೊಆರ್ಎಫ್ + ರಾಜ್ಯ ಸರ್ಕಾರದ ಪ್ಯಾಕೇಜ್ ಸೇರಿ 2000-2500 ಕ್ಕೂ ಹೆಚ್ಚು ಕೋಟಿ ಹಣ ಪರಿಹಾರ ಕೊಡ್ತಾ ಇದ್ದೇವೆ ಎಂದರು.

ನಾಲ್ಕು ಜಿಲ್ಲೆಗಳಲ್ಲಿ 117 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. 80 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.ಕೃಷ್ಣ ನದಿಯಿಂದ ಅಪಾರ ಪ್ರಮಾಣದ ನೀರು ಬಿಟ್ಟಿರುವುದು ಹಾಗೂ ನಾಲ್ಕೂ ಜಿಲ್ಲೆಗಳಲ್ಲಿ ಆಗಸ್ಟ್-ಸೆಪ್ಟೆಂಬರ್ ನಲ್ಲಿ ವಿಪರೀತ ಮಳೆ ಆಗಿರುವುದೂ ಸೇರಿ ಅನಾಹುತ ಮತ್ತು ಸಂಕಷ್ಟದ ಪ್ರಮಾಣದ ಹೆಚ್ಚಾಗಿದೆ. ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿರುವ ಅಂದಾಜಿದೆ. ಈ ಪ್ರಮಾಣ ಇನ್ನೂ ಹೆಚ್ಚು ಆಗಬಹುದು. ಜಂಟಿ ಸಮೀಕ್ಷೆ ಪೂರ್ಣ ಆದ ಬಳಿಕ ಸ್ಪಷ್ಟವಾಗಿ ಗೊತ್ತಾಗುತ್ತದೆ. ಸದ್ಯ 5 ಲಕ್ಷ ಹೆಕ್ಟೇರ್ ನಲ್ಲಿ ಮಾತ್ರ ಜಂಟಿ ಸಮೀಕ್ಷೆ ಮುಗಿದಿದೆ. ಸಮೀಕ್ಷೆ ಪೂರ್ಣಗೊಂಡ ತಕ್ಷಣ ಹಣ ಅವರ ಖಾತೆಗಳಿಗೆ ಹಣ ಹೋಗುತ್ತದೆ. ವಿಜಯಪುರ, ಬಾಗಲಕೋಟೆ, ಯಾದಗಿರಿ, ಬೀದರ್, ರಾಯಚೂರು, ಗದಗ್, ಕಲಬುರಗಿ, ಧಾರವಾಡ ಸೇರಿ 8 ಜಿಲ್ಲೆಗಳಲ್ಲಿ ಶೇ95 ರಷ್ಟು ಬೆಳೆ ಹಾನಿ ಆಗಿದೆ ಎಂದರು.

ಕಳೆದ ವರ್ಷ ಶೇ22 ರಷ್ಟು ಮಳೆ ಹೆಚ್ಚಾಗಿದೆ. ಈ ವರ್ಷ ಶೇ26 ರಷ್ಟು ಹೆಚ್ವು ಮಳೆ ಬಿದ್ದು ವಾಡಿಕೆಗಿಂತ ವಿಪರೀತ ಹೆಚ್ಚಿನ ಮಳೆ ಬಿದ್ದಿದೆ, ಅಗತ್ಯ ಇರುವ ಕಡೆ ತಾತ್ಕಾಲಿಕ, ಶಾಶ್ವತ ತಡೆಗೋಡೆ ಕಟ್ಟಿಸಿ ಅನಾಹುತದ ಪ್ರಮಾಣ ತಪ್ಪಿಸಲು ಸೂಚಿಸಲಾಗಿದೆ, ಪ್ರವಾಹ ಪೀಡಿತ ಗ್ರಾಮಗಳ ಶಾಲೆಗಳ ಕಟ್ಟಡಗಳ ಸಾಮರ್ಥ್ಯ (fitness) ಪರೀಕ್ಷಿಸುವುದನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿಗಳು ಗಮನಿಸಬೇಕು‌. ಫಿಟ್ನೆಸ್ ಇಲ್ಲದಿದ್ದರೆ ಶಾಲೆಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದನ್ನು ಕಡ್ಡಾಯವಾಗಿ ಮಾಡಬೇಕು. ಇದರಲ್ಲಿ ನಿರ್ಲಕ್ಷ್ಯ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.

ರಕ್ಷಣೆ ಮತ್ತು ಪರಿಹಾರದ ಹಣಕ್ಕೆ ಕೊರತೆ ಇಲ್ಲ. ಪಿಡಿ ಖಾತೆಯಲ್ಲಿ ಹಣ ಸಂಗ್ರಹ ಇದೆ. ತುರ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ನಿರಂತರವಾಗಿ ನಡೆಸಲಾಗುತ್ತಿದೆ, ಪ್ರವಾಹದಿಂದ ಕೃಷಿ ಭೂಮಿಯ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿರುತ್ತದೆ. ಇದರಿಂದ ಪರಿಹಾರ ಕೊಟ್ಟರೂ ಬೆಳೆ ಬೆಳೆಯುವುದು ಕಷ್ಟ.  ಹೀಗಾಗಿ ಕೆರೆಗಳಲ್ಲಿರುವ ಫಲವತ್ತಾದ ಹೂಳನ್ನು ತೆಗೆದು ಫಲವತ್ತತೆ ಕಳೆದುಕೊಂಡ ಕೃಷಿ ಭೂಮಿಗೆ ಹಾಕಲು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡುವ ಬಗ್ಗೆ ಚರ್ಚಿಸಲಾಯಿತು. ಎಂದರು.

ಪ್ರವಾಹ ಪೀಡಿಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಧ್ಯಂತರ ಅವಧಿಗೆ “ಪ್ರಕೃತಿ ವಿಕೋಪದಿಂದ ಆದ ಹಾನಿ” ಎಂದು ಅಧಿಸೂಚನೆ ಹೊರಡಿಸುವಂತೆ ಸೂಚಿಸಲಾಯಿತು. ಕೆಲವು ಜಿಲ್ಲಾಧಿಕಾರಿಗಳು ಮಾತ್ರ ಹೊರಡಿಸಿದ್ದು ಉಳಿದವರೂ ಹೊರಡಿಸಿ ಎಂದು ಸಿಎಂ ಸೂಚಿಸಿದರು.

ಕೃಷಿ ವಿಮೆ ಸಮರ್ಪಕವಾಗಿ ಒದಗಿಸುವಂತೆ ವಿಮಾ ಕಂಪನಿಗಳಿಗೆ ಖಡಕ್ ಸೂಚನೆ ನೀಡಬೇಕು ಎಂದ ಸಿಎಂ, ಜಿಲ್ಲಾಧಿಕಾರಿಗಳು ಬ್ಯಾಂಕರ್ ಗಳ ಜೊತೆಗೆ ಚರ್ಚಿಸಬೇಕು. ಸಂತ್ರಸ್ಥ ರೈತರ ನೆರವಿಗೆ ಧಾವಿಸುವಂತೆ,

ಗ್ರಾಮೀಣ ನೀರು ಸರಬರಾಜು ವ್ಯವಸ್ಥೆ ಪರೀಕ್ಷಿಸಬೇಕು. ಅಂತರ್ಜಲ ಕಲುಷಿತಗೊಳ್ಳುವ ಅಪಾಯ ಇರುವುದರಿಂದ ನೀರಿನ ಸ್ಯಾಂಪಲ್ ಗಳನ್ನು ಪರೀಕ್ಷಿಸುವುದನ್ನು ಅಭಿಯಾನದ ರೂಪದಲ್ಲಿ ನಡೆಸುವಂತೆ,ಸಾಂಕ್ರಾಮಿಕ ರೋಗಗಳು ಹೆಚ್ಚುವ ಅಪಾಯವಿದ್ದು ಆರೋಗ್ಯ ರಕ್ಷಣೆಗೆ ಗಮನ ಹರಿಸಿ. ಶಾಲಾ ಮಕ್ಕಳ ಹಾಸ್ಟೆಲ್ ಗಳಲ್ಲಿ ಆರೋಗ್ಯ ತಪಾಸಣೆ ಕಡ್ಡಾಯವಾಗಿ ನಡೆಸುವಂತೆ,ಮಳೆಯಲ್ಲಿ ದಾಖಲೆಗಳು, ಗುರುತಿನ ಚೀಟಿ ಕೊಚ್ಚಿ ಹೋಗಿರುವ , ಹಾಳಾಗಿರುವುದು ವರದಿಯಾಗಿದೆ. ಆ ಜನರು ಆತಂಕ ಪಡುವ ಅಗತ್ಯ ಇಲ್ಲದಂತೆ ಅಭಿಯಾನದ ರೂಪದಲ್ಲಿ ಹೊಸ ಗುರುತಿನ ಚೀಟಿ, ದಾಖಲೆಗಳು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಂಟಿ ಸಮೀಕ್ಷೆ ಅತ್ಯಂತ ಸಮರ್ಪಕ ಮತ್ತು ವೈಜ್ಞಾನಿಕವಾಗಿರುವಂತೆ ಎಚ್ಚರ ವಹಿಸಬೇಕು,ಹವಾಮಾನ ಬದಲಾವಣೆಯ ತೀವ್ರ ಪರಿಣಾಮವನ್ನು ರಾಜ್ಯ ಎದುರಿಸುತ್ತಿದೆ. ಒಟ್ಟು ಎಂಟು ಜಿಲ್ಲೆಗಳಲ್ಲಿ ಇದರ ಪರಿಣಾಮ ಮತ್ತು ಅನಾಹುತಗಳು ಆಗಿವೆ.ರಾಜ್ಯದಲ್ಲಿ   ಜೂನ್ 1 ರಿಂದ  ಸೆಪ್ಟೆಂಬರ್ 29ರ ವರೆಗೆ  ಸರಾಸರಿಯಂತೆ 845 ಮಿಮೀ ಮಳೆಯಾಗಬೇಕಾಗಿತ್ತು. ಆದರೆ 879 ಮಿಮೀ ಮಳೆಯಾಗಿದೆ. ವಾಡಿಕೆಗಿಂತ ಶೇ.4 ರಷ್ಟು ಹೆಚ್ಚಿನ ಮಳೆಯಾಗಿದೆ. ಕಳೆದ ವರ್ಷ  ಇದೇ ಅವಧಿಯವರೆಗೆ 972  ಮಿಮೀ ಮಳೆಯಾಗಿತ್ತು. ಶೇ. 22 ರಷ್ಟು ಹೆಚ್ಚಿನ ಮಳೆಯಾಗಿತ್ತು.

ಆದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ವರ್ಷ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಮಳೆಯಾಗಿದೆ.  ಉತ್ತರ  ಒಳನಾಡಿನಲ್ಲಿ  ಸರಾಸರಿ ಮಳೆಯಾಗಬೇಕಾಗಿದ್ದದ್ದು  472 ಮಿಮೀಗಳು.  ಆದರೆ ಈ  ವರ್ಷ 576  ಮಿಮೀಗಳಷ್ಟು  ಅಂದರೆ  ಶೇ. 22 ರಷ್ಟು ಹೆಚ್ಚಿನ ಮಳೆಯಾಗಿದೆ‌ ಎಂದರು.

ಬೆಳೆ ಹಾನಿ:

ರಾಜ್ಯದಲ್ಲಿ ಪ್ರಾಥಮಿಕ  ಅಂದಾಜಿನ ಪ್ರಕಾರ  ಇದುವರೆಗೆ ಸುಮಾರು 960578 ಹೆಕ್ಟೇರುಗಳಷ್ಟು ಬೆಳೆ ಹಾನಿಯಾಗಿದೆ. ಇದರಲ್ಲಿ 888953 ಹೆಕ್ಟೇರುಗಳಷ್ಟು ಕೃಷಿ ಬೆಳೆಗಳು ಮತ್ತು 71624 ಹೆಕ್ಟೇರುಗಳಷ್ಟು ತೋಟಗಾರಿಕಾ ಬೆಳೆಗಳು ನಷ್ಟವಾಗಿದೆಯೆಂಬುದು ಪ್ರಾಥಮಿಕ  ಅಂದಾಜು ಮಾಡಲಾಗಿದೆ.

ಪೂರ್ಣ ಪ್ರಮಾಣದ ಸಮೀಕ್ಷೆಯ ನಂತರ  ಈ ಪ್ರಮಾಣ ಹೆಚ್ಚೂ ಆಗಬಹುದು, ಇದುವರೆಗಿನ ಮಾಹಿತಿಯ ಪ್ರಕಾರ   ರಾಜ್ಯದಲ್ಲಿ 960578 ಹೆಕ್ಟೇರುಗಳಷ್ಟು ಬೆಳೆ ಹಾನಿಯಾಗಿದ್ದರೆ, ಉತ್ತರ ಕರ್ನಾಟಕದ ಈ 8 ಜಿಲ್ಲೆಗಳಲ್ಲಿಯೇ 903966 ಹೆಕ್ಟೇರುಗಳಷ್ಟು ಬೆಳೆಹಾನಿ ಸಂಭವಿಸಿದೆ. ಶೇ. 95 ರಷ್ಟು ಹಾನಿ ಈ ಜಿಲ್ಲೆಗಳಲ್ಲಿಯೇ ಸಂಭವಿಸಿದೆ. ಕಳೆದ  ಎರಡು ತಿಂಗಳಿಂದ  ನೆಲ  ಒಣಗದಂತೆ ಮಳೆಯಾಗುತ್ತಿದೆ.ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಒಣ ಹವೆಯ ಮೂಲಕ ಬೆಳೆಯುವ  ಬೆಳೆಗಳಾದ ತೊಗರಿ, ಹತ್ತಿ, ಈರುಳ್ಳಿ ಮುಂತಾದ ಬೆಳೆಗಳನ್ನು ನಂಬಿ ರೈತರು ಬದುಕುತ್ತಾರೆ. ನಿರಂತರವಾಗಿ ಮಳೆ ಹಿಡಿದರೆ ಬೆಳೆಗಳು ಕೊಳೆಯಲಾರಂಭಿಸುತ್ತವೆ.  ಈಗೀಗ ಮುಸುಕಿನ ಜೋಳ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಅವುಗಳೂ ಹಾನಿಯಾಗಿವೆ. ಅಧಿಕಾರಿಗಳು ರೈತರ ಭೂಮಿಗಳಿಗೆ ಹೋಗಿ ಸಮೀಕ್ಷೆ ಮಾಡಲಾಗದಷ್ಟು  ತೇವಾಂಶ  ಹೊಲಗಳಲ್ಲಿದೆ,‌ಪ್ರವಾಹದಿಂದಾಗಿ ಕಲ್ಬುರ್ಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ  ಒಟ್ಟಾರೆ 117 ಗ್ರಾಮಗಳು ತೊಂದರೆಗೊಳಗಾಗಿವೆ.  ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ  80 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. (ಕಲ್ಬುರ್ಗಿಯಲ್ಲಿ 56, ವಿಜಯಪುರದಲ್ಲಿ 17, ಯಾದಗಿರಿಯಲ್ಲಿ 7 ). ಕಾಳಜಿ ಕೇಂದ್ರಗಳಲ್ಲಿ 10576 ಜನರಿದ್ದಾರೆ.

ಮಾನವ ಪ್ರಾಣ ಹಾನಿ:

ರಾಜ್ಯದಲ್ಲಿ ಜೂನ್ ಒಂದರಿಂದ ಈ ವರೆಗೆ ಮಳೆ ಹಾನಿಯಿಂದಾಗಿ 52 ಮಂದಿ ಮರಣ ಹೊಂದಿದ್ದಾರೆ. ಸೆಪ್ಟೆಂಬರ್ 28 ರವರೆಗಿನ‌ ಎಲ್ಲಾ ಸಾವುಗಳಿಗೂ ವಾರಸುದಾರರಿಗೆ ಪರಿಹಾರ ನೀಡಲಾಗಿದೆ.(ಗೋಡೆ ಕುಸಿದು 15 ಮಂದಿ, ನೀರಿನಲ್ಲಿ ಮುಳಗಿ ಅಥವಾ ಕೊಚ್ಚಿ ಹೋಗಿ 23 ಮಂದಿ ಮರಣ ಹೊಂದಿದ್ದಾರೆ) ಎಂದು ಮಾಹಿತಿ ನೀಡಿದರು.

ಜಾನುವಾರು ಪ್ರಾಣ ಹಾನಿ:

ರಾಜ್ಯದಲ್ಲಿ ಒಟ್ಟು 422 ಜಾನುವಾರುಗಳು ಮರಣ ಹೊಂದಿವೆ. ಇದರಲ್ಲಿ ಯಾದಗಿರಿ ಜಿಲ್ಲೆ ಒಂದರಲ್ಲೇ 245 ಜಾನುವಾರುಗಳು ಮರಣ ಹೊಂದಿವೆ. ಕಲಬುರಗಿ ಜಿಲ್ಲೆಯಲ್ಲಿ 27, ವಿಜಯಪುರದಲ್ಲಿ 3, ಬೀದರ್ ಜಿಲ್ಲೆಯಲ್ಲಿ 38 ಜಾನುವಾರುಗಳು ಮರಣ ಹೊಂದಿವೆ. ಈ ಪೈಕಿ 407 ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ ಎಂದರು.

ಮನೆ ಹಾನಿ:

547 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಇವುಗಳಿಗೆ ತಲಾ 1.20 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅನಧಿಕೃತವಾಗಿ ನಿರ್ಮಿಸಿದ್ದ 62 ಮನೆಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲಾಗಿದೆ.ಭಾಗಶಃ ಹಾನಿಯಾದ ಮನೆಗಳು (ಶೇ.50 ರಿಂದ 75). ಇವುಗಳಿಗೆ ತಲಾ 50 ಸಾವಿರ ರೂ.ಗಳ ಪರಿಹಾರ ವಿತರಿಸಲಾಗಿದೆ.ಶೇ.20ರಿಂದ 50ರಷ್ಟು ಹಾನಿಯಾದ ಮನೆಗಳ ಸಂಖ್ಯೆ 3166. ಶೇ.15ರಿಂದ 20ರಷ್ಟು ಹಾನಿಯಾಗಿದ್ದ 3881 ಮನೆಗಳಿಗೆ 6500 ರೂ. ಪ್ರಕಾರ ಪರಿಹಾರ ನೀಡಲಾಗಿದೆ.ಒಟ್ಟಾರೆ ಇದುವರೆಗೆ 23.12 ಕೋಟಿ ರೂ.ಗಳನ್ನು ಪರಿಹಾರವಾಗಿ ಮನೆಗಳನ್ನು ಕಳೆದುಕೊಂಡವರಿಗೆ ನೀಡಲಾಗಿದೆ.ಬಟ್ಟೆ ಮತ್ತು ಗೃಹ ಬಳಕೆ ವಸ್ತುಗಳನ್ನು ಕಳೆದುಕೊಂಡ 4858 ಕುಟುಂಬಗಳಿಗೆ ಈ ವರೆಗೆ 2.42 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ.ರಸ್ತೆ, ಸೇತುವೆ ಮುಂತಾದವುಗಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಸಮೀಕ್ಷೆ ಪೂರ್ಣಗೊಂಡು ವರದಿ ಬಂದ ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರತಿ ಕ್ಷೇತ್ರಕ್ಕೆ ವಿಶೇಷ ಅನುದಾನದ ರೂಪದಲ್ಲಿ 25 ರಿಂದ 50 ಕೋಟಿ ರೂ. ನೀಡಲಾಗಿದೆ ಎಂದರು.

Related Articles

Comments (0)

Leave a Comment