ಧರ್ಮಸ್ಥಳ ವಿಚಾರದಲ್ಲಿ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತಂದ ಸಿಎಂ ನಾಡಿನ ಕ್ಷಮೆ ಕೇಳಬೇಕು: ವಿಜಯೇಂದ್ರ ಆಗ್ರಹ
- by Suddi Team
- September 25, 2025
- 82 Views
ಬೆಂಗಳೂರು: ಎಸ್ಐಟಿ ರಚನೆ ಬೇಡಿಕೆ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ; ಬದಲಾಗಿ ವಸೂಲಾತಿ, ಅವರವರ ವೈಯಕ್ತಿಕ ಹಿತಾಸಕ್ತಿ ಇದೆ ಎಂದು ಸರ್ವೋಚ್ಚ ನ್ಯಾಯಾಲಯವು ಮೇ ತಿಂಗಳಿನಲ್ಲೇ ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಮುಚ್ಚಿಟ್ಟು, ಆ ಬುರುಡೆ ಗ್ಯಾಂಗಿನವರು ಎಸ್ಐಟಿ ರಚಿಸಲು ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದರು.ಅದನ್ನು ಸಿಎಂ ಪರಿಗಣಿಸಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರನ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಾಡಿನ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಬಿಜೆಪಿ ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಅವರ ಜೊತೆ ಇಂದು ಬೆಂಗಳೂರಿನ ಜೆ.ಪಿ. ನಗರದ, ರಾಗಿಗುಡ್ಡ ಬಳಿಯ ವಾರ್ಡ್ ನಂ.177, ಬೂತ್ ನಂ.155 ರ ಅಧ್ಯಕ್ಷ ಬಿ. ರವಿ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವ ಅಯೋಗ್ಯರ ಮಾತಿನನ್ವಯ ಮುಖ್ಯಮಂತ್ರಿಗಳು ಇಂಥ ದೊಡ್ಡ ನಿರ್ಧಾರ ಪ್ರಕಟಿಸಿದರು? ಎಸ್ಐಟಿ ರಚನೆ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಅಪಪ್ರಚಾರ ನಡೆದಿದೆ? ಇದಕ್ಕೆ ರಾಜ್ಯದ ಮುಖ್ಯಮಂತ್ರಿಗಳೇ ಉತ್ತರ ನೀಡಬೇಕೆಂದು ಆಗ್ರಹಿಸಿದರು.
ಬಿಜೆಪಿ ಧರ್ಮಸ್ಥಳ ಚಲೋ ಮಾಡಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಅಲ್ಲಿ ಬಂದಿದ್ದರು. ರಾಜ್ಯ ಸರಕಾರ ಎಸ್ಐಟಿ ರಚಿಸಿದ್ದನ್ನು ನಾವು ಸ್ವಾಗತಿಸಿದ್ದು ನಿಜ. ದುರುದ್ದೇಶದಿಂದ ಮಾಡಿದ ದೂರಿನ ವಿಚಾರ ಬಯಲಿಗೆ ಬರಬೇಕೆಂಬ ಆಶಯ ನಮ್ಮದಾಗಿತ್ತು ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಇಷ್ಟೆಲ್ಲ ಅಪಪ್ರಚಾರ ನಡೆದರೂ ಎಸ್ಐಟಿ ನೆಪ ಮಾಡಿಕೊಂಡು ರಾಜ್ಯ ಸರಕಾರ ಬಾಯಿ ಮುಚ್ಚಿಕೊಂಡು ಕೂತಿತ್ತಲ್ಲವೇ? ಈ ಷಡ್ಯಂತ್ರವನ್ನು ಈ ಅಯೋಗ್ಯ ಕಾಂಗ್ರೆಸ್ ಸರಕಾರಕ್ಕೆ ಅರ್ಥ ಮಾಡಿಕೊಳ್ಳಲು ಆಗಿಲ್ಲವಲ್ಲವೇ? ಇದು ರಾಜ್ಯದ ದುರಂತ ಎಂದು ಹೇಳಿದರು.
ಬುರುಡೆ ಗ್ಯಾಂಗ್ ಪೈಸಾ ವಸೂಲಾತಿಗೆ ಧರ್ಮಸ್ಥಳದ ವಿಷಯದಲ್ಲಿ ಎಸ್ಐಟಿ ರಚಿಸಲು ಕೋರಿ ಅರ್ಜಿ ಹಾಕಿದ್ದಾಗಿ ನ್ಯಾಯಾಲಯಕ್ಕೆ ಅನಿಸಿತ್ತು. ಇದರ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ; ಬದಲಾಗಿ ವಸೂಲಾತಿ, ಅವರವರ ವೈಯಕ್ತಿಕ ಹಿತಾಸಕ್ತಿ ಇದರ ಹಿಂದಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಮೇ ತಿಂಗಳಿನಲ್ಲೇ ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಮುಚ್ಚಿಟ್ಟು, ಆ ಬುರುಡೆ ಗ್ಯಾಂಗಿನವರು ಎಸ್ಐಟಿ ರಚಿಸಲು ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದರು. ಬುರುಡೆ ಗ್ಯಾಂಗನ್ನು ಬದಿಗಿಡಿ; ಇದರ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ; ವಸೂಲಾತಿ ವಿಚಾರ ಸುಪ್ರೀಂ ಕೋರ್ಟಿಗೆ ಅನಿಸಿತ್ತಾದರೆ, ಈ ರಾಜ್ಯದ ಮುಖ್ಯಮಂತ್ರಿಗೆ ಯಾಕೆ ಅನಿಸಿಲ್ಲ ಎಂದು ಕೇಳಿದರು.
ಯಾವನೋ ಬೀದಿಯಲ್ಲಿ ಹೋಗುವವನು ಬಂದು ಹೇಳಿಕೆ ನೀಡುತ್ತಾನೆ; ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಾನೆ, ಮಾಧ್ಯಮಗಳಲ್ಲಿ ಬಂದ ಹೇಳಿಕೆಯನ್ನು ಆಧಾರವಾಗಿ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಧರ್ಮಸ್ಥಳದ ಕೋಟ್ಯಂತರ ಭಕ್ತರ ಸಾಧಕ ಬಾಧಕಗಳು, ದೂರುದಾರನ ಗುರಿಯನ್ನು ಅರ್ಥ ಮಾಡಿಕೊಳ್ಳದೇ ಏಕಾಏಕಿ ಎಸ್ಐಟಿ ರಚಿಸಿದ್ದಾರೆ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿಗಳು ರಾತ್ರಿ ಯಾವುದೇ ಕಾರಣಕ್ಕೆ ಎಸ್ಐಟಿ ರಚನೆ ಇಲ್ಲ ಎಂದಿದ್ದರು. ಮರುದಿನ, ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿಗಳಿಗೆ ಎಸ್ಐಟಿ ರಚಿಸಬೇಕು ಎಂದು ಅನಿಸುತ್ತದೆ ಎಂದು ಟೀಕಿಸಿದರು.
ಜಾತಿ ಸಮೀಕ್ಷೆ ಸಂಬಂಧ ಮಧ್ಯಂತರ ಆದೇಶವನ್ನು ರಾಜ್ಯದ ಹೈಕೋರ್ಟ್ ಇವತ್ತು ನೀಡಿದೆ. ಯಾವುದೇ ತಡೆ ನೀಡುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ರಾಜ್ಯ ಸರಕಾರದ ಕುಮ್ಮಕ್ಕಿನಿಂದ ಹಿಂದೂ ಸಮಾಜವನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ; ಇದು ಅಕ್ಷಮ್ಯ ಅಪರಾಧ ಎಂದು ಆರೋಪಿಸಿದರು. ರಾಜ್ಯಕ್ಕೆ ಜಾತಿ ಜನಗಣತಿ ಅಧಿಕಾರ ಇಲ್ಲದೇ ಇದ್ದರೂ ಮುಖ್ಯಮಂತ್ರಿಗಳು, ಹಠ ಮಾಡಿ ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದು ದುರಂತ; ರಾಜ್ಯಕ್ಕೆ ಮಾಡಿದ ಅನ್ಯಾಯ ಎಂದು ದೂರಿದರು.
ನಿಮಗೆ ಮೇಯಲು ಕೇಂದ್ರದಿಂದ ಅನುದಾನ ಬೇಕೇ ಎಂದು ಕೇಳಿದರು. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿವೆ. ರಾಜ್ಯದಲ್ಲಿ ಇವರೇನು ಅಭಿವೃದ್ಧಿ ಮಾಡಿದ್ದಾರೆ ಎಂದು ಕೇಳಿದರು. ಇದ್ದಂತ ಹಣವನ್ನು ಲೂಟಿ ಮಾಡಿದ್ದಾರೆ. ಎಸ್ಟಿ ಅಭಿವೃದ್ಧಿ ನಿಗಮದ ಹಗರಣ ಮಾಡಿ, ನಿಮ್ಮ ಸಚಿವರು ರಾಜೀನಾಮೆ ಕೊಟ್ಟು ಜೈಲಿಗೆ ಹೋಗಿದ್ದಾರೆ. ಬಡವರು, ಪರಿಶಿಷ್ಟ ಜಾತಿ, ಪಂಗಡಕ್ಕೆ ಅನ್ಯಾಯ ಮಾಡುತ್ತ ಇದ್ದೀರಿ. ಹಣ ಪಾವತಿಸುತ್ತಿಲ್ಲ ಎಂದು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳೂ ನಡೆಯುತ್ತಿವೆ. ಅಭಿವೃದ್ಧಿ ಮಾಡಲು ಕಾಂಗ್ರೆಸ್ ಸರಕಾರಕ್ಕೆ ಯೋಗ್ಯತೆ ಇಲ್ಲ; ಅನುದಾನದ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
Related Articles
Thank you for your comment. It is awaiting moderation.


Comments (0)