ಯುವ ಶಕ್ತಿ ದೇಶದ ಬಲು ದೊಡ್ಡ ಶಕ್ತಿ; ಶ್ರೀ ರಂಭಾಪುರಿ ಜಗದ್ಗುರುಗಳು

ಬಸವಕಲ್ಯಾಣ:ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ.ಪೂರ್ವಜರ ಅನುಭವದ ನುಡಿಗಳು ಯುವ ಜನಾಂಗಕ್ಕೆ ಅಮೂಲ್ಯ ಸಂಪತ್ತು, ಯುವಶಕ್ತಿ ದೇಶದ ಬಲು ದೊಡ್ಡ ಶಕ್ತಿ ಮತ್ತು ಆಸ್ತಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಮಂಗಳವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 2ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು,ಮನುಷ್ಯನಲ್ಲಿರುವ ಅಸುರೀ ಗುಣಗಳು ನಾಶವಾಗಿ ದೈವಿ ಗುಣಗಳು ಬಲಗೊಳ್ಳಬೇಕು. ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸುವುದೇ ನಿಜವಾದ ಧರ್ಮ, ಜನ ಮನ ಜಾಗೃತಿಗೊಳಿಸಲು ಧರ್ಮ ಬೇಕು. ಗುರು ಮಾರ್ಗದರ್ಶನ ಪಡೆಯಲು ಭಾಗ್ಯ ಬೇಕು. ಮನುಷ್ಯನ ಬುದ್ದಿ ವಿಕಾರಗೊಳ್ಳುವುದರ ಬದಲು ವಿಕಾಸಗೊಂಡರೆ ನಾಡು ನುಡಿ-ಸಂಸ್ಕೃತಿ ಪರಂಪರೆಗಳ ಬೆಳವಣಿಗೆ ಸಾಧ್ಯ ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಪ್ರಗತಿಪರವಾದ ಧೈಯೋದ್ದೇಶಗಳು ಮಾನವನ ಶ್ರೇಯಸ್ಸಿಗೆ ದಾರಿದೀಪ, ಮನುಷ್ಯ ತಿಳಿದಿರುವುದಕ್ಕಿಂತ ತಿಳಿಯಬೇಕಾದದು ಬಹಳಷ್ಟಿದೆ. ತನಗಾಗಿ ಬಯಸುವುದು ಜೀವ ಗುಣ. ಎಲ್ಲರಿಗಾಗಿ ಬಯಸುವುದು ದೇವಗುಣ, ಬೆಳೆಯುವ ಯುವಜನಾಂಗಕ್ಕೆ ಇತಿಹಾಸದ ಅರಿವು ಮುಖ್ಯ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು, ಬೆಳೆಯುವ ಯುವಜನಾಂಗದಲ್ಲಿ ವೈಚಾರಿಕ ಮನೋಭಾವನೆಗಳು ಬೆಳೆದು ಬರಲಿ ಆದರೆ ನಾಸ್ತಿಕ ಭಾವನೆಗಳು ಬೆಳೆಯಬಾರದು. ಯುವಜನಾಂಗಕ್ಕೆ ಅದರ್ಶ ಗುರಿ ಮತ್ತು ಧೈಯವಿದ್ದರೆ ಜೀವನದಲ್ಲಿ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ‘ರಂಭಾಪುರಿ ಯುವಸಿರಿ’ ಪ್ರಶಸ್ತಿ ಪುರಸ್ಕೃತರಾದ ಲಾಡವಂತಿ ಗ್ರಾಮದ ವಿಶ್ವಜಿತ ತಾತೇರಾವ ಡವಳಿಯವರ ಜೀವನವೇ ಇದಕ್ಕೊಂದು ನಿದರ್ಶನ. ಅವರ ಜೀವನದ ಸಾಧನೆ ಮತ್ತು ಪ್ರಯತ್ನ ಯುವ ಜನಾಂಗಕ್ಕೆ ಮಾದರಿ, ನವರಾತ್ರಿಯ ಎರಡನೇ ದಿನದಂದು ದೇವಿಯು ಬ್ರಹ್ಮಚಾರಿಣೆ ಸ್ವರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಬ್ರಹ್ಮಚಾರಿಣಿ ದೇವಿ ಆರಾಧನೆಯಿಂದ ಮನಸ್ಸು ದೇಹ ಮತ್ತು ಇಂದ್ರಿಯಗಳ ಮೇಲೆ ಪ್ರಭುತ್ವ ಸಾಧಿಸುವ ಶಕ್ತಿ ಬರುತ್ತದೆ. ಕಷ್ಟಕಾಲದಲ್ಲಿ ಮಾನಸಿಕ ಸಮತೋಲನ ಮತ್ತು ಆತ್ಮ ವಿಶ್ವಾಸ ಉಳಿಸಿಕೊಳ್ಳಲು ನೆರವಾಗುತ್ತದೆ ಎಂದರು.

ಬೆಳಗುಂಪಾ ಹಿರೇಮಠದ ಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಅಜ್ಞಾನದಲ್ಲಿ ಮಲಗಿದ ಜನರನ್ನು ಎಚ್ಚರಿಸಲು ಕಾಲ ಕಾಲಕ್ಕೆ ಆಚಾರ್ಯರು ಋಷಿಮುನಿಗಳು, ಶರಣ ಸಂತ ಮಹಂತರು ಅವತರಿಸಿ ಬಾಳಗೆ ಬೆಳಕು ತೋರಿದ್ದಾರೆ. ದೈವೀ ಗುಣಗಳ ಬೆಳೆಗೆ ಸುಜ್ಞಾನವೇ ಭೂಮಿಯಾದರೆ ಅಸುರೀ ಗುಣಗಳಿಗೆ ಅಜ್ಞಾನವೇ ಭೂಮಿಯಾಗಿದೆ. ಸತ್ಯ ಶುದ್ಧವಾದ ಜೀವನ ಮೌಲ್ಯಗಳನ್ನು ಪರಿಪಾಲಿಸಿಕೊಂಡು ಯುವ ಜನಾಂಗ ಬೆಳೆದರೆ ಬೆಲೆ ಮತ್ತು ನೆಲೆ ಪ್ರಾಪ್ತವಾಗುತ್ತದೆ. ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆ ಜಾಗೃತಗೊಳ್ಳಬೇಕು ಎಂದರು.

ಹುಡಗಿ ಸಂಸ್ಥಾನ ಹಿರೇಮಠದ ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಸಮ್ಮುಖ ವಹಿಸಿದ ಶ್ರೀನಿವಾಸ ಸರಡಗಿ ಡಾ.ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯ ಅರಿತು ಬಾಳುವುದರಲ್ಲಿ ಸುಖ ಶಾಂತಿಯಿದೆ. ಬದುಕಿನ ಉತ್ಕರ್ಷತೆ ಮತ್ತು ಶ್ರೇಯಸ್ಸಿಗೆ ಒಳ್ಳೆಯವರ ನೆರಳಿನಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುವುದು. ದುರ್ಜನರ ಒಡನಾಟದಲ್ಲಿ ಬಾಳಿದರ ಬದುಕು ಸರ್ವ ನಾಶವಾಗುತ್ತದೆ ಎಂದು ಎಚ್ಚರಿಸಿದರು.

ಪ್ರಾಸ್ತಾವಿಕ ಮಾತನಾಡಿದ ಚಿಣಮಗೇರಿಯ ವೀರಮಹಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಗುಣವಿಲ್ಲದ ರೂಪ, ಶೀಲವಿಲ್ಲದವನ ಕುಲ, ಸಿದ್ದಿ ಪಡೆಯದವನ ವಿದ್ಯೆ, ಅನುಭವಿಸದೇ ಇರುವ ಸಂಪತ್ತು ವ್ಯರ್ಥ, ಹುಟ್ಟು ಸಾವುಗಳ ದುಃಖದಿಂದ ಪಾರು ಮಾಡುವ ವಿದ್ಯೆಯೇ ನಿಜವಾದ ವಿದ್ಯೆಯೆಂದರು.

ಪ್ರಶಸ್ತಿ ಪ್ರದಾನ: ಲಾಡವಂತಿಯ ವಿಶ್ವಜಿತ ತಾತೇರಾವ ಢವಳೆ ಇವರಿಗೆ ‘ರಂಭಾಪುರಿ ಯುವಸಿರಿ’ ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು. ತ್ರಿಪುರಾಂತಕದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು.

ಬೀದರ ಲೋಕಸಭಾ ಕ್ಷೇತ್ರದ ಸಂಸದ ಸಾಗರ ಖಂಡ್ರೆ ಶ್ರೀ ರಂಭಾಪುರಿ ಜಗದ್ಗುರುಗಳವರ ದಸರಾ ಧರ್ಮ ಸಮಾರಂಭ ಯುವಕರಿಗೆ ಮಾರ್ಗದರ್ಶನ ನೀಡುತ್ತ ಬಂದಿದೆ. ಯುವಕರೂ ಸಹ ಸಂಸ್ಕಾರವಂತರಾಗಬೇಕು. ಪ್ರತಿಯೊಬ್ಬರೂ ಸಹೋದರ ಭಾವದಿಂದ ಬಾಳಿದಾಗ ಸಮಾಜದಲ್ಲಿ ಸದ್ಭಾವನೆ ಬೆಳೆಯಲು ಸಾಧ್ಯವೆಂದರು.

ಮಾಜಿ ಎಮ್.ಎಲ್.ಸಿ. ವಿಜಯಸಿಂಗ ಧರ್ಮಸಿಂಗ, ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ, ಕೆ.ಪಿ.ಸಿ.ಸಿ. ಸಹಕಾರ ವಿಭಾಗದ ಅಧ್ಯಕ್ಷ ಧನರಾಜ ತಾಳಂಪಳ್ಳಿ, ಬೀದರ ಕೆಪಿಸಿಸಿ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಸವಕಲ್ಯಾಣದ ಆನಂದ ದೇವಪ್ಪ, ಬಸವರಾಜ ಸ್ವಾಮಿ ವಿಶ್ವ

ಡೆವಲಪರ, ಅರ್ಜುನ ಕನಕ, ಮನೋಹರ ಮೈಸೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗೌರವ ಗುರುರಕ್ಷೆ : ಡೋಂಗರಗಾಂವ ರೇಣುಕಾಶ್ರಮದ ಉದಯ ರಾಜೇಂದ್ರ ಶಿವಾಚಾರ್ಯರು, ಚಿಟಗುಪ್ಪ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಮುತ್ಯಾನ ಬಬಲಾದನ ಗುರುಪಾದಲಿಂಗ ಸ್ವಾಮಿಗಳು, ಕಿಟ್ಟಾ ಸಂಸ್ಥಾನ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ಕಲಬುರ್ಗಿಯ ಗಿರಿಯಪ್ಪ ಮುತ್ಯಾ ಗಣೇಶ, ಶ್ರೀನಿವಾಸ ಸರಡಗಿಯ ಅಪ್ಪರಾವ ದೇವಿಮುತ್ಯಾ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗೌರವ ಗುರುರಕ್ಷೆ ನೀಡಿ ಆಶೀರ್ವದಿಸಿದರು.

 

Related Articles

Comments (0)

Leave a Comment