ಬಸವಕಲ್ಯಾಣದಲ್ಲಿ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನಕ್ಕೆ ಚಾಲನೆ

ಬಸವಕಲ್ಯಾಣ:ಭಾರತೀಯ ಸಂಸ್ಕೃತಿ ಉತ್ಕೃಷ್ಟವಾದುದು. ಆಧುನಿಕತೆಯ ಹೆಸರಿನಲ್ಲಿ ಸಂಸ್ಕೃತಿ ಸಭ್ಯತೆ ನಾಶಗೊಳ್ಳಬಾರದು.ಆದರ್ಶ ಸಂಸ್ಕೃತಿ ಮತ್ತು ಪರಂಪರೆ ಮೌಲ್ಯಾಚರಣೆಯಿಂದ ಜಗದಲ್ಲಿ ಶಾಂತಿ ನೆಲೆಗೊಳ್ಳಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು,ಭಾರತೀಯ ಭವ್ಯ ಪರಂಪರೆಯಲ್ಲಿ ಶರನ್ನವರಾತ್ರಿ ನಾಡಹಬ್ಬಕ್ಕೆ ಬಹು ದೊಡ್ಡ ಮಹತ್ವವಿದೆ. ಶಿವನ ಆರಾಧನೆ ಎಷ್ಟು ಪ್ರಾಚೀನವೋ ಅಷ್ಟೇ ಶಕ್ತಿ ಆರಾಧನೆ ಪ್ರಾಚೀನವಾಗಿದೆ. ವೀರಶೈವ ಧರ್ಮದಲ್ಲಿ ಶಿವಶಕ್ತಿಯನ್ನು ಒಂದಾಗಿಸಿ ಆರಾಧಿಸುವ ಸಂಪ್ರದಾಯವಿದೆ. ಶಿವನ ಬಿಟ್ಟು ಶಕ್ತಿ, ಶಕ್ತಿ ಬಿಟ್ಟು ಶಿವನಿಲ್ಲ, ಶಕ್ತಿಯುಕ್ತ ಪರಮಾತ್ಮನನ್ನು ಪೂಜಿಸುವುದನ್ನು ಕಾಣುತ್ತೇವೆ. ಶರತ್ ಋತುವಿನಲ್ಲಿ ನವರಾತ್ರಿ ಬರುವುದರಿಂದ ಇದನ್ನು ಶರನ್ನವರಾತ್ರಿ ಎಂದು ಕರೆದಿದ್ದಾರೆ. ಪೂರ್ವ ಕಾಲದಲ್ಲಿ ನವರಾತ್ರಿ ದಸರಾ ಹಬ್ಬವನ್ನು ರಾಜ ಮಹಾರಾಜರು ಪ್ರಜೆಗಳ ಒಳಿತಿಗಾಗಿ ಶಕ್ತಿ ಮಾತೆಯನ್ನು ಪೂಜಿಸುತ್ತಾ ಬಂದ ಇತಿಹಾಸವಿದೆ. ಮೈಸೂರಿನಲ್ಲಿ ಅರಮನೆಯ ದಸರಾ ನಡೆದರೆ ಬಸವಕಲ್ಯಾಣದಲ್ಲಿ ಗುರು ಮನೆಯ ದಸರಾ ಮಹೋತ್ಸವ ಜರುಗುತ್ತಿರುವುದು ಸಂತೋಷದ ಸಂಗತಿ ಎಂದರು.

ನವರಾತ್ರಿಯಲ್ಲಿ ದೇವಿಯನ್ನು ಮೂರು ಸ್ವರೂಪದಲ್ಲಿ ಪೂಜಿಸುತ್ತಾ ಬರುತ್ತಾರೆ. ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ಸ್ವರೂಪದಲ್ಲಿ ಆರಾಧಿಸುವ ಸಂಪ್ರದಾಯವಿದೆ. ತೇಜಸ್ಸು ಮತ್ತು ಶಕ್ತಿ ನೀಡುವವಳು ಮಹಾಕಾಳಿ, ನಮಗೆ ಸಂಪತ್ತು ನೀಡುವವಳು ಮಹಾಲಕ್ಷ್ಮಿ, ಜ್ಞಾನವನ್ನು ನೀಡುವವಳು ಮಹಾಸರಸ್ವತಿ ದೇವಿಯು. ಎಷ್ಟೇ ಅವತಾರ ತಾಳಿದರೂ ಕೊನೆಯಲ್ಲಿ ಆದಿಶಕ್ತಿಯಾಗಿಯೇ ಉಳಿಯುತ್ತಾಳೆ. ನವರಾತ್ರಿಯ ಮೊದಲ ದಿನ ದೇವಿಯನ್ನು ಶೈಲಪುತ್ರಿ ನಾಮಾಂಕಿತದಲ್ಲಿ ಪೂಜಿಸುತ್ತಾರೆ. ಶೈಲಪುತ್ರಿ ಆರಾಧನೆಯಿಂದ ಜೀವನದಲ್ಲಿ ಅಡೆತಡೆ ಅಪಶಕುನಗಳು ಮತ್ತು ಕೆಟ್ಟ ಪರಿಣಾಮಗಳು ಉಂಟಾಗುವುದಿಲ್ಲ. ನವರಾತ್ರಿಯಲ್ಲಿ ನವಶಕ್ತಿ ಆರಾಧನೆ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಶ್ರೀ ರಂಭಾಪುರಿ ಧರ್ಮ ಪೀಠದಿಂದ ಸಂಸ್ಕೃತಿ ಸಾಮರಸ್ಯ ಸೌಹಾರ್ದತೆ, ರಾಷ್ಟ್ರಭಕ್ತಿ ಧರ್ಮಶ್ರದ್ಧೆ ಬೆಳೆದು ಬರುವ ಉದ್ದೇಶದಿಂದ ನಾಡಿನ ನಾನಾ ಭಾಗಗಳಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವ ನಡೆದುಕೊಂಡು ಬರುತ್ತಿದೆ. ಬಸವಕಲ್ಯಾಣದಲ್ಲಿ ಪ್ರಾರಂಭಗೊಂಡಿರುವ ಶರನ್ನವರಾತ್ರಿ ದಸರಾ ನಾಡಹಬ್ಬ ಈ ಹಿಂದಿನ ಎಲ್ಲ ದಸರಾ ದಾಖಲೆಗಳನ್ನು ಮೀರಿ ಬಹು ಸಂಭ್ರಮದಿಂದ ಜರುಗುವುದೆಂಬ ಆತ್ಮ ವಿಶ್ವಾಸ ನಮಗಿದೆ ಎಂದು ಹರುಷ ವ್ಯಕ್ತಪಡಿಸಿದರು.

ಸಮಾರಂಭ ಉದ್ಘಾಟಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ-ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಬಹಳಷ್ಟು ಮಹತ್ವದ ಸ್ಥಾನ ಕಲ್ಪಿಸಿದ್ದಾರೆ. ಹಬ್ಬಗಳು ಜನಮನದ ಮೇಲೆ ಆಗಾಧವಾದ ಪರಿಣಾಮವನ್ನು ಬೀರುತ್ತವೆ. ಶ್ರೀ ರಂಭಾಪುರಿ ಪೀಠದ ದಸರಾ ಮಹೋತ್ಸವ ಮೈಸೂರಿನ ದಸರಾ ಮಹೋತ್ಸವದಷ್ಟೇ ಪ್ರಖ್ಯಾತಿ ಪಡೆದಿದೆ. ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದರೆ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾದಲ್ಲಿ ನಾಡಿನ ಸಂಸ್ಕೃತಿ ಪರಂಪರೆ ಹಲವಾರು ಚಿಂತನಪರವಾದ ಕಾರ್ಯಕ್ರಮಗಳು ಜರುಗುತ್ತಿವೆ. ಈ ಭಾಗದ ಭಕ್ತರ ಬಹುದಿನದ ಕನಸು ಇಂದು ನನಸಾದ ದಿನವಾಗಿದೆ. ಈ ಹತ್ತು ದಿನಗಳ ಕಾಲ ಜರುಗಲಿರುವ ದಸರಾ ಮಹೋತ್ಸವದಿಂದ ಮನುಷ್ಯ ಸನ್ಮಾರ್ಗದಲ್ಲಿ ನಡೆದು ಆದರ್ಶ ಸತ್ಪಜೆಯಾಗಬೇಕು. ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಬೆಳೆದು ಬರಬೇಕು. ನಾಡಿನ ರೈತರ ಬದುಕು ಹಸನಗೊಳ್ಳಬೇಕು. ಯುವ ಪೀಳಿಗೆಯ ಮೇಲೆ ಹೆಚ್ಚು ಜವಾಬ್ಬರಿ ಇದ್ದು ಯುವಕರು ಸನ್ಮಾರ್ಗದಲ್ಲಿ ನಡೆಯುವಂತಾಗಲೆಂದರು.

ಅರಣ್ಯ ಪರಿಸರ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಸವಕಲ್ಯಾಣ ಶರನ್ನವರಾತ್ರಿ ದಸರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಈಶ್ವರ ಖಂಡ್ರೆ ಶ್ರೀ ರಂಭಾಪುರಿ ಜಗದ್ಗುರುಗಳ ಭಾವಚಿತ್ರ ಬಿಡುಗಡೆ ಮಾಡಿ ಮಾತನಾಡಿ ಭೂಮಿಯಲ್ಲಿ ಹಲವಾರು ಧರ್ಮಗಳು ಬೆಳೆದು ಬಂದಿವೆ. ಸಕಲರಿಗೂ ಒಳಿತನ್ನೇ ಬಯಸಿದ ವೀರಶೈವ ಲಿಂಗಾಯತ ಧರ್ಮ ಮಾನವೀಯ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಬಸವಣ್ಣನವರು ಈ ಧರ್ಮದ ಎರಡು ಕಣ್ಣು. ಆಚಾರ್ಯರ ತತ್ವ ಸಿದ್ಧಾಂತ ಮತ್ತು ಶರಣರ ಸಾಮಾಜಿಕ ಚಿಂತನ ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ. ಧರ್ಮ ಮತ್ತು ಗುರುವಿನಲ್ಲಿ ಶ್ರದ್ದೆಯಿಟ್ಟು ಸಂಸ್ಕಾರಯುಕ್ತ ವ್ಯಕ್ತಿಗಳಾಗಿ ಬಾಳಲು ಶ್ರಮಿಸಬೇಕೆಂದರು.

ನೇತೃತ್ವ ವಹಿಸಿದ ಸಮಿತಿಯ ಗೌರವಾಧ್ಯಕ್ಷರಾದ ಹಾರಕೂಡ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಮಾತನಾಡಿ ಕಲ್ಯಾಣ ಕರ್ನಾಟಕ ನಾಡಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಸಂಭ್ರಮದಿಂದ ಜರುಗುತ್ತಿರುವುದು ಈ ಭಾಗದ ಭಕ್ತರ ಭಕ್ತಿಯೇ ಕಾರಣವಾಗಿದೆ. ಶ್ರೀ ಪೀಠದ ಆದರ್ಶ ಪರಂಪರೆಯನುಸಾರ ದಸರಾ ಧರ್ಮ ಸಮ್ಮೇಳನ ಯಶಸ್ವಿಗಾಗಿ ನಾವುಗಳೆಲ್ಲರೂ ತನು ಮನ ಧನದಿಂದ ಸೇವೆ ಸಲ್ಲಿಸಿ ಗುರುಕಾರುಣ್ಯಕ್ಕೆ ಒಳಗಾಗಬೇಕೆಂದರು. ಸಮ್ಮುಖ ವಹಿಸಿದ ಅ.ಭಾ.ವೀ.ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಸಿಂದಗಿಯ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಈ ಅಪೂರ್ವ ಸಮಾರಂಭ ನೋಡಲು ಎರಡು ಕಣ್ಣು ಸಾಲುತ್ತಿಲ್ಲ. ಬಸವಕಲ್ಯಾಣ ನಗರದ ಭಕ್ತರ ಭಕ್ತಿಯೇ ಒಂದು ಶಕ್ತಿಯಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಪಡೆದ ತಾವೇ ಧನ್ಯರೆಂದರು.

ಹುಮನಾಬಾದ ಶಾಸಕ ಡಾ.ಸಿದ್ದಲಿಂಗ ಪಾಟೀಲ, ಪ್ರಭು ಚವ್ಹಾಣ ಮಾಜಿ ಸಚಿವರು ಮತ್ತು ಶಾಸಕರು ಔರಾದ(ಬಿ), ಡಾ. ಶೈಲೆಂದ್ರ ಬೆಲ್ದಾಳೆ ಶಾಸಕರು ಬೀದರ ದಕ್ಷಿಣ ಕ್ಷೇತ್ರ, ಮಾಜಿ ಸಂಸದ ಆಶೋಕ ಖೇಣಿ, ಸೋಮನಾಥ ಪಾಟೀಲ, ಡಿ.ಕೆ.ಸಿದ್ರಾಮ, ಚನ್ನಬಸವ ಬಳತೆ, ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಬಸವರಾಜ ಕೋರಕೆ, ರವಿ ಗಾಯಕವಾಡ ಅಧ್ಯಕ್ಷರು ಡಿ.ಎಸ್.ಎಸ್., ಉಪಸ್ಥಿತರಿದ್ದರು. ದಸರಾ ಸಮಿತಿಯ ಕಾರ್ಯಾಧ್ಯಕ್ಷ- ಶಾಸಕ ಶರಣು‌ಬಿ.ಸಲಗರ ಸರ್ವರನ್ನು ಸ್ವಾಗತಿಸಿದರು.

ಲಕ್ಷೇಶ್ವರದ ಡಾ.ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ “ಶರನ್ನವರಾತ್ರಿಯಲ್ಲಿ ಶಕ್ತಿ ಆರಾಧನೆಯ ಮಹತ್ವ” ಕುರಿತು ಉಪನ್ಯಾಸ ನೀಡಿದರು.

ಗೌರವ ಗುರುರಕ್ಷೆ: ಸಿದ್ದಲಿಂಗ ಶಿವಾಚಾರ್ಯರು ಹಿರೇಮಠ ಸಂಸ್ಥಾನ ಸದಲಾಪುರ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು ತೊನಸನಹಳ್ಳಿ, ಗುರುಲಿಂಗ ಶಿವಾಚಾರ್ಯರು ಹಿರೇಮಠ ಸಂಗೊಳ್ಳಿ ಹಾಗೂ ವಿಜಯಕುಮಾರ ಸ್ವಾಮಿಗಳು ವಿರಕ್ತಮಠ ತಾಂಬೋಳ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗೌರವ ಗುರುರಕ್ಷೆ ನೀಡಿ ಆಶೀರ್ವದಿಸಿದರು.

Related Articles

Comments (0)

Leave a Comment