ವಿದ್ಯುತ್ ದರ ಪರಿಷ್ಕರಣೆ ಮಾದರಿಯಲ್ಲಿ ಸರ್ಕಾರಿ ಬಸ್ ಪ್ರಯಾಣ ದರ ಪರಿಷ್ಕರಣೆ;ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ರಚಿಸಿದ ಸರ್ಕಾರ
- by Suddi Team
- September 21, 2025
- 51 Views

ಬೆಂಗಳೂರು: ವಿದ್ಯುತ್ ದರ ಪರಿಷ್ಕರಣೆ ಮಾದರಿಯಲ್ಲಿಯೇ ಇನ್ಮುಂದೆ ರಾಜ್ಯದಲ್ಲಿ ಸರ್ಕಾರಿ ಬಸ್ ಪ್ರಯಾಣ ದರ ಪರಿಷ್ಕರಣೆಯಾಗಲಿದೆ.ಕಾಲ ಕಾಲಕ್ಕೆ ತಕ್ಕಂತೆ ಖರ್ಚು ವೆಚ್ಚಕ್ಕನುಸಾರವಾಗಿ ದರ ಪರಿಷ್ಕರಣೆ ಮಾಡುವ ಪದ್ದತಿ ಜಾರಿಯಾಗುತ್ತಿದೆ.ಈ ಸಂಬಂಧ ಈಗಾಗಲೇ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ರಚಿಸಿರುವ ಅಧಿಸೂಚನೆಯೂ ಹೊಬಿದ್ದಿದೆ.
ಹೌದು,ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಮಾದರಿಯಲ್ಲಿ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ(PTFRC)ಯನ್ನು ರಚಿಸಿ ಆದೇಶ ಹೊರಡಿಸುವ ಮೂಲಕ ರಾಜ್ಯ ಸರ್ಕಾರವು ಸಾರಿಗೆ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಗೊಳಿಸಲು ಮಹತ್ವದ ಹೆಜ್ಜೆಯಿಟ್ಟಿದೆ.ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ವೈಜ್ಞಾನಿಕವಾಗಿ ಪ್ರಯಾಣ ದರ ಹೆಚ್ಚಿಸುವ ಸಲುವಾಗಿ ಈ ಹಿಂದೆ ಯಾವುದೇ ಸಮಿತಿಗಳು ರಚನೆಯಾಗಿರುವುದಿಲ್ಲ. ರಾಜಕೀಯ ಇಚ್ಛಾಶಕ್ತಿಗಳಿಂದ ಪ್ರಯಾಣ ದರವನ್ನು ಏರಿಕೆ ಮಾಡುವುದಿಲ್ಲ.ಕಾಲಕಾಲಕ್ಕೆ ಹೆಚ್ಚಳವಾಗುವ ಡೀಸೆಲ್ ಬೆಲೆ ಮತ್ತು ಇತರೆ ವೆಚ್ಚವನ್ನು ಸರಿದೂಗಿಸಲು ಇಂತಿಷ್ಟು ದರ ಪರಿಷ್ಕರಣೆ ಅವಶ್ಯಕ. ಇಲ್ಲವಾದಲ್ಲಿ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿ, ಸದೃಢತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಸಮಿತಿ ರಚನೆಗೆ ಸರ್ಕಾರ ಕಾರಣ ತಿಳಿಸಿದೆ.
ಬಿ.ಎಂ.ಟಿ.ಸಿ 2014 ರಲ್ಲಿ , ಇತರೆ ಸಾರಿಗೆ ನಿಗಮಗಳಲ್ಲಿ 2020 ರಲ್ಲಿ ಪ್ರಯಾದ ದರ ಹೆಚ್ಚಳವಾಗಿತ್ತು. 2014 ರಲ್ಲಿನ ಪ್ರತಿದಿನ ಡೀಸೆಲ್ ವೆಚ್ಚ ರೂ.7 ಕೋಟಿ ಇದು 2025 ಕ್ಕೆ ರೂ.13 ಕೋಟಿಗೆ ಏರಿಕೆಯಾಗಿದೆ. 2014 ರಲ್ಲಿದ್ದ ಪ್ರತಿದಿನದ ಸಿಬ್ದಂದಿ ವೆಚ್ಚವು ರೂ. 6 ಕೋಟಿಯಿಂದ ರೂ.12 ಕೋಟಿಗೆ ಏರಿಕೆಯಾಗಿದೆ. ವೆಚ್ಚಗಳಲ್ಲಿ ಸುಮಾರು 100% ಏರಿಕೆಯಾಗಿರುವುದನ್ನು ಗಮನಿಸಬೇಕು. ಇದರೊಂದಿಗೆ 10 ಅಥವಾ 8 ವರ್ಷಗಳಿಗೊಮ್ಮೆ ಒಮ್ಮೆಲೇ ಹೆಚ್ಚು ದರ ಪರಿಷ್ಕರಣೆ ಸಾರ್ವಜನಿಕ ಪ್ರಯಾಣಿಕರಿಗೂ ಹೊರೆಯಾಗುತ್ತದೆ. ಕಾಲಕಾಲಕ್ಕೆ ಅತ್ಯಲ್ಪ ಪ್ರಯಾಣ ದರ ಏರಿಕೆಯು ವೈಜ್ಞಾನಿಕವಾಗಿ ಸಮಂಜಸವಾಗಿರುತ್ತದೆ. ರಾಜಕೀಯ ಇಚ್ಛಾಶಕ್ತಿಗಳಿಂದ ದೂರವಿರಿಸಿ, ಪ್ರಯಾಣ ದರ ನಿರ್ವಹಣಾ ಸಮಿತಿಯು ಕೆಇಆರ್ಸಿ ಮಾದರಿಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದರಿಂದ ಸಾರಿಗೆ ಸಂಸ್ಥೆಗಳನ್ನು ಬಲಪಡಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಕಾರಣಗಳಿಂದಾಗಿ, ಕರ್ನಾಟಕ ಮೋಟಾರು ವಾಹನ ನಿಯಮಗಳು, 1989 ರಡಿಯಲ್ಲಿ ರಾಜ್ಯ ಸರ್ಕಾರವು ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಎಂಬ ಸಮಿತಿಯನ್ನು ರಚಿಸಿರುತ್ತಿದೆ. ಇದು ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡಿರುತ್ತದೆ. ಅಧ್ಯಕ್ಷರು ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಕರ್ನಾಟಕದ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಾಗಿರಬೇಕು. ಇಬ್ಬರು ಸದಸ್ಯರಲ್ಲಿ ಒಬ್ಬರು ಕಾನೂನಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ನಿವೃತ್ತ ಪ್ರಧಾನ ಕಾರ್ಯದರ್ಶಿ ಅಥವಾ ಸರ್ಕಾರದ ಕಾರ್ಯದರ್ಶಿಯಾಗಿರಬೇಕು. ಇನ್ನೊಬ್ಬ ಸದಸ್ಯರು ಕೈಗಾರಿಕಾ ತಜ್ಞರು ಅಥವಾ ಹಣಕಾಸು ತಜ್ಞರಾಗಿರಬಹುದು. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸದಸ್ಯ- ಕಾರ್ಯದರ್ಶಿಯಾಗಿರುತ್ತಾರೆ ಎಂದು ತಿಳಿಸಲಾಗಿದೆ
ಸಮಿತಿಯ ಕಾರ್ಯಗಳು:
I. ಸಮಿತಿಯು ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಗಳನ್ನು ಅಧ್ಯಯನ ಮಾಡುತ್ತದೆ ಮತ್ತು ಕಾಲಕಾಲಕ್ಕೆ ವಿವಿಧ ದರಗಳ ಪರಿಷ್ಕರಣೆಯನ್ನು ಆಯಾ ರಸ್ತೆ ಸಾರಿಗೆ ನಿಗಮಕ್ಕೆ ಸೂಚಿಸುತ್ತದೆ.
II. ಹಣಕಾಸು ಮತ್ತು ಕಾರ್ಯಾಚರಣೆಯನ್ನು ಸುಧಾರಿಸಲು ದರಗಳ ಮೇಲೆ ವಿವಿಧ ಸರ್ ಚಾರ್ಜ್ ಗಳು, ಶುಲ್ಕಗಳನ್ನು ವಿಧಿಸಲು ಸಮಿತಿಯು ಸೂಚಿಸಬಹುದು.
ಸಮಿತಿಯು, ರಸ್ತೆ ಸಾರಿಗೆ ನಿಗಮಗಳಿಗೆ ನೀಡಲಾದ ಶಿಫಾರಸುಗಳ ಪ್ರತಿಯನ್ನು, ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮುಂದೆ ಮಂಡಿಸಲು ಸರ್ಕಾರಕ್ಕೆ, ಪ್ರತಿ ವರ್ಷ ಏಪ್ರಿಲ್ 1 ರ ನಂತರ ಸಾಧ್ಯವಾದಷ್ಟು ಬೇಗ ಮತ್ತು ಡಿಸೆಂಬರ್ 31 ರ ಒಳಗೆ ವಾರ್ಷಿಕ ವರದಿಯಾಗಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
Related Articles
Thank you for your comment. It is awaiting moderation.
Comments (0)