ಯುಕೆಪಿ 3; ಪರಿಹಾರ ಕುರಿತು ಸಚಿವ ಸಂಪುಟದಿಂದ ಮಹತ್ವದ ತೀರ್ಮಾನ

ಬೆಂಗಳೂರು: ಕೃಷ್ಣಾ ಮೇಲ್ದಂಡೆ 3 ನೇ ಯೋಜನೆಯ ಭೂಸ್ವಾಧೀನ ಪರಿಹಾರ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು,ಭೂ ಪರಿಹಾರ ಪ್ರಕಟಿಸಿದೆ.ನೀರಾವರಿ ಮತ್ತು ಖುಷ್ಕಿ ಭೂಮಿಗೆ ಪ್ರತ್ಯೇಕವಾಗಿ ಪರಿಹಾರ ನಿಗದಿಪಡಿಸಿ ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ವಿಶೇಷ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಭೂಪರಿಹಾರ ಕುರಿತು ರೈತರ ಬೇಡಿಕೆ,ಕೋರ್ಟ್ ತೀರ್ಪುಗಳು,ವಾಸ್ತವಿಕ ಸನ್ನಿವೇಶ ಎಲ್ಲವನ್ನೂ ಅವಲೋಕಿಸಿ ಅಂತಿಮವಾಗಿ ನೀರಾವರಿ ಜಮೀನಿಗೆ 40 ಲಕ್ಷ ಹಾಗು ಖುಷ್ಕಿ ಒಣಭೂಮಿಗೆ 30 ಲಕ್ಷ ಪರಿಹಾರ ನೀಡಿವ ನಿರ್ಧಾರ ಕೈಗೊಳ್ಳಲಾಯಿತು.

ಸಭೆ ನಂತರ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ,ಇಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ಈ  ಯೋಜನೆಗೆ ಸಂಬಂಧಿಸಿದಂತೆ ರೈತರು, ರೈತ ಹೋರಾಟ ಸಂಘಗಳು, ಸಂಬಂಧಪಟ್ಟ ಶಾಸಕರು, ಸಚಿವರೊಂದಿಗೆ ಚರ್ಚೆ ನಡೆಸಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಯೋಜನೆಗೆ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 40 ಲಕ್ಷ ರೂ, ಖುಷ್ಕಿ ಒಣಭೂಮಿಯ ಎಕರೆಯೊಂದಕ್ಕೆ 30 ಲಕ್ಷ ಪರಿಹಾರವನ್ನು ನೀಡಬೇಕೆಂದು ಸಚಿವ ಸಂಪುಟ ತೀರ್ಮಾನಿಸಿದೆ ಎಂದರು.

ಕಾಲುವೆ ನಿರ್ಮಾಣ: ನೀರಾವರಿ ಜಮೀನಿಗೆ 30 ಲಕ್ಷ: ಒಣಭೂಮಿಗೆ 25 ಲಕ್ಷ ಪರಿಹಾರ:

ಕಾಲುವೆ ತೋಡಲು ಸುಮಾರು 51,837 ಎಕರೆ  ಬೇಕಾಗಿದ್ದು, ಇದರಲ್ಲಿ 23631 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ನಡೆಸಿ, ಕಾಮಗಾರಿ ಕೈಗೊಳ್ಳಲಾಗಿದೆ.   ಕಾಲುವೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿದಂತೆ ಒಣಭೂಮಿಯ ಎಕರೆಯೊಂದಕ್ಕೆ 25 ಲಕ್ಷ ಹಾಗೂ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 30 ಲಕ್ಷ ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ. ಕಾಲುವೆ ನಿರ್ಮಾಣದಲ್ಲಿ ಜಮೀನು ಕಳೆದುಕೊಂಡವರು ಯೋಜನೆಯ ಫಲಾನುಭವಿಗಳಾಗುತ್ತಾರೆ ಎಂದರು.

ಜಲಾಶಯದ ಎತ್ತರವನ್ನು ಹೆಚ್ಚಿಸುವುದರಿಂದ  5.94 ಲಕ್ಷ ಹೆಕ್ಟೇರ್(ಸುಮಾರು 14 ರಿಂದ 15 ಲಕ್ಷ ಎಕರೆ) ಭೂಮಿಗೆ ನೀರಾವರಿ ಕಲ್ಪಿಸಬಹುದಾಗಿದೆ. 1,33,867 ಎಕರೆ ಜಮೀನು  ಯೋಜನೆಗೆ ಬೇಕಾಗಿದ್ದು, 75,563 ಎಕರೆ ಮುಳುಗಡೆಯಾಗಲಿದೆ 51,837 ಎಕರೆ ಕಾಲುವೆ ನಿರ್ಮಾಣಕ್ಕೆ ಬೇಕಾಗಿದೆ. ರೈತರ ಪುನರ್ವಸತಿ ಹಾಗೂ ಪುನರ್ವವ್ಯಸ್ಥೆ ಕಾರ್ಯಗಳಿಗೆ 6469 ಎಕರೆಗಳ ಅವಶ್ಯಕತೆಯಿದೆ.  ಇದರಿಂದ ಸುಮಾರು 20 ಗ್ರಾಮಗಳು , ಕೆಲವು ಪಟ್ಟಣ ವಾರ್ಡ್ ಗಳು ಮುಳುಗಡೆಯಾಗುತ್ತಿದ್ದು, ಒಟ್ಟು  1,33,867 ಎಕರೆಗೆ ಭೂಸ್ವಾಧೀನ ಪರಿಹಾರ ನೀಡುವ ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ ಪ್ರತಿವರ್ಷ ಸುಮಾರು 15 ರಿಂದ 20 ಸಾವಿರ ಕೋಟಿ ರೂಗಳ ವೆಚ್ಚ ಬರಲಿದೆ. ಒಟ್ಟಾರೆ ಈ ಯೋಜನೆಗೆ ಸುಮಾರು 70 ಸಾವಿರ ಕೋಟಿ ರೂ. ಗಳು ವೆಚ್ಚವಾಗುವ ಅಂದಾಜು ಇದೆ ಎಂದು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ವಿವರಿಸಿದರು.

Related Articles

Comments (0)

Leave a Comment