ಗಣೇಶ ಮೆರವಣಿಗೆ ದುರ್ಘಟನೆ;ಪರಿಹಾರ ಹೆಚ್ಚಳದ ಬಿಜೆಪಿ ಬೇಡಿಕೆ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ

ಹಾಸನ/ಮೈಸೂರು:ಗಣೇಶ ವಿಸರ್ಜನೆಯ ಮೆರವಣಿಗೆ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು ಎನ್ನುವ ಪ್ರತಿಪಕ್ಷ ನಾಯಕ ಆರ್‌.ಅಶೋಕ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪವಾಗಿ ತಳ್ಳಿಹಾಕಿದ್ದು,ಸರ್ಕಾರ ಸತ್ತವರ ಕುಟುಂಬದವರಿಗೆ ಪರಿಹಾರ ನೀಡುವುದು ಸಾವಿಗೆ ಸಮಾನ ಎಂದಲ್ಲ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮೊಸಳೆ ಹೊಸಹಳ್ಳಿಯ ಮೃತರ ಕುಟುಂಬಗಳ ನಿವಾಸಕ್ಕೆ ಭೇಟಿ ನೀಡಿದ ನಂತರ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್,ಈ ಘಟನೆಯಲ್ಲಿ ನಾನು ರಾಜಕಾರಣ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಕೇರಳಕ್ಕೂ ಕೆಲವು ದುರ್ಘಟನೆಯ ವೇಳೆ ಪರಿಹಾರ ನೀಡಿದೆ. ಆದ್ದರಿಂದ ತಲಾ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಿದರೆ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಈ ಕುರಿತು ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ. ಗಾಯಾಳುಗಳನ್ನು ಕೂಡ ಭೇಟಿಯಾಗಿ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವ ಬಗ್ಗೆ ಖಚಿತ ಮಾಡಿಕೊಳ್ಳುತ್ತೇನೆ ಎಂದರು.

ಮಾನವೀಯತೆ ದೃಷ್ಟಿಯಿಂದ ಹೆಚ್ಚು ಪರಿಹಾರ ನೀಡಬೇಕಾಗುತ್ತದೆ. ಬಡವರೇ ಇರುವುದರಿಂದ ಅಂಥವರಿಗೆ ಹೆಚ್ಚು ಪರಿಹಾರ ನೀಡುವುದು ಉತ್ತಮ. ಈ ದುರಂತದಲ್ಲಿ ಮಡಿದವರೆಲ್ಲರೂ ಯುವಕರೇ ಆಗಿದ್ದಾರೆ ಹಾಗೂ ಬಡವರಾಗಿದ್ದಾರೆ. ಎರಡು ಮನೆಗೆ ಹೋದಾಗ, ಆ ಕುಟುಂಬಕ್ಕೆ ಒಬ್ಬನೇ ಮಗ ಇರುವುದು ತಿಳಿಯಿತು. ಹಾಗೆಯೇ ಗಾಯಾಳುಗಳನ್ನು ಮಾತಾಡಿಸಿದಾಗ ಪರೀಕ್ಷೆ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು ಗಮನ ಕೊಡಬೇಕು. ಕೆಲವು ಕುಟುಂಬದವರು ಪರಿಹಾರ ಕಡಿಮೆ ಕೊಟ್ಟಿರುವುದರ ಬಗ್ಗೆ ಹೇಳಿದರು ಎಂದರು.

ಪರಿಹಾರ ಹೆಚ್ಚಳ ಸಾಧ್ಯವಿಲ್ಲ:

ಆದರೆ ಪ್ರತಿಪಕ್ಷ ನಾಯಕರ ಬೇಡಿಕೆಯನ್ನು ಸಿಎಂ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ.ಇದರಲ್ಲಿ ಸರ್ಕಾರದ ತಪ್ಪೇನಿಲ್ಲ,ಆದರೂ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ನೀಡಲಾಗಿದೆ.ಸರ್ಕಾರ ರಸ್ತೆ ಸುರಕ್ಷತಾ ಕಾನೂನು ಜಾರಿ ಮಾಡಿದ್ದು, ಸುರಕ್ಷತಾ ಕ್ರಮಗಳನ್ನು ಗಳನ್ನು ಕೈಗೊಂಡಿದೆ.  ಚಾಲಕರ ತಪ್ಪಿನಿಂದ ಅಪಘಾತವಾಗಿದೆ. ಅದಕ್ಕೆ ಸರ್ಕಾರ ಹೇಗೆ ಹೊಣೆಯಾಗಲು ಸಾಧ್ಯ? ಎಂದರು. ಮೃತರ ಕುಟುಂಬದವರಿಗೆ ಸಾವಿನ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಹಾಸನ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರಿಗೆ ಮೃತರ ಸಂಬಂಧಿಕರನ್ನು ಭೇಟಿ ಮಾಡಿ ಪರಿಹಾರ ಘೋಷಣೆ ಮಾಡುವಂತೆ   ಸೂಚಿಸಿದ್ದೇನೆ ಎಂದರು.

ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದೇ  ಪರಿಹಾರ ನೀಡಿದೆ:

ಸತ್ತವರು ಹೆಚ್ಚಾಗಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳಿದ್ದರು ಹಾಗಾಗಿ ಸರ್ಕಾರ ಹೆಚ್ಚಿನ ಪರಿಹಾರ ಒದಗಿಸುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಸರ್ಕಾರ  ಐದು ಲಕ್ಷ ಪರಿಹಾರ ನೀಡಿದೆ. ಮೃತರ ಕುಟುಂಬದವರು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದೇ  ಪರಿಹಾರ ನೀಡಿದೆ ಎಂದರು.

Related Articles

Comments (0)

Leave a Comment